ಮಕ್ಕಳೇ, ತ್ಯಾಗ ಮಾಡುವುದೆಂದರೆ ನಿಮ್ಮ ಪ್ರೀತಿಯ ವಸ್ತು, ಉದಾಹರಣೆಗಾಗಿ ತಿಂಡಿ ತಿನಿಸು ಇತ್ಯಾದಿ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡುವುದು. ಅಂದರೆ ಇನ್ನೊಬ್ಬರಿಗೆ ಕೊಡುವುದಕ್ಕಾಗಿ ನಿಮ್ಮ ಪ್ರೀತಿಯ ವಸ್ತುವನ್ನು ತ್ಯಾಗ ಮಾಡುವುದು. ಯಾರಿಗೆ ಈ ರೀತಿ ತ್ಯಾಗವನ್ನು ಮಾಡಲು ಸಾಧ್ಯವಾಗುವುದಿಲ್ಲವೋ, ಅವರನ್ನು ಸ್ವಾರ್ಥಿಯೆಂದು ಹೇಳುತ್ತಾರೆ. ಸ್ವಾರ್ಥ ವೃತ್ತಿಯು ಒಂದು ದೋಷವಾಗಿದೆ. ಈ ದೋಷವನ್ನು ನಾವು ಬಿಡಬೇಕು. ಸ್ವಾರ್ಥವನ್ನು ಕಡಿಮೆ ಮಾಡಲು ನಾವು ತ್ಯಾಗ ಮಾಡುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಸ್ವಾರ್ಥಿ ವ್ಯಕ್ತಿಯು ಇತರರಿಗೆ ಆಗುವ ಕಷ್ಟ ಅಥವಾ ದುಃಖದಿಂದ ದುಃಖಿತನಾಗುವುದಿಲ್ಲ, ಅವನು ಕೇವಲ ತನ್ನ ಸುಖದ ಕುರಿತು ವಿಚಾರ ಮಾಡುತ್ತಾನೆ. ಇದೇ ಸ್ವಾರ್ಥಿ ವೃತ್ತಿಯ ಕಾರಣ ಕಳ್ಳತನ, ಭ್ರಷ್ಟಾಚಾರ, ದೇಶದ್ರೋಹ ಇತ್ಯಾದಿ ದುರಭ್ಯಾಸಗಳು ಉತ್ಪನ್ನವಾಗುತ್ತವೆ.
ತ್ಯಾಗದ ಉದಾಹರಣೆಯನ್ನು ನಾವು ಮುಂದಿನ ಕಥೆಯಲ್ಲಿ ನೋಡೋಣ.
ಇದು ಬಹಳ ಹಿಂದಿನ ಘಟನೆಯಾಗಿದೆ. ವಿನೂ ಹೆಸರಿನ ಒಬ್ಬ ಬಾಲಕನು ಏಳನೇ ತರಗತಿಯಲ್ಲಿ ಕಲಿಯುತ್ತಿದ್ದನು. ವಿನೂವಿನ ಮನೆಯ ಎದುರಿಗೆ ಹಲಸಿನ ಹಣ್ಣಿನ ಒಂದು ಮರವಿತ್ತು. ಆ ಮರಕ್ಕೆ ಮೊದಲ ಬಾರಿಗೆ ಹಲಸು ಬಿಟ್ಟಿತ್ತು. ಸ್ವಲ್ಪ ದಿನಗಳ ಬಳಿಕ ಹಲಸಿನ ಕಾಯಿ ಹಣ್ಣಾಯಿತು. ಆಗ ವಿನೂವಿನ ತಾಯಿಯು ಹಲಸಿನ ಹಣ್ಣನ್ನು ಮರದಿಂದ ಕತ್ತರಿಸಿ ಅದರ ತೊಳೆಗಳನ್ನು ಬಿಡಿಸಿದಳು. ಬಳಿಕ ಅವಳು ವಿನೂವಿಗೆ ಐದು ದೊನ್ನೆಗಳನ್ನು (ಎಲೆಗಳಿಂದ ತಯಾರಿಸಿದ ಬಟ್ಟಲು) ಸಿದ್ಧಪಡಿಸಲು ಹೇಳಿದಳು. ಆ ಐದೂ ದೊನ್ನೆಗಳಲ್ಲಿ ಅವಳು ಹಲಸಿನ ಹಣ್ಣಿನ ಸ್ವಲ್ಪ ಸ್ವಲ್ಪ ತೊಳೆಗಳನ್ನು ಇಟ್ಟಳು. ವಿನೂವಿಗೆ ‘ತಾಯಿಯು ಮೊದಲ ದೊನ್ನೆಯನ್ನು ನನಗೇ ಕೊಡುವಳು’ ಎಂದೆನಿಸಿತು. ಆಗ ತಾಯಿಯು ‘ಈ ದೊನ್ನೆಯನ್ನು ಭಗವಂತನ ಎದುರಿಗೆ ಇಟ್ಟು ಭಗವಂತನಿಗೆ ನಮಸ್ಕರಿಸಿ ಬಾ’ ಎಂದು ಹೇಳಿದಳು. ವಿನೂ ಹಾಗೆಯೇ ಮಾಡಿದನು. ಅದರ ಬಳಿಕ ತಾಯಿಯು ‘ವಿನೂ, ಈ ಎರಡು ದೊನ್ನೆಗಳನ್ನು ಪಕ್ಕದ ಮನೆಗಳಲ್ಲಿರುವ ಚಿಕ್ಕಮ್ಮಂದಿರಿಗೆ ಕೊಟ್ಟು ಬಾ’ ಎಂದು ಹೇಳಿದಳು. ವಿನೂ ಪಕ್ಕದ ಮನೆಗಳಿಗೆ ಹೋಗಿ ಚಿಕ್ಕಮ್ಮಂದಿರಿಗೆ ಒಂದೊಂದು ದೊನ್ನೆಯನ್ನು ಕೊಟ್ಟು ಬಂದನು. ಆಗ ತಾಯಿಯು ಇನ್ನೊಂದು ದೊನ್ನೆಯನ್ನು ಓಣಿಯಲ್ಲಿರುವ ಅಜ್ಜಿಗೆ ಕೊಟ್ಟು ಬರುವಂತೆ ಹೇಳಿದಳು. ಅವರಿಗೆ ತಲುಪಿಸಿದ ಬಳಿಕ ವಿನೂ ಸ್ವಲ್ಪ ಕೋಪಗೊಂಡು ಮನೆಗೆ ಬಂದನು. ಅವನು ಬರುತ್ತಲೇ ತಾಯಿಯು ಕೊನೆಯ ದೊನ್ನೆಯಿಂದ ಒಂದು ತೊಳೆಯನ್ನು ವಿನೂವಿಗೆ ತಿನ್ನಿಸಿದಳು. ಆಗ ವಿನೂ ‘ಅಮ್ಮಾ, ನಮ್ಮ ಮನೆಯ ಹಲಸಿನ ಹಣ್ಣನ್ನು ಮೊದಲು ಬೇರೆಯವರಿಗೆ ಮತ್ತು ಕೊನೆಯಲ್ಲಿ ನನಗೆ ಹೀಗೇಕೆ ಮಾಡಿದೆ?’ ಎಂದು ಕೇಳಿದನು.
ಆಗ ತಾಯಿಯು ‘ವಿನೂ, ನಮಗೆ ಹಲಸಿನ ಹಣ್ಣನ್ನು ಯಾರು ನೀಡಿದರು? ಆ ಮರ. ಆ ಮರ ನಮ್ಮ ಬಾಗಿಲಿನ ಹತ್ತಿರ ಹೇಗೆ ದೊಡ್ಡದಾಯಿತು? ಆ ಭಗವಂತನೇ ದೊಡ್ಡದಾಗಿ ಮಾಡಿದನಲ್ಲವೇ? ಹಾಗಿರುವಾಗ ಕೇವಲ ನಾವೇ ಅದರ ಫಲವನ್ನು ತಿನ್ನಬೇಕೆ? ನಾವು ಎಲ್ಲ ವಸ್ತುಗಳನ್ನು ಹಂಚಿಕೊಂಡು ತಿನ್ನಬೇಕು’ ಎಂದು ಹೇಳಿದಳು. ವಿನೂವಿನ ತಲೆಯಲ್ಲಿ ಈ ಮಾತು ದೃಢವಾಯಿತು. ಆಗಿನಿಂದ ವಿನೂ ‘ನಾನು, ನನಗೆ, ನನ್ನದು’ ಎಂದು ಹೇಳುವುದನ್ನು ಬಿಟ್ಟು ಬಿಟ್ಟನು. ಇದೇ ವಿನೂ ದೊಡ್ಡವನಾದ ಮೇಲೆ ಆಚಾರ್ಯ ವಿನೋಬಾ ಭಾವೆಯ ಹೆಸರಿನಿಂದ ಪ್ರಸಿದ್ಧನಾದನು.
ಮಕ್ಕಳೇ, ತ್ಯಾಗ ಮಾಡುವ ಮಹತ್ವ ಏನಿದೆ?
೧. ತ್ಯಾಗ ಮಾಡುವುದರಿಂದ ಆನಂದ ಸಿಗುತ್ತದೆ. ಮಕ್ಕಳೇ, ಯಾವಾಗ ನಾವು ನಮ್ಮ ವಸ್ತು ಅಥವಾ ನಮ್ಮ ಪಾಲಿನ ಪದಾರ್ಥವನ್ನು ಅನ್ಯರಿಗೆ ಕೊಡುತ್ತೇವೆಯೋ ಆಗ ಇತರರ ಮುಖದ ಮೇಲೆ ಒಂದು ವಿಶೇಷವಾದ ಸಂತೋಷ ನೋಡಲು ಸಿಗುತ್ತದೆ. ಆ ಸಂತೋಷವನ್ನು ನೋಡಿ ನಮಗೂ ಆನಂದ ಸಿಗುತ್ತದೆ.
೨. ತ್ಯಾಗದ ಇತರೆ ಲಾಭಗಳು ಯಾವುವು? ಎನ್ನುವುದನ್ನು ನೋಡೋಣ. ವಿನಯ ಮತ್ತು ಆನಂದ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಒಮ್ಮೆ ತರಗತಿಯಲ್ಲಿ ಮಕ್ಕಳನ್ನು ಪ್ರವಾಸಕ್ಕಾಗಿ ಕರೆದುಕೊಂಡು ಹೋಗಲಿದ್ದರು. ವಿನಯನ ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ವಿನಯನಿಗೆ ಹೋಗಲು ಸಾಧ್ಯವಾಗಲಿಲ್ಲ. ಪ್ರವಾಸದಲ್ಲಿ ಶಿಕ್ಷಕರು ಎಲ್ಲ ಮಕ್ಕಳಿಗೆ ಎರಡೆರಡು ಚಾಕಲೇಟ್‌ಗಳನ್ನು ಕೊಟ್ಟರು. ಎಲ್ಲ ಮಕ್ಕಳು ಆ ಚಾಕಲೇಟ್‌ಗಳನ್ನು ತಿಂದರು. ಆನಂದನು ಒಂದು ಚಾಕಲೇಟ್ ತಿಂದನು ಮತ್ತು ಇನ್ನೊಂದು ಚಾಕಲೇಟ್ ಜೇಬಿನಲ್ಲಿ ತೆಗೆದಿಟ್ಟುಕೊಂಡನು. ಮಾರನೇ ದಿನ ಶಾಲೆಗೆ ಬಂದ ಬಳಿಕ ಅವನು ಆ ಚಾಕಲೇಟ್‌ನ್ನು ವಿನಯನಿಗೆ ಕೊಟ್ಟನು. ಆಗಿನಿಂದ ಅವರು ಇಬ್ಬರೂ ಆಪ್ತ ಮಿತ್ರರಾದರು. ತನ್ನ ಪಾಲಿನ ಒಂದು ಚಾಕಲೇಟ ಆನಂದನಿಗೆ ಒಬ್ಬ ಆಪ್ತ ಮಿತ್ರನನ್ನು ಪರಿಚಯಿಸಿತು. ಆದ್ದರಿಂದ ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ’ ಮಹತ್ವ ಹೆಚ್ಚಿದೆ.
ನಾವು ಪ್ರತಿದಿನ ನೋಡುವ ತ್ಯಾಗದ ಕೆಲವು ಉದಾಹರಣೆಗಳು
೧. ಸೂರ್ಯ : ಸಂಪೂರ್ಣ ಜಗತ್ತಿಗೆ ಪ್ರಕಾಶ ಹಾಗೂ ಶಕ್ತಿ(ಜೀವನ) ನೀಡಲು ಸೂರ್ಯನು ನಿರಂತರವಾಗಿ ಸುಡುತ್ತಿರುತ್ತಾನೆ; ಆದ್ದರಿಂದ ಅವನು ಪ್ರಾರ್ಥನೆಗೆ ಅರ್ಹನಾಗಿದ್ದಾನೆ. ಸೂರ್ಯನ ಕಾರಣದಿಂದಲೇ ಸಂಪೂರ್ಣ ಜಗತ್ತಿನ ಕಾರ್ಯ ನಡೆದಿದೆ.
೨. ನದಿ : ನದಿಯು ಜನರಿಗೆ ನೀರನ್ನು ಪೂರೈಸುತ್ತ ಮುಂದೆ-ಮುಂದಕ್ಕೆ ಹರಿಯುತ್ತ ಹೋಗುತ್ತದೆ; ಆದ್ದರಿಂದ ಜನರು ಅದನ್ನು ಪವಿತ್ರವೆಂದು ತಿಳಿಯುತ್ತಾರೆ. ಇದರ ಬದಲು ಸರೋವರವು ನೀರನ್ನು ಸಂಗ್ರಹಿಸುತ್ತದೆ ಮತ್ತು ಕೆಲವು ದಿನಗಳ ಬಳಿಕ ಒಣಗಿ ಹೋಗುತ್ತದೆ.
೩. ವೃಕ್ಷ : ವೃಕ್ಷಗಳು ಯಾತ್ರಿಕರಿಗೆ ನೆರಳು ಹಾಗೂ ಫಲವನ್ನು ನೀಡುತ್ತದೆ. ಇದರಲ್ಲಿ ಅವುಗಳ ತ್ಯಾಗವಿದೆ.
ನಮ್ಮಲ್ಲಿಯೂ ತ್ಯಾಗ ವೃತ್ತಿ ನಿರ್ಮಾಣವಾಗಲು ನಾವು ಹೇಗೆ ಪ್ರಯತ್ನಿಸಬಹುದು?
೧. ತಾಯಿಯು ತಯಾರಿಸಿದ ರುಚಿಕರ ಪದಾರ್ಥವನ್ನು ಸಹೋದರ-ಸಹೋದರಿಯರೊಂದಿಗೆ, ಮನೆಯಲ್ಲಿ ಎಲ್ಲ ಸದಸ್ಯರೊಂದಿಗೆ ಹಂಚಿದ ಬಳಿಕವೇ ತಿನ್ನಬೇಕು.
೨. ಯಾವುದಾದರೂ ತಿಂಡಿ-ತಿನಿಸನ್ನು ತಿನ್ನುವಾಗ ಯಾರಾದರೂ ಅಲ್ಲಿಗೆ ಬಂದರೆ ಅವರಿಗೂ ಅದನ್ನು ತಿನ್ನಲು ಕೊಡಬೇಕು.
೩. ಆಟ ಆಡುವ ಸಮಯದಲ್ಲಿ ತಾಯಿ ಏನಾದರೂ ಕೆಲಸವನ್ನು ಮಾಡಲು ಹೇಳಿದರೆ, ಅದನ್ನು ಕೂಡಲೇ ಮಾಡಬೇಕು.
೪. ನಿಮಗೆ ತಾಯಿಯ ಹತ್ತಿರ ಮಲಗುವ ಮನಸ್ಸು ಆಗುತ್ತಿದ್ದರೆ ಮತ್ತು ಅದೇ ಸಮಯದಲ್ಲಿ ನಿಮ್ಮ ತಮ್ಮ-ತಂಗಿ ತಾಯಿಯ ಹತ್ತಿರ ಮಲಗಲು ಕೇಳುತ್ತಿದ್ದರೆ, ಅವರಿಗೆ ಮಲಗಲು ಕೊಡುವುದು.
೫. ನಿಮ್ಮ ಪ್ರೀತಿಯ ಆಟಿಗೆ ಅಥವಾ ಯಾವುದಾದರೂ ವಸ್ತು ತಮ್ಮ-ತಂಗಿ ಕೇಳಿದರೆ, ಆ ವಸ್ತುವನ್ನು ಅವರಿಗೆ ತಕ್ಷಣವೇ ಕೊಡುವುದು.
೬. ನಿಮ್ಮ ಸೈಕಲ್‌ಅನ್ನು ಸಹೋದರ ಅಥವಾ ಸಹೋದರಿಗೆ ಉಪಯೋಗಿಸಲು ಕೊಡುವುದು.
೭. ಪ್ರವಾಸ ಮಾಡುವಾಗ ಎಲ್ಲರಿಗೂ ವಾಹನದ ಕಿಟಿಕಿಯ ಬಳಿ ಕುಳಿತುಕೊಳ್ಳಲು ಇಷ್ಟವಾಗುತ್ತದೆ. ಇಂತಹುದರಲ್ಲಿ ಸ್ನೇಹಿತ- ಸ್ನೇಹಿತೆಯರಿಗೆ ಕಿಟಕಿಯ ಬಳಿ ಕುಳಿತುಕೊಳ್ಳಬೇಕೆನಿಸಿದಾಗ, ಅವರಿಗೆ ಕುಳಿತುಕೊಳ್ಳಲು ಕೊಡುವುದು.
೮. ಪಿಕ್‌ನಿಕ್‌ನಲ್ಲಿ ಯಾರಿಗಾದರೂ ಚಳಿಯಾಗುತ್ತಿದ್ದರೆ, ನಿಮ್ಮ ಶಾಲನ್ನು ಹಂಚುವುದು ಅಥವಾ ‘ಸ್ವೆಟರ್’ ಅವರಿಗೆ ಕೊಡುವುದು.
೯. ಪ್ರವಾಸದಲ್ಲಿದ್ದಾಗ ಜನಜಂಗುಲಿಯಿದ್ದರೆ ಸ್ತ್ರೀಯರು, ವೃದ್ಧರು ಮುಂತಾದವರಿಗೆ ನಿಮ್ಮ ಆಸನವನ್ನು ಕುಳಿತುಕೊಳ್ಳಲು ಕೊಟ್ಟು ನೀವು ಸ್ವತಃ ನಿಂತುಕೊಳ್ಳುವುದು.
ಇದರೊಂದಿಗೆ ನಾವು ಇನ್ನೂ ಏನೇನು ಮಾಡಬಹುದು?
೧. ನಮ್ಮ ಮನೆಯ ಹತ್ತಿರ ಯಾವುದಾದರೂ ದೇವಸ್ಥಾನವಿದ್ದರೆ, ಅಲ್ಲಿ ಸ್ವಚ್ಛತೆಯನ್ನು ಮಾಡುವುದು, ಅಲ್ಲಿ ಪ್ರವಚನಗಳಾಗುತ್ತಿದ್ದರೆ, ಜಮಖಾನ ಹಾಸುವುದು, ಸ್ನೇಹಿತರು ಹಾಗೂ ಸ್ನೇಹಿತೆಯರಿಗೆ ಪ್ರವಚನಕ್ಕೆ ಬರುವಂತೆ ಆಹ್ವಾನಿಸುವುದು. ಇಂತಹ ಶಾರೀರಿಕ ಸೇವೆಗಳನ್ನು ಮಾಡುವುದರಿಂದ ಮನಸ್ಸು ಮತ್ತು ಶರೀರದ ತ್ಯಾಗವಾಗುತ್ತದೆ.
೨. ದೇವತೆಯ ನಾಮಜಪ ಮಾಡುವುದರಿಂದ, ಮನಸ್ಸಿನಲ್ಲಿ ಈಶ್ವರ ಅಥವಾ ಗುರುವಿನ ವಿಷಯದಲ್ಲಿ ವಿಚಾರ ಮಾಡುವುದರಿಂದ ಮನಸ್ಸಿನ ತ್ಯಾಗವಾಗುತ್ತದೆ.
೩. ಅತಿಥಿಗಳು ಮಿಠಾಯಿ ತಿನ್ನಲು ನೀಡುವ ಹಣ ಹಾಗೂ ಪುರಸ್ಕಾರದಿಂದ ದೊರೆತ ಹಣವನ್ನು ಸಂಗ್ರಹಿಸಿ ಅದನ್ನು ರಾಷ್ಟ್ರ ಕಾರ್ಯಕ್ಕಾಗಿ ಅರ್ಪಣೆ ಮಾಡುವುದರಿಂದ ಧನದ ತ್ಯಾಗವಾಗುತ್ತದೆ.
೪. ನಮ್ಮ ಸೇವೆಯನ್ನು ಸಾಧ್ಯವಾದಷ್ಟು ಒಳ್ಳೆಯ ರೀತಿಯಲ್ಲಿ ಹೇಗೆ ಮಾಡಬಹುದು, ಎಂದು ವಿಚಾರ ಮಾಡಿ ಅದನ್ನು ಪರಿಪೂರ್ಣವಾಗಿ ಮಾಡುವುದರಿಂದ ಬುದ್ಧಿಯ ತ್ಯಾಗವಾಗುತ್ತದೆ. ಈಶ್ವರನ ಸೇವೆಗಾಗಿ ಬುದ್ಧಿಯ ತ್ಯಾಗ ಮಾಡುವುದರಿಂದ ವ್ಯಕ್ತಿಯು ಅಧಿಕ ಸಾತ್ವಿಕನಾಗುತ್ತಾನೆ.
೫. ಯಾವುದೇ ಸೇವೆಯನ್ನು ಮಾಡುವಾಗ ‘ಸೇವೆಯನ್ನು ನಾನು ಮಾಡುತ್ತಿಲ್ಲ, ಈಶ್ವರನೇ ನನ್ನಿಂದ ಮಾಡಿಸಿಕೊಳ್ಳುತ್ತಿದ್ದಾನೆ’, ಎನ್ನುವ ಭಾವವನ್ನು ಇಟ್ಟುಕೊಳ್ಳುವುದರಿಂದ ನಮ್ಮ ಅಹಂಭಾವದ (ಗರ್ವದ) ತ್ಯಾಗವಾಗುತ್ತದೆ.
ಹಾಗಿದ್ದರೆ, ಇಂದಿನಿಂದ ನಾವೆಲ್ಲರೂ ನಮ್ಮಲ್ಲಿ ತ್ಯಾಗದ ವೃತ್ತಿಯನ್ನು ಹೆಚ್ಚಿಸಲು ಪ್ರಯತ್ನಿಸೋಣವಲ್ಲವೇ?