ಗೋದಾವರಿ ನದಿಯ ತೀರದಲ್ಲಿ ಮಹಾತ್ಮರಾದ ವೇದಧರ್ಮರ ಆಶ್ರಮವಿತ್ತು. ಅವರ ಆಶ್ರಮದಲಲ್ಲಿ ವೇದಗಳ ಅಧ್ಯಯನ ಮಾಡಲು ಬೇರೆ ಬೇರೆ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಅವರ ಶಿಷ್ಯರಲ್ಲಿ ಸಂದೀಪಕನೆಂಬ ಅತ್ಯಂತ ಬುದ್ಧಿವಂತ ಶಿಷ್ಯನಿದ್ದನು. ಅವನು ಗುರುಭಕ್ತನೂ ಆಗಿದ್ದನು.
ಕಾಲಕ್ರಮೇಣ ವೇದಗಳ ಅಧ್ಯಯನ ಮುಗಿದ ನಂತರ ಒಂದು ದಿನ ಅವರು ತಮ್ಮ ಎಲ್ಲ ಶಿಷ್ಯರನ್ನು ಕರೆದುರ ಮತ್ತು ‘ನನ್ನ ಪ್ರಿಯ ಶಿಷ್ಯರೇ, ನೀವೆಲ್ಲರೂ ಗುರುಭಕ್ತರು ಎನ್ನುವುದರಲ್ಲಿ ಏನೂ ಸಂದೇಹವಿಲ್ಲ. ನನ್ನಿಂದ ಎಷ್ಟಾಗುತ್ತದೆಯೋ ಅಷ್ಟು ಜ್ಞಾನವನ್ನೆಲ್ಲ ನಾನು ನಿಮಗೆಲ್ಲರಿಗೂ ಕಲಿಸಿದ್ದೇನೆ. ಈಗ ನಿಮಗೊಂದು ವಿಷಯ ತಿಳಿಸುತ್ತೇನೆ. ನನ್ನ ಪೂರ್ವ ಜನ್ಮದ (ಹಿಂದಿನಜನ್ಮದ) ಕರ್ಮಗಳಿಂದಾಗಿ ಮುಂಬರುವ ಕಾಲದಲ್ಲಿ ನನಗೆ ಕುಷ್ಠರೋಗವಾಗಲಿದೆ. ನಾನು ಕುರುಡನಾಗುವೆ ಕೂಡ. ನನ್ನ ಶರೀರದಲ್ಲಿ ಹುಳಗಳಾಗುವುವು ಮತ್ತು ನನ್ನ ಶರೀರದಿಂದ ದುರ್ಗಂಧ ಬರಲಿದೆ. ಹಾಗಾಗಿ ನಾನು ಈಗ ಈ ಆಶ್ರಮವನ್ನು ಬಿಟ್ಟು ಹೋಗುವವನಿದ್ದೇನೆ. ನಾನು ನನ್ನ ರೋಗದ ಕಾಲವನ್ನು ಕಾಶಿಯಲ್ಲಿ ವಾಸಿಸಿ ಕಳೆಯಲು ಇಚ್ಛಿಸುತ್ತೇನೆ. ನನ್ನ ಪ್ರಾರಬ್ಧ ಮುಗಿದ ನಂತ ವಾಪಾಸು ಬರುತ್ತೇನೆ. ನಿಮ್ಮಲ್ಲಿ ನನ್ನ ಜೊತೆಗೆ ಯಾರು ಬರುತ್ತೀರಿ?’ ಎಂದು ಕೇಳುತ್ತಾರೆ. ಗುರುಗಳ ಈ ಮಾತನ್ನು ಕೇಳಿ ಎಲ್ಲ ಶಿಷ್ಯರು ಸ್ತಬ್ಧರಾಗುತ್ತಾರೆ. ಆಗ ಸಂದೀಪಕನು ಮುಂದೆ ಬರುತ್ತಾನೆ ಮತ್ತು ‘ಗುರುದೇವರೆ, ನಾನು ಪ್ರತಿಯೊಂದು ಸ್ಥಿತಿಯಲ್ಲಿ ಪ್ರತಿಯೊಂದು ಜಾಗದಲ್ಲಿ ನಿಮ್ಮ ಜೊತೆಗಿದ್ದು ನಿಮ್ಮ ಸೇವೆಯನ್ನು ಮಾಡಲು ತಯಾರಿದ್ದೇನೆ’ ಎನ್ನುತ್ತಾನೆ.
ಗುರುದೇವರು, ‘ನೋಡು ಸಂದೀಪಕ, ನನಗೆ ಅಂಧತೆ ಬರಲಿದೆ, ನನ್ನ ಶರೀರವು ರೋಗದಿಂದ ಹೇಗೆ ಆಗುತ್ತದೆ ಎಂದು ಹೇಳಿದ್ದೇನೆ. ನೀನು ನನಗಾಗಿ ಬಹಳ ಕಷ್ಟವನ್ನು ಸಹಿಸಬೇಕಾಗುತ್ತದೆ. ಹಾಗಾಗಿ ಆಲೋಚನೆ ಮಾಡಿ ಹೇಳು ಎನ್ನುತ್ತಾರೆ. ಸಂದೀಪಕನು ‘ಹೇ ಗುರುದೇವಾ, ನಾನು ಎಲ್ಲ ರೀತಿಯ ಕಷ್ಟಗಳನ್ನು ಸಹಿಸಲು ಸಿದ್ಧನಿದ್ದೇನೆ. ನೀವು ಕೇವಲ ನಿಮ್ಮ ಜೊತೆಗೆ ಇರಲು ಅನುಮತಿ ನೀಡಿ’ ಎಂದು ವಿನಂತಿಸುತ್ತಾನೆ. ಮರುದಿನ ಗುರು ವೇದಧರ್ಮರು ಮತ್ತು ಸಂದೀಪಕನು ಕಾಶಿಗೆ ಹೋಗಲು ಹೊರಡುತ್ತಾರೆ. ಕಾಶಿಯಲ್ಲಿ ಕಂವಲೇಶ್ವರ ಎಂಬ ಸ್ಥಳದಲ್ಲಿ ಇಬ್ಬರೂ ವಾಸಿಸತೊಡಗುತ್ತಾರೆ.
ಕೆಲವು ಕಾಲ ಕಳೆದ ಮೇಳೆ ವೇದಧರ್ಮರಿಗೆ ಕುಷ್ಠರೋಗವಾಗಿ ಅದರಲ್ಲಿ ಹುಣ್ಣುಗಳಾಗುತ್ತವೆ. ಅವರಿಗೆ ಕಣ್ಣುಗಳಿಗೆ ಏನೂ ಕಾಣಿಸದಂತಾಗುತ್ತದೆ. ಅವರ ಸ್ವಭಾವವು ಬದಲಾಗಿ ಯಾವಾಗಲೂ ಕಿರಿಕಿರಿ ಮಾಡುವ ಹಾಗೂ ವಿಚಿತ್ರವಾಗುತ್ತದೆ. ಸಂದೀಪಕನು ಹಗಲೂ ರಾತ್ರಿ ಒಂದೇ ಸಮನೇ ಗುರುದೇವರ ಸೇವೆಯನ್ನು ಮಾಡುತ್ತಿದ್ದನು. ಅವರ ಸ್ನಾನ ಮಾಡಿಸುವುದು, ಶರೀರದಲ್ಲಾದ ಗಾಯಗಳನ್ನು ಸ್ವಚ್ಛಗೊಳಿಸುವುದು, ಅದಕ್ಕೆ ಔಷಧಿ ಹಚ್ಚುವುದು, ಬಟ್ಟೆ ತೊಡಿಸುವುದು, ಊಟ ಮಾಡಿಸುವುದು, ಹೀಗೆ ಎಲ್ಲವನ್ನೂ ಮಾಡುತ್ತಿದ್ದನು. ಆದರೂ ಗುರುಗಳು ಅವನ ಮೇಲೆ ಸಿಟ್ಟಾಗುತ್ತಿದ್ದರು. ಸಿಡಿಮಿಡಿಗೊಳ್ಳುತ್ತಿದ್ದರು. ಆದರೆ ಸಂದೀಪಕನು ಮನಸ್ಸಿಟ್ಟು ಅವರ ಸೇವೆಯನ್ನು ಮಾಡುತ್ತಿದ್ದನು. ಅವನ ಮನಸ್ಸಿನಲ್ಲಿ ಗುರುದೇವರ ಬಗ್ಗೆ ಯಾವತ್ತು ತಪ್ಪಾದ ಪ್ರತಿಕ್ರಿಯೆಯು ಬರುತ್ತಿರಲಿಲ್ಲ.
ಈ ಎಲ್ಲ ಸೇವೆಗಳನ್ನು ಮಾಡುತ್ತಾ ಮಾಡುತ್ತಾ ಸಂದೀಪಕನ ಎಲ್ಲ ವಾಸನೆಗಳು ಅರ್ಥಾತ್ ಇಚ್ಛೆಗಳು ನಾಶವಾಗುತ್ತವೆ. ಅವನ ಬುದ್ಧಿಯಲ್ಲಿ ಒಂದು ಅಲೌಕಿಕ ಜ್ಞಾನದ ಪ್ರಕಾಶವು ಹರಡುತ್ತಿತ್ತು. ನಮ್ಮ ಮನಸ್ಸಿಗನುಸಾರ ಮಾಡಿದರೆ ಏನೂ ಕೈಗೆ ಸಿಗಲಾರದು. ಗುರುದೇವರು ಹೇಳಿದ ಮಾರ್ಗದಲ್ಲಿ ನಡೆದರೆ ಮಾತ್ರ ಜೀವನದಲ್ಲಿ ಎಲ್ಲಿಯೂ ಅಲೆದಾಡಬೇಕಾಗುವುದಿಲ್ಲ ಎಂದು ಅವನಿಗೆ ಅರಿವಾಗುತ್ತದೆ.
ಈ ರೀತಿ ಗುರುದೇವರ ಸೇವೆಯನ್ನು ಮಾಡುತ್ತಾ ಮಾಡುತ್ತಾ ಅನೇಕ ವರ್ಷಗಳು ಕಳೆದು ಹೋಗುತ್ತವೆ. ಸಂದೀಪಕನ ಗುರುಸೇವೆಯನ್ನು ನೋಡಿ ಸಾಕ್ಷಾತ ಭಗವಾನ ಶಿವನು ಅವನೆದರು ಪ್ರತ್ಯಕ್ಷನಾದನು. ಅವನಿಗೆ, ‘ಸಂದೀಪಕ, ಜನರು ಕಾಶಿ ವಿಶ್ವನಾಥನ ದರ್ಶನಕ್ಕಾಗಿ ಬರುತ್ತಾರೆ. ಆದರೆ ನಾನು ಸ್ವಯಂ ನಿನ್ನ ಬಳಿ ಕರೆಯದೇ ಬಂದಿದ್ದೇನೆ. ನೀನು ನಿನ್ನ ಗುರುಗಳ ಸೇವೆಯನ್ನು ಬಹಳ ಶ್ರದ್ಧೆ ಮತ್ತು ಭಾವದಿಂದ ಮಾಡುತ್ತಿರುವೆ. ಆ ಗುರುಗಳ ಹೃದಯದಲ್ಲಿ ನಾನು ಸೋಹಂ ಸ್ವರೂಪದಲ್ಲಿ ನಿವಾಸ ಮಾಡುತ್ತೇನೆ. ಅಂದರೆ ನೀನು ಮಾಡುವ ಗುರುಸೇವೆಯು ನನಗೆ ತಲುಪುತ್ತದೆ. ನಾನು ನಿನ್ನ ಮೇಲೆ ಬಹಳ ಪ್ರಸನ್ನನಾಗಿದ್ದೇನೆ. ನಿನಗೆ ಏನು ವರಬೇಕು ಅದನ್ನು ಕೇಳು’ ಎನ್ನುತ್ತಾನೆ.
ಸಂದೀಪನು ಅತ್ಯಂತ ನಮ್ರನಾಗಿ ಭಗವಾನ ಶಿವನಿಗೆ ‘ಹೇ ಪ್ರಭು, ನೀವು ಪ್ರಸನ್ನರಾಗಿರುವುದೇ ನನಗಾಗಿ ಸರ್ವಸ್ವವಾಗಿದೆ’ ಎನ್ನುತ್ತಾನೆ. ಆದರೆ ಶಿವನು, ‘ನೀನು ನನ್ನ ಬಳಿ ಏನಾದರೂ ಬೇಡಲೇ ಬೇಕು’ ಎನ್ನುತ್ತಾನೆ.
ಭಗವಾನ ಶಿವನ ಈ ಮಾತನ್ನು ಕೇಳಿ ಸಂದೀಪಕನು, ‘ಹೇ ಮಹಾದೇವಾ, ನೀವು ನನ್ನ ಮೇಲೆ ಪ್ರಸನ್ನರಾಗಿದ್ದೀರಿ. ಇದು ನನ್ನ ಪರಮಭಾಗ್ಯವಾಗಿದೆ. ಆದರೆ ನಾನು ನನ್ನ ಗುರುದೇವರ ಆಜ್ಞೆಯಿಲ್ಲದೇ ಏನೂ ಕೇಳಲಾರೆ’ ಎನ್ನುತ್ತಾನೆ.
ಭಗವಂತನು, ‘ಸರಿ, ನೀನು ಹೋಗಿ ನಿನ್ನ ಗುರುಗಳ ಬಳಿ ಕೇಳಿ ಬಾ’ ಎಂದು ಹೇಳಲು ಸಂದೀಪಕನು ಗುರುಗಳ ಬಳಿಗೆ ಬಂದು, ‘ ಹೇ ಗುರುದೇವಾ, ನಿಮ್ಮ ಕೃಪೆಯಿಂದ ಭಗವಾನ ಶಂಕರನು ನನ್ನ ಮೇಲೆ ಪ್ರಸನ್ನನಾಗಿ ನನಗೆ ವರ ನೀಡಲು ಇಚ್ಛಿಸುತ್ತಿದ್ದಾರೆ. ನೀವು ಆಜ್ಞೆ ನೀಡಿದರೆ ನಾನು ನಿಮ್ಮ ರೋಗ ಮತ್ತು ಅಂಧತ್ವ ದೂರವಾಗಲಿ ಎಂದು ವರ ಬೇಡಲೇನು?’ ಎಂದು ವಿಚಾರಿಸುತ್ತಾನೆ.
ಇದನ್ನು ಕೇಳಿ ವೇದಧರ್ಮರಿಗೆ ಬಹಳ ಸಿಟ್ಟು ಬರುತ್ತದೆ. ‘ಸಂದೀಪಕಾ, ನೀನು ನನ್ನ ಸೇವೆ ಮಾಡಿ ಬೇಸರಗೊಂಡಿರುವೆ ಎಂದು ನನಗೆ ಅನಿಸುತ್ತದೆ. ಹಾಗೂ ನನ್ನ ಸೇವೆಯಿಂದ ತಪ್ಪಿಸಿಕೊಳ್ಳಲು ನೋಡುತ್ತಿರುವೆ. ನನ್ನ ಸೇವೆ ಮಾಡಿ ಸಾಕಾಯಿತು ಎಂದು ಈಗ ಅವರ ಬಳಿ ಭಿಕ್ಷೆಯನ್ನು ಬೇಡುತ್ತಿರುವೆ ಏನು? ಶಿವನು ಏನು ವರ ನೀಡುವನೋ ಅದರಿಂದ ನನ್ನ ಪ್ರಾರಬ್ಧ ಏನೂ ನಾಶವಾಗುವುದೇನು? ದೂರ ಹೋಗು ಇಲ್ಲಿಂದ, ನಾನು ನಿನಗೆ ಮೊದಲೇ ನನ್ನ ಜೊತೆ ಬರುವುದು ಬೇಡ ಎಂದು ಹೇಳಿದ್ದೇ. ನೀನೇ ಹಟ ಮಾಡಿ ಬಂದಿರುವೆ. ಹೋಗು ಇಲ್ಲಿಂದ’ ಎಂದು ಕೋಪದಿಂದ ಹೇಳುತ್ತಾರೆ.
ಸಂದೀಪಕನು ಓಡೋಡಿ ಶಿವನ ಬಳಿ ಬಂದು, ‘ಹೇ ಭಗವಂತಾ, ನನಗೆ ಏನೂ ಬೇಡ!’ ಎನ್ನುತ್ತಾನೆ. ಇದನ್ನು ಕೇಳಿ ಭಗವಂತನು ಇನ್ನಷ್ಟು ಸಂತುಷ್ಟನಾಗುತ್ತಾನೆ ಮತ್ತು ‘ನೀನು ಗುರುಗಳ ಸೇವೆಯನ್ನು ಎಷ್ಟೊಂದು ಮಾಡುತ್ತಿ, ಆದರೂ ಗುರುಗಳು ನಿಮ್ಮ ಮೇಲೆ ಸಿಟ್ಟಾಗುತ್ತಿರುತ್ತಾರಲ್ಲ?’ ಎಂದು ಕೇಳುತ್ತಾರೆ. ತನ್ನ ಗುರುದೇವರ ನಿಂದೆಯು ಸಂದೀಪಕನಿಗೆ ಒಳ್ಳೆಯದೆನಿಸುವುದಿಲ್ಲ. ಅವನು ಭಗವಂತನಿಗೆ, ‘ಕೇವಲ ಗುರುಕೃಪೆಯೇ ಶಿಷ್ಯನ ಒಳಿತನ್ನು ಮಾಡುತ್ತದೆ’ ಎನ್ನುತ್ತಾನೆ ಮತ್ತು ಅಲ್ಲಿಂದ ಹೊರಟುಬಿಡುತ್ತಾನೆ.
ಭಗವಾನ ಶಿವನು ಈ ವಿಷಯವನ್ನು ಭಗವಾನ ಶ್ರೀ ವಿಷ್ಣುವಿಗೆ ಹೇಳುತ್ತಾನೆ ಮತ್ತು ಸಂದೀಪಕನ ಗುರುಭಕ್ತಿಯ ವರ್ಣನೆಯನ್ನು ಮಾಡುತ್ತಾರೆ. ಇದನ್ನು ಕೇಳಿ ಭಗವಾನ ಶ್ರೀ ವಿಷ್ಣುವು ಸಂದೀಪಕನನ್ನು ಪರೀಕ್ಷಿಸಲು ಇಚ್ಛಿಸುತ್ತಾರೆ. ಮತ್ತು ಅವನಿಗೆ ವರವನ್ನು ಕೇಳುವಂತೆ ಸಂದೀಪಕನಿಗೆ ಹೇಳುತ್ತಾನೆ. ಸಂದೀಪಕನು ಅವರ ಚರಣಗಳನ್ನು ಹಿಡಿದು, ‘ಹೇ ತ್ರಿಭುವನದ ಅಧಿಪತಿಯೇ, ಗುರುಕೃಪೆಯಿಂದಲೇ ನನಗೆ ನಿಮ್ಮ ದರ್ಶನವಾಗಿದೆ. ಗುರುಚರಣಗಳಲ್ಲಿ ನನ್ನ ಶ್ರದ್ಧೆಯು ಸತತ ಶಾಶ್ವತವಾಗಿರಲಿ. ಮತ್ತು ನನ್ನಿಂದ ಅಖಂಡವಾಗಿ ಅವರ ಸೇವೆಯಾಗುತ್ತಿರಲಿ, ಈ ವರವನ್ನು ನನಗೆ ನೀಡಿ’ ಎಂದು ಬೇಡುತ್ತಾನೆ.
ಶ್ರೀವಿಷ್ಣುವು ಪ್ರಸನ್ನರಾಗಿ ಅವನಿಗೆ ಆಶೀರ್ವಾದವನ್ನು ನೀಡುತ್ತಾರೆ. ಈ ವಿಷಯವು ಮಹಾತ್ಮ ವೇದಧರ್ಮರಿಗೆ ತಿಳಿದಾಗ ಅವರು ಬಹಳ ಪ್ರಸನ್ನರಾಗುತ್ತಾರೆ. ಅವರು ಸಂದೀಪಕನನ್ನು ಆಲಿಂಗಿಸಿಕೊಳ್ಳುತ್ತಾರೆ. ಅವನಿಗೆ ಆಶೀರ್ವಾದ ನೀಡುತ್ತಾ, ‘ವತ್ಸ! ನೀನು ನನ್ನ ಸರ್ವಶ್ರೇಷ್ಠ ಶಿಷ್ಯನಾಗಿರುವೆ. ನಿನಗೆ ಎಲ್ಲ ಸಿದ್ಧಿಗಳು ಪ್ರಾಪ್ತವಾಗುವವು. ಋದ್ಧಿ-ಸಿದ್ಧಿಯು ನಿನ್ನ ಹೃದಯದಲ್ಲಿ ನಿವಾಸ ಮಾಡುವರು’ ಎಂದು ಆಶೀರ್ವಾದ ಮಾಡುತ್ತಾರೆ. ಆಗ ಸಂದೀಪಕನು, ‘ಗುರುವರ್ಯ, ನಿಮ್ಮ ಚರಣಗಳಲ್ಲಿಯೇ ನನ್ನ ಋದ್ಧಿ ಸಿದ್ಧಿ ಎಲ್ಲವೂ ಇದೆ. ನೀವು ಕೇವಲ ನನ್ನನ್ನು ನಿರಂತರ ಆನಂದಾವಸ್ಥೆಯಲ್ಲಿ ಇರುವಂತೆ ಆಶೀರ್ವಾದ ನೀಡಿರಿ’ ಎಂದು ಬೇಡುತ್ತಾನೆ. ಅದೇ ಕ್ಷಣ ಮಹಾತ್ಮ ವೇದಧರ್ಮರ ಕುಷ್ಠವು ನಾಶವಾಗಿ ಹೋಗುತ್ತದೆ. ಅವರ ಶರೀರವು ಮೊದಲಿನಂತೆ ಕಾಂತಿಯುಕ್ತವಾಗುತ್ತದೆ. ಗುರುದೇವರು ತನ್ನ ಪ್ರಿಯ ಶಿಷ್ಯನ ಸತ್ತ್ವಪರೀಕ್ಷೆಯನ್ನು ತೆಗೆದುಕೊಂಡು ಅವನಿಗೆ ಬ್ರಹ್ಮವಿದ್ಯೆಯ ವಿಶಾಲ ಖಜಾನೆಯನ್ನು ತೆರೆದುಕೊಡುತ್ತಾರೆ.
ಮಕ್ಕಳೇ, ನಿಜವಾದ ಗುರುಭಕ್ತರು ಹೇಗಿರುತ್ತಾರೆ, ಇದು ತಮ್ಮ ಗಮನಕ್ಕೆ ಬಂದಿದೆಯಲ್ಲವೇ?