ಇದು ಗುರು ಹಾಗೂ ಶಿಷ್ಯನ ಕಥೆಯಾಗಿದೆ. ಓರ್ವ ಗುರುಗಳ ಆಶ್ರಮದಲ್ಲಿ ಅನೇಕ ಶಿಷ್ಯರಿರುತ್ತಿದ್ದರು. ಅವರ ಪೈಕಿ ಒಬ್ಬನ ಹೆಸರು ಸಾರ್ಥಕ ಎಂದಿತ್ತು. ಒಮ್ಮೆ ಶಿಷ್ಯ ಸಾರ್ಥಕನು ತನ್ನ ಮಹಾನ್ ಗುರುಗಳಲ್ಲಿ, ‘ಹೇ ಗುರುದೇವಾ, ನೀವು ನನಗೆ ಆತ್ಮಸಾಕ್ಷಾತ್ಕಾರದ ದಾರಿಯನ್ನು ತೋರಿಸಿ !’ ಎಂದು ವಿನಂತಿಸಿದನು. ಅದಕ್ಕೆ ಗುರುದೇವರು ನುಡಿದರು, ‘ವತ್ಸ, ಆತ್ಮಸಾಕ್ಷಾತ್ಕಾರದ ಮಾರ್ಗ ತುಂಬಾ ಕಠಿಣವಾಗಿರುತ್ತದೆ. ಆ ಮಾರ್ಗ ಕ್ರಮಿಸುವ ಸಾಧಕರು ಅನೇಕ ಕಠಿಣ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ನಿನಗೆ ಅಷ್ಟು ಯೋಗ್ಯತೆಯಿದ್ದಲ್ಲಿ ನನಗೆ ಆ ಮಾರ್ಗವನ್ನು ಹೇಳುವುದರಲ್ಲಿ ಯಾವುದೇ ರೀತಿಯ ವಿಪತ್ತಿಲ್ಲ’ ಎಂದು.
ಜಿಜ್ಞಾಸು ಸಾರ್ಥಕನು ‘ಗುರುದೇವರೇ, ಮಾರ್ಗದಲ್ಲಿ ಬರುವ ಅಡಚಣೆಗಳನ್ನು ಎದುರಿಸುವೆನು ಹಾಗೂ ಅದರೊಂದಿಗೆ ಹೋರಾಡಿ ನಾನು ನನ್ನ ಗುರಿ ತಲುಪಲು ಪ್ರಯತ್ನಿಸುವೆನು’. ಸಾರ್ಥಕನ ದೃಢ ವಿಶ್ವಾಸವನ್ನು ನೋಡಿ ಆಚಾರ್ಯರು ನುಡಿದರು, ‘ಏಕಾಂತವಾಸಕ್ಕೆ ಹೋಗಿ ನಿಷ್ಕಾಮ (ಯಾವುದೇ ಆಸೆಯಿಲ್ಲದೇ) ಭಾವದಿಂದ ಗಾಯತ್ರೀ ಮಂತ್ರವನ್ನು ಜಪಿಸು. ಒಂದು ವರ್ಷದವರೆಗೂ ಯಾರೊಂದಿಗೂ ಮಾತನಾಡಬಾರದು ಹಾಗೂ ಯಾರೊಂದಿಗೂ ಸಂಪರ್ಕವಿಟ್ಟುಕೊಳ್ಳಬಾರದು. ಒಂದು ವರ್ಷದ ಬಳಿಕ ನನ್ನನ್ನು ಬಂದು ಭೇಟಿಯಾಗು’. ಸಾರ್ಥಕನು ತನ್ನ ಗುರುಗಳ ಆಜ್ಞೆಯನ್ನು ಪಾಲಿಸಿದನು. ತನ್ನ ಸಾಧನೆ ಮಾಡಲು ಏಕಾಂತವಾಸಕ್ಕೆ ಹೊರಟು ಹೋದ.
ಒಂದು ವರ್ಷವಾಯಿತು, ಸಾರ್ಥಕನು ಆಶ್ರಮಕ್ಕೆ ಮರಳಿ ಬರುವ ದಿನವಾಯಿತು. ಗುರುಗಳ ಆಶ್ರಮದಲ್ಲಿ ಅನೇಕ ಶಿಷ್ಯರಿದ್ದರು ಹಾಗೂ ಅವರೆಲ್ಲರೂ ನಾನಾ ರೀತಿಯ ಸೇವೆಗಳನ್ನು ಮಾಡುತ್ತಿದ್ದರು. ಶಿಷ್ಯರೊಬ್ಬರು ಆಶ್ರಮದ ಸ್ವಚ್ಛತೆಯ ಸೇವೆಯನ್ನು ಮಾಡುತ್ತಿದ್ದರು, ಆ ಶಿಷ್ಯನಿಗೆ ಗುರುಗಳು ಹೇಳಿದರು, ‘ಇಂದು ನನ್ನ ಶಿಷ್ಯನು ಬರಲಿದ್ದಾನೆ, ನೀನು ಅವನ ಮೇಲೆ ನಿನ್ನ ಪೊರಕೆಯಿಂದ ಕಸವನ್ನು ಎರಚಬೇಕು’ ಎಂದು. ಒಂದು ವರ್ಷದ ಬಳಿಕ ಸಾರ್ಥಕನು ಏಕಾಂತವಾಸದಲ್ಲಿ ಸಾಧನೆ ಮಾಡಿ ಆಶ್ರಮದ ಸಮೀಪಕ್ಕೆ ಬಂದ ತಕ್ಷಣ ಆ ಶಿಷ್ಯನು ಗುರುದೇವರ ಆಜ್ಞೆಯಂತೆ ಕಸವನ್ನು ಎರಚಲು ಪ್ರಾರಂಭಿಸಿದನು. ಇದರಿಂದ ಸಾರ್ಥಕನ ಶರೀರಕ್ಕೆಲ್ಲ ಧೂಳು ಮೆತ್ತಿ ಹೊಯಿತು. ಸಾರ್ಥಕನು ಕೋಪದಿಂದ ಆ ಶಿಷ್ಯನನ್ನು ಹೊಡೆಯಲು ಹೋದಾಗ ಅವನು ತಪ್ಪಿಸಿಕೊಂಡು ಓಡಿ ಹೋದನು.
ಸ್ನಾನ ಮಾಡಿಕೊಂಡು ಬಂದ ಬಳಿಕ ಸಾರ್ಥಕನು ಗುರುದೇವರ ಸೇವೆ ಮಾಡಲು ಅವರ ಬಳಿಗೆ ಹೋದಾಗ. ಗುರುದೇವರು ಸಾರ್ಥಕನನ್ನು ನೋಡಿ ನುಡಿದರು, ‘ವತ್ಸ, ನೀನು ಇನ್ನೂ ಸಹ ಹಾವಿನಂತೆ ಕಡಿಯುತ್ತಿರುವಿ. ಆದ್ದರಿಂದ ಇದೇ ಸಾಧನೆಯನ್ನು ಇನ್ನು ಒಂದು ವರ್ಷ ಮಾಡು’. ಈ ಮಾತಿನಿಂದ ಸಾರ್ಥಕನ ಮನಸ್ಸಿನಲ್ಲಿ ಕೋಪ ಬಂತು; ಆದರೆ ಆತ್ಮತತ್ತ್ವವನ್ನು ತಿಳಿದುಕೊಳ್ಳುವ ತೀವ್ರ ಜಿಜ್ಞಾಸೆಯಿಂದ ಅವನು ಮತ್ತೆ ಸಾಧನೆ ಮಾಡಲು ಪ್ರಾರಂಭಿಸಿದನು. ನಿಧಾನವಾಗಿ ಅವನ ಸಾಧನೆಯ ಮತ್ತೊಂದು ವರ್ಷ ಪೂರ್ಣವಾಯಿತು. ಈಗ ಅವನು ಮತ್ತೆ ಗುರುದೇವರ ಆಶ್ರಮಕ್ಕೆ ಹೋಗಲು ತಯಾರಾದನು. ಮತ್ತೆ ಗುರುದೇವರು ಸಾರ್ಥಕನು ಬರುವ ಮುನ್ನ ಆ ಸ್ವಚ್ಛತೆಯ ಸೇವೆ ಮಾಡುವ ಶಿಷ್ಯನಿಗೆ ಹೇಳಿದರ, ‘ಇಂದು ಸಾರ್ಥಕನು ಬರುವವನಿದ್ದಾನೆ, ನೀನು ನಿನ್ನ ಪೊರಕೆಯಿಂದ ಅವನನ್ನು ಸ್ಪರ್ಶಿಸಿ ಬಿಡು’ ಎಂದು. ಸಾರ್ಥಕನು ಆಶ್ರಮಕ್ಕೆ ಬಂದ ಬಳಿಕ ಹಾಗೆಯೇ ಆಯಿತು. ಆ ಶಿಷ್ಯನು ಗುರುದೇವರ ಆಜ್ಞೆಯಂತೆ ಸಾರ್ಥಕನ ಶರೀರವನ್ನು ಪೊರಕೆಯಿಂದ ಸ್ಪರ್ಶಿಸಿದನು. ಮತ್ತೆ ಸಾರ್ಥಕನಿಗೆ ಕೋಪ ಬಂತು. ಅವನು ಆ ಶಿಷ್ಯನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದನು ಹಾಗೂ ಸ್ನಾನ ಮಾಡಲು ಹೊರಟು ಹೋದನು.
ಸ್ನಾನ ಮಾಡಿಕೊಂಡು ಅವನು ಮತ್ತೆ ಗುರುದೇವರ ಎದುರಿಗೆ ನಿಂತು ‘ಹೇ ಗುರುದೇವಾ, ಈಗಲಾದರೂ ಆತ್ಮಸಾಕ್ಷಾತ್ಕಾರದ ಮಾರ್ಗವನ್ನು ತೋರಿಸಿ’ ಎಂದು ಬೇಡಿದನು. ಗುರುಗಳು ‘ವತ್ಸ, ಈಗ ನೀನು ಹಾವಿನಂತೆ ಕಚ್ಚುತ್ತಿಲ್ಲ, ಆದರೆ ಹಾವಿನಂತೆ ಬುಸುಗುಟ್ಟುತ್ತಿರುವೆ ! ಆದ್ದರಿಂದ ಮತ್ತೊಂದು ವರ್ಷ ಸಾಧನೆ ಮಾಡು’. ಸಾರ್ಥಕನು ಮೂರನೇ ವರ್ಷ ಸಹ ಸಾಧನೆ ಮಾಡಲು ಹೊರಟು ಹೋದನು .
ಮೂರನೆಯ ವರ್ಷವೂ ಪೂರ್ಣಗೊಂಡಿತು. ಗುರುದೇವರು ತಮ್ಮ ಸ್ವಚ್ಛತೆ ಮಾಡುವ ಶಿಷ್ಯರನ್ನು ಕರೆದು ಮತ್ತೆ ನುಡಿದರು, ‘ಇಂದು ಸಾರ್ಥಕನು ಸಾಧನೆ ಪೂರ್ಣಗೊಳಿಸಿ ಬರಲಿದ್ದಾನೆ. ನೀನು ಅವನ ಮೇಲೆ ಕಸವಿರುವ ಬುಟ್ಟಿಯನ್ನೇ ಮುಗುಚಿ ಹಾಕು. ಆ ಶಿಷ್ಯನು ಗುರುದೇವರ ಆಜ್ಞೆಯನ್ನು ಪಾಲಿಸಿದನು. ಸಾರ್ಥಕನು ಬರುತ್ತಿದ್ದಂತೆ ಅವನ ಮೇಲೆ ಇಡೀ ಕಸದ ಬುಟ್ಟಿಯನ್ನೇ ಬುಡಮೇಲು ಮಾಡಿ ಹಾಕಿಬಿಟ್ಟನು. ಆದರೆ ಈ ಸಲ ಸಾರ್ಥಕನಿಗೆ ಕೋಪ ಬರಲೇ ಇಲ್ಲ. ಅವನು ಸ್ವಚ್ಛತೆ ಮಾಡುವ ಶಿಷ್ಯರಿಗೆ ನಮಸ್ಕರಿಸಿ ‘ಗುರುಬಂಧು, ನೀವು ತುಂಬಾ ಶ್ರೇಷ್ಠರಾಗಿದ್ದೀರಿ. ನೀವು ಕಳೆದ ೩ ವರ್ಷಗಳಿಂದ ನನ್ನ ಎಲ್ಲ ದುರ್ಗುಣಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿರುವಿರಿ. ನಾನು ನಿಮ್ಮ ಈ ಉಪಕಾರಗಳನ್ನು ಮರೆಯಲು ಸಾಧ್ಯವೇ ಇಲ್ಲ’ ಎಂದು ನುಡಿದು ಸಾರ್ಥಕನು ಸ್ನಾನ ಮಾಡಲು ಹೊರಟು ಹೋದನು.
ಸ್ನಾನ ಮಾಡಿ ಸಾರ್ಥಕನು ತನ್ನ ಗುರುಗಳ ದರ್ಶನಕ್ಕೆ ಬಂದನು. ಅವನು ಗುರುಗಳನ್ನು ವಂದಿಸಿ ಅವರಿಂದ ಆತ್ಮಸಾಕ್ಷಾತ್ಕಾರಕ್ಕಾಗಿ ವಿನಂತಿಸಿದನು. ಗುರುದೇವರು ‘ಈಗ ನೀನು ಆತ್ಮಸಾಕ್ಷಾತ್ಕಾರಕ್ಕಾಗಿ ಪಾತ್ರತೆಯನ್ನು ಹೊಂದಿದ್ದೀಯ !’ ಎಂದು ಸಾರ್ಥಕನನ್ನು ಮೆಚ್ಚಿದರು. ಇದರ ಬಳಿಕ ಗುರುದೇವರು ಅವನಿಗೆ ಆತ್ಮಸಾಕ್ಷಾತ್ಕಾರದ ರಹಸ್ಯವನ್ನು ಹೇಳಿದರು.
ಮಕ್ಕಳೇ ಸ್ವಭಾವದೋಷ ನಿರ್ಮೂಲನೆ ಮಾಡುವುದರ ಮಹತ್ವವು ತಮ್ಮ ಗಮನಕ್ಕೆ ಬಂತಲ್ಲವೇ? ಒಂದು ವೇಳೆ ನಮ್ಮಲ್ಲಿ ಒಂದೇ ಒಂದು ದೋಷವಿದ್ದರೂ ಸಹ ನಾವು ಭಗವಂತನ ಸಮೀಪಕ್ಕೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ನಾವು ನಮ್ಮ ದುರ್ಗುಣಗಳನ್ನು ದೂರ ಮಾಡಿ ಗುಣಗಳನ್ನು ಸಂಪಾದಿಸಿಕೊಳ್ಳಬೇಕು!