ಪ.ಪೂ. ಭಕ್ತರಾಜ ಮಹಾರಾಜರು ಇಂದೋರಿನ ಸಂತರಾಗಿದ್ದರು. ಅವರು ಭಾರತಾದ್ಯಂತ ಸಂಚಾರ ಮಾಡುತ್ತಿದ್ದರು. ಮಹಾರಾಜರಿಗೆ ಭಜನೆ ಹಾಡುವುದು ಎಂದರೆ ತುಂಬಾ ಪ್ರೀತಿಯ ವಿಷಯವಾಗಿತ್ತು.. ಅವರು ಸ್ವತಃ ಭಜನೆಗಳನ್ನು ರಚಿಸಿ ಹಾಡುತ್ತಿದ್ದರು. ಭಜನೆಗಳ ಮೂಲಕ ಅವರು ಜನರಿಗೆ ಸಾಧನೆಯನ್ನು ಕಲಿಸುತ್ತಿದ್ದರು.
ಒಮ್ಮೆ ಪ.ಪೂ. ಭಕ್ತರಾಜ ಮಹಾರಾಜರು ತಮ್ಮ ಭಕ್ತರೊಂದಿಗೆ ಪಂಢರಪುರಕ್ಕೆ ಹೋಗಿದ್ದರು. ಪಂಢರಪುರದಲ್ಲಿ ಶ್ರೀವಿಠ್ಠಲನ ದೇವಸ್ಥಾನವಿದೆ. ಪ.ಪೂ. ಭಕ್ತರಾಜ ಮಹಾರಾಜರು ತಮ್ಮ ಭಕ್ತರೊಂದಿಗೆ ಪಂಢರಪುರದಲ್ಲಿ ಹೋಳ್ಕರ ನಿವಾಸದಲ್ಲಿ ಕುಳಿತಿದ್ದರು. ಆ ಸಮಯದಲ್ಲಿ ಶ್ರೀವಿಠ್ಠಲನ ದೇವಸ್ಥಾನದ ಅರ್ಚಕರು ಅಲ್ಲಿಗೆ ಬಂದರು. ಅವರು ಮಹಾರಾಜರಲ್ಲಿ, “ಇಂದು ಗುರುವಾರ ಮತ್ತು ಏಕಾದಶಿ. ಆದ್ದರಿಂದ, ನೀವು ಶ್ರೀ ವಿಠ್ಠಲನಿಗೆ ನಿಮ್ಮ ಕೈಗಳಿಂದ ಹೂವಿನಹಾರ ಅರ್ಪಿಸಿ ಪೇಡಾ ತಿನ್ನಿಸಬೇಕು” ಎಂದು ವಿನಂತಿಸಿದರು. ಅದಕ್ಕೆ ಮಹಾರಾಜರು, “ಸರಿ. ನಿಮ್ಮ ಇಷ್ಟದಂತೆಯೆ ಮಾಡೋಣ” ಎಂದು ಹೇಳಿದರು. “ನಿಮಗೆ ರಾತ್ರಿ ೧೦.೦ ಗಂಟೆಗೆ ವಿಠ್ಠಲನ ದರ್ಶನಕ್ಕಾಗಿ ಸಮಯವನ್ನು ನಿಗದಿಪಡಿಸಲಾಗಿದೆ” ಎಂದು ಅರ್ಚಕರು ಹೇಳಿದರು.
ಅದರ ನಂತರ ದೇವಸ್ಥಾನದ ಅರ್ಚಕರು ಭಕ್ತರಾಜ ಮಹಾರಾಜ ಮತ್ತು ಅವರ ಭಕ್ತರನ್ನು ಊಟಕ್ಕೆ ತಮ್ಮ ಮನೆಗೆ ಬರಲು ಆಹ್ವಾನಿಸಿದರು. ಭಕ್ತರಾಜ ಮಹಾರಾಜರು ತಮ್ಮ ಭಕ್ತರೊಂದಿಗೆ ಅರ್ಚಕರ ಮನೆಗೆ ಊಟಕ್ಕೆಂದು ಹೋದರು. ಊಟ ಮಾಡುತ್ತಿರುವಾಗ ಅರ್ಚಕರು ತಮ್ಮ ಮಗನಿಗೆ, “ಹೂಮಾಲೆ ಮತ್ತು ಪೇಡಾ ತೆಗೆದುಕೊಂಡು ಬಾ”, ಎಂದು ಹೇಳಿದನು. ಅದನ್ನು ಕೇಳಿದ ಮಹಾರಾಜರು, “ನೀವೇಕೆ ಅಷ್ಟು ಅವಸರ ಮಾಡುತ್ತೀರಿ ?” ಆಗ ಅರ್ಚಕರು “ಇಲ್ಲಿ ಎಂಟೂವರೆಗೆ ಎಲ್ಲ ಅಂಗಡಿಗಳು ಮುಚ್ಚುತ್ತವೆ. ಆದ್ದರಿಂದ ನಾನು ಹೂವಿನ ಮಾಲೆ ಮತ್ತು ಪೇಡಾ ತರಲು ಹೇಳುತ್ತಿದ್ದೇನೆ” ಎಂದು ಉತ್ತರಿಸಿದರು. ಆಗ ಮಹಾರಾಜರು, “ನಮಗೆ ವಿಠಲನು ೧೦ ಗಂಟೆಗೆ ದರ್ಶನದ ಸಮಯವನ್ನು ನೀಡಿದ್ದಾನೆ, ಅವನಿಗೆ ನಮ್ಮ ಕೈಯಿಂದ ಹೂಮಾಲೆಯನ್ನು ಸ್ವೀಕರಿಸಲು ಇದ್ದಲ್ಲಿ, ಅವರು ಅಂಗಡಿಯನ್ನು ತೆರೆದಿಡುತ್ತಾರೆ ಮತ್ತು ಅಂಗಡಿ ಮುಚ್ಚಿದರೆ, ಏನೂ ತೊಂದರೆಯಿಲ್ಲ ನಾವು ಕೈಮುಗಿದು ನಮಸ್ಕರಿಸಿ ಬರೋಣ” ಎಂದರು.
ರಾತ್ರಿ ಒಂಬತ್ತು ಮುಕ್ಕಾಲು ಗಂಟೆಗೆ ಮಹಾರಾಜರು ಮತ್ತು ಅವರ ಭಕ್ತರು ಅರ್ಚಕರ ಮನೆಯಿಂದ ಹೊರಬಂದರು. ಅರ್ಚಕರ ಮನೆಯ ಮುಂದೆಯೇ ವಿಠ್ಠಲನ ದೇವಸ್ಥಾನವಿತ್ತು. ಎಲ್ಲರೂ ಹೊರಗೆ ಬಂದು ನೋಡಿದರೆ ಹತ್ತು ಗಂಟೆಯ ಹೊತ್ತಿಗೆ ಎಲ್ಲ ಮಿಠಾಯಿ ಮತ್ತು ಹೂವಿನ ಮಾಲೆಯ ಅಂಗಡಿಗಳು ತೆರೆದಿದ್ದವು. ಇದನ್ನು ನೋಡಿ ಅರ್ಚಕರು ಆಶ್ಚರ್ಯಚಕಿತರಾದರು. ಭಕ್ತರಾಜ ಮಹಾರಾಜರು ಪೇಡಾ ಮತ್ತು ಹೂವಿನ ಹಾರಗಳೊಂದಿಗೆ ದೇವಸ್ಥಾನಕ್ಕೆ ಹೋದರು.
ಭಕ್ತರಾಜ ಮಹಾರಾಜರನ್ನು ಎಲ್ಲರೂ ಪ್ರೀತಿಯಿಂದ ಬಾಬಾ ಎಂದು ಕರೆಯುತ್ತಿದ್ದರು. ಬಾಬಾರವರು ವಿಠ್ಠಲನ ಮುಂದೆ ನಿಂತರು. ಭಕ್ತರೆಲ್ಲರೂ ಅವರ ಹತ್ತಿರ ನಿಂತರು. ಭಕ್ತರಾಜ ಮಹಾರಾಜರು ಶ್ರೀ ವಿಠ್ಠಲನ ಕೊರಳಲ್ಲಿ ಹಾರವನ್ನು ಹಾಕಿ ಸಿಹಿತಿಂಡಿಯ ಪೆಟ್ಟಿಗೆಯಿಂದ ಒಂದು ಪೇಡಾವನ್ನು ತೆಗೆದು ಶ್ರೀ ವಿಠ್ಠಲನ ಬಾಯಿಗೆ ಹಾಕಿದರು, ಅಂದರೆ ಅದನ್ನು ಬಾಯಿಯ ಬಳಿ ತೆಗೆದುಕೊಂಡರು. ನಂತರ ಅರ್ಧ ಪೇಢಾ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಆ ಸಮಯದಲ್ಲಿ ಬಾಬಾರವರ ಮುಖ ಕೆಂಪಾಯಿತು.
ಭಕ್ತರಾಜ ಮಹಾರಾಜರ ಬಳಿ ನಿಂತಿದ್ದ ಅರ್ಚಕರು, “ಮಹಾರಾಜರೇ, ಹೀಗೆ ಪೇಡಾವನ್ನು ವಿಗ್ರಹದ ಇಷ್ಟು ಹತ್ತಿರ ಹಿಡಯಬಾರದು” ಎಂದರು. ಅರ್ಚಕರು ವಿಗ್ರಹಕ್ಕೆ ತಿನ್ನಿಸಿದ ಪೇಡಾವನ್ನು ಹುಡುಕಲು ವಿಗ್ರಹದ ಹತ್ತಿರ ಹೋಗಿ ಹುಡುಕತೊಡಗಿದರು. ಎಲ್ಲ ಹೂಮಾಲೆಗಳನ್ನು ತೆಗೆದರು. ಅದರ ನಂತರವೂ ಅವರಿಗೆ ಎಲ್ಲಿಯೂ ಪೇಡಾದ ತುಣುಕು ಸಿಗಲಿಲ್ಲ. ಭಕ್ತರಾಜ ಮಹಾರಾಜರು ಶ್ರೀ ವಿಠ್ಠಲನ ಚರಣಗಳನ್ನು ಮುಟ್ಟಿದರು, ನಂತರ ಅವರಿಗೆ ಬಲ ಚರಣದ ಬಳಿ ಉಳಿದ ಅರ್ಧ ಪೇಢೆ ಸಿಕ್ಕಿತು. ಆ ಪೇಡಾವನ್ನು ತಮ್ಮ ಭಕ್ತರಿಗೆ ಪ್ರಸಾದವೆಂದು ಕೊಟ್ಟರು.
ಅದರ ನಂತರ, ಭಕ್ತರಾಜ ಮಹಾರಾಜರು ತಕ್ಷಣ ಹೊಳ್ಕರ ನಿವಾಸಕ್ಕೆ ಬಂದರು. ನಿವಾಸವನ್ನು ಪ್ರವೇಶಿಸಿದ ನಂತರ, ಅವರು ಕಂಬದ ಬಳಿ ಇರಿಸಿದ ಕುರ್ಚಿಯಲ್ಲಿ ಕುಳಿತರು. ಅವರ ಮುಖವು ಕೆಂಪಾಗಿ ಕಾಣುತ್ತಿತ್ತು. ಅವರು ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅವರ ಭಕ್ತರೊಬ್ಬರು ಹೋಗಿ ಅವರನ್ನು ಕೇಳಿದಾಗ ಭಜನೆ ಹಾಡಲು ಹೇಳಿದರು. ಎಲ್ಲರೂ ಭಜನೆಯನ್ನು ಪ್ರಾರಂಭಿಸಿದರು. ಭಜನೆಯ ಸಮಯದಲ್ಲಿ ಜೋರಾಗಿ ಅಳುವ ಶಬ್ದ ಕೇಳಿಸಿತು. ಎಲ್ಲಾ ಭಕ್ತರು ಹೋಗಿ ಮಹಾರಾಜರನ್ನು ನೋಡಿದಾಗ, ಅವರು ಭಾವದಿಂದ ಮುಳುಗಿ ಹೋಗಿರುವುದನ್ನು ನೋಡಿದರು. ನಂತರ ಎಲ್ಲ ಭಕ್ತರು ಆರತಿ ಮಾಡಿದರು. ಆ ನಂತರ ಬಾಬಾ ವಿಶ್ರಾಂತಿಗೆ ಹೋದರು. ಮರುದಿನ ಭಕ್ತರಾಜ ಮಹಾರಾಜರು ತಮ್ಮ ಭಕ್ತರಿಗೆ “ನನ್ನ ಕಣ್ಣಿನಿಂದ ಬಂದ ಕಣ್ಣೀರು ಸಂತೋಷ ಮತ್ತು ದುಃಖದ ಕಣ್ಣೀರು ಆಗಿತ್ತು” ಎಂದು ಹೇಳಿದರು. “ನನ್ನ ಗುರುಗಳ ಕೃಪೆಯಿಂದಾಗಿ, ನಾನು ನೇರವಾಗಿ ಶ್ರೀವಿಠ್ಠಲನ ದರ್ಶನವನ್ನು ಪಡೆದೆ ಮತ್ತು ನಾನು ಅವನಿಗೆ ಪೇಡಾವನ್ನು ತಿನ್ನಿಸಿದ್ದೇನೆ, ಹಾಗಾಗಿ ನಾನು ಆನಂದದಿಂದ ಇದ್ದೇನೆ. ಆದರೆ ಕಲ್ಲಿನ ವಿಗ್ರಹದಿಂದ ಶ್ರೀ ವಿಠ್ಠಲನು ನನ್ನ ಬಳಿಗೆ ಬಂದು ನನಗೆ ಸಗುಣ ರೂಪದಲ್ಲಿ ದರ್ಶನ ನೀಡಿದರು ಎಂದು ದುಃಖದ ಕಣ್ಣೀರು ಬಂತು. ಕಲ್ಲಿನಿಂದ ಹೊರಬರಲು ವಿಠಲನಿಗೆ ಎಷ್ಟು ಕಷ್ಟಗಳನ್ನು ಅನುಭವಿಸಬೇಕಾಯಿತೋ ಏನೋ !” ಎಂದು ಹೇಳಿದರು.
ಮಕ್ಕಳೇ, ಸಂತರು ಹೇಗೆ ಇರುತ್ತಾರೆ ಎಂದು ನಿಮಗೆ ಅರ್ಥವಾಯಿತಲ್ಲವೇ? ಪ.ಪೂ. ಭಕ್ತರಾಜ ಮಹಾರಾಜರ ಭಕ್ತಿಗೆ ಮೆಚ್ಚಿ ಶ್ರೀ ವಿಠ್ಠಲನು ತನ್ನ ಭಕ್ತನಿಗೋಸ್ಕರ ಬಂದು ಪೇಡಾ ತಿಂದನು. ಪ.ಪೂ. ಭಕ್ತರಾಜ ಮಹಾರಾಜರಿಗೆ, ದೇವರು ಕಲ್ಲಿನಿಂದ ಹೊರ ಬರಲು ತುಂಬಾ ಕಷ್ಟಗಳನ್ನು ಅನುಭವಿಸಬೇಕಾಯಿತು ಎಂಬ ವಿಚಾರದಿಂದ ತುಂಬಾ ದುಃಖವಾಗಿತ್ತು!