ತುಂಬಾ ಹಿಂದೆ ಸಾಧು ಮಹಾರಾಜರೊಬ್ಬರಿದ್ದರು. ಅವರು ರಾಮಾಯಣದ ಕಥೆಯನ್ನು ಹೇಳುತ್ತಿದ್ದರು. ಅವರ ಕಥೆಯನ್ನು ಕೇಳಿದ ಜನರು ಆನಂದದಿಂದ ಪುಳಕಿತರಾಗುತ್ತಿದ್ದರು. ಆ ಸಾಧು ಮಹಾರಾಜರು ಒಂದು ನಿಯಮ ಪಾಲಿಸುತ್ತಿದ್ದರು, ಅದೇನೆಂದರೆ ಪ್ರತಿದಿನ ಅವರು ಕಥೆಯನ್ನು ಆರಂಭಿಸುವ ಮೊದಲು ಹನುಮಂತನನ್ನು ಕಥೆಯನ್ನು ಕೇಳಲು ಆಹ್ವಾನಿಸುತ್ತಿದ್ದರು. ಅವರು ಎಲ್ಲಿ ಪ್ರವಚನ ಮಾಡುತ್ತಿದ್ದರೋ ಅಲ್ಲಿ ಹನುಮಂತನಿಗೆ ಕುಳಿತುಕೊಳ್ಳಲು ಆಸನದ ರೂಪದಲ್ಲಿ ಸಿಂಹಾಸನವನ್ನು ಇಡುತ್ತಿದ್ದರು. “ಹನುಮಾನಜೀ ಬನ್ನಿ, ವಿರಾಜಮಾನರಾಗಿ” ಎಂದು ಹೇಳಿ ಹನುಮಂತನನ್ನು ಆಹ್ವಾನಿಸುತ್ತಿದ್ದರು, ಅದರ ಬಳಿಕ ಒಂದು ಗಂಟೆ ಕಥೆಯನ್ನು ಹೇಳುತ್ತಿದ್ದರು.
ಒರ್ವ ವ್ಯಕ್ತಿಯು ಪ್ರತಿನಿತ್ಯ ರಾಮಕಥೆಯನ್ನು ಕೇಳಲು ಬರುತ್ತಿದ್ದನು. ಅವನು ಭಕ್ತಿ-ಭಾವದಿಂದ ಕಥೆಯನ್ನು ಕೇಳುತ್ತಿದ್ದರು. ಆದಾಗ್ಯೂ ಒಂದು ದಿನ ಅವನ ಮನಸ್ಸಿನಲ್ಲಿ ಒಂದು ವಿಚಾರ ಬಂತು. ‘ಮಹಾರಾಜರು ಕಥೆಯನ್ನು ಆರಂಭಿಸುವ ಮೊದಲು “ಹನುಮಾನಜೀ ಬನ್ನಿ, ವಿರಾಜಮಾನರಾಗಿ” ಹೀಗೆ ಹೇಳಿ ಏನೋ ಹನುಮಂತನನ್ನು ಕರೆಯುತ್ತಾರೆ, ಆದರೆ ಹನುಮಂತನು ನಿಕವಾಗಿಯೂ ಅಲ್ಲಿಗೆ ಬರುತ್ತಾನೆಯೇ?’ ಎಂದು!
ಒಂದು ದಿನ ರಾಮಕಥೆಯನ್ನು ಕೇಳಲು ಬರುವ ವ್ಯಕ್ತಿಯು ಸಾಧು ಮಹಾರಾಜರಿಗೆ “ಮಹಾರಾಜರೇ, ನೀವು ರಾಮಾಯಣದ ಕಥೆಯನ್ನು ತುಂಬಾ ಚೆನ್ನಾಗಿ ಹೇಳುತ್ತೀರಿ. ನಮಗೆ ತುಂಬಾ ಆನಂದವು ಸಿಗುತ್ತಿದೆ; ಆದರೆ ನೀವು ಪ್ರತಿದಿನ ಹನುಮಂತನಿಗಾಗಿ ಆ ಸಿಂಹಾಸನವನ್ನು ಇಡುತ್ತೀರಿ, ಹನುಮಂತನು ನಿಜವಾಗಿಯೂ ಬಂದು ಅಲ್ಲಿ ಕುಳಿತುಕೊಳ್ಳುತ್ತಾನೆಯೇ?” ಎಂದು ಕೇಳಿಯೇ ಬಿಟ್ಟ.
ಸಾಧು ಮಾಹಾರಾಜರು ಉತ್ತರಿಸುತ್ತಾ, “ಹಾ ಇದು ನನ್ನ ಶ್ರದ್ದೆಯಾಗಿದೆ. ಎಲ್ಲಿ ರಾಮಕಥೆಯನ್ನು ಹೇಳಲಾಗುತ್ತದೆಯೋ ಮತ್ತು ಆಲಿಸಲಾಗುತ್ತದೆಯೋ ಅಲ್ಲಿ ಹನುಮಂತನು ಅವಶ್ಯವಾಗಿ ಇರುವನು ಎಂದು ಹನುಮಂತನು ವರವನ್ನು ಪಡೆದಿದ್ದಾನ್ನಲ್ಲವೇ? ಅದಕ್ಕೆ ಇಲ್ಲಿ ಸಿಂಹಾಸನವನ್ನು ಇಡುತ್ತೇನೆ” ಎಂದರು. ಆ ವ್ಯಕ್ತಿಯು ತನ್ನ ಮಾತನ್ನು ಮುಂದುವರಿಸುತ್ತಾ, “ಆದರೆ ಹನುಮಂತನು ಇಲ್ಲಿಗೆ ಬರುತ್ತಾನೆ ಎಂದು ನಾವು ಹೇಗೆ ತಾನೆ ವಿಶ್ವಾಸವಿಡಬೇಕು? ನೀವು ಇದರ ಪುರಾವೆ ನೀಡಬೇಕು. ಹನುಮಂತನು ತಮ್ಮ ಪ್ರವಚನವನ್ನು ಕೇಳಲು ಇಲ್ಲಿಗೆ ಬರುತ್ತಾನೆ ಎಂಬುದನ್ನು ನೀವು ಸಾಕ್ಷಿ ಸಹಿತ ಪ್ರಮಾಣೀಕರಿಸಬೇಕು” ಎಂದು ಸವಾಲು ಹಾಕಿದನು.
ಮಹಾರಾಜರು ತುಂಬಾ ವಿವರಣೆಯನ್ನು ನೀಡುತ್ತಾ ‘ನಂಬಿಕೆಯನ್ನು ಯಾವುದೇ ಸಾಕ್ಷಿಯ ಮಾನದಂಡ ಅನುಸರಿಸಿ ಅಳೆಯಬಾರದು. ಇದು ಭಕ್ತ ಮತ್ತು ಭಗವಂತನ ನಡುವೆ ಇರುವ ಪ್ರೇಮರಸವಾಗಿದೆ ಹಾಗೂ ವ್ಯಕ್ತಿಗತ ಶ್ರದ್ಧೆಯ ವಿಷಯವಾಗಿದೆ. ನೀವು ಹೇಳಿದಲ್ಲಿ ನಾನು ನನ್ನ ಪ್ರವಚನವನ್ನು ನಿಲ್ಲಿಸುವೆನು ಅಥವಾ ನೀವು ಪ್ರವಚನಕ್ಕೆ ಬರುವುದನ್ನು ನಿಲ್ಲಿಸಿರಿ’ ಎಂದು ತಿಳಿಸಲು ಪ್ರಯತ್ನಿಸಿದರು.
ಆದರೂ ಆ ವ್ಯಕ್ತಿ ಮಾತ್ರ ತನ್ನ ಹಠವನ್ನು ಬಿಡಲಿಲ್ಲ. ಮಹಾರಾಜರಿಗೆ “ನೀವು ವಿಷಯ ಬದಲಾಯಿಸಬೇಡಿ. ನೀವು ಹನುಮಂತನು ಕಥೆಯನ್ನು ಕೇಳಲು ಬರುತ್ತಾನೋ ಇಲ್ಲವೋ ಎಂಬ ವಿಷಯವನ್ನು ಪ್ರಮಾಣೀಕರಿಸಬೇಕು” ಎಂದನು.
ಹೀಗೆ ಇಬ್ಬರ ನಡುವೆ ವಿವಾದವು ನಡೆಯುತ್ತಲೇ ಇತ್ತು. ಕೊನೆಯಲ್ಲಿ ಸಾಧು ಮಹಾರಾಜರು ಹೇಳಿದರು, “ಹನುಮಂತನು ಬರುತ್ತಾನೋ ಇಲ್ಲವೋ ಇದರ ಸಾಕ್ಷಿಯನ್ನು ನಾನು ನಿನಗೆ ನಾಳೆ ನೀಡುವೆನು. ನಾಳೆ ಕಥೆ ಪ್ರಾರಂಭಿಸುವ ಮೊದಲು ಒಂದು ಪ್ರಯೋಗವನ್ನು ಮಾಡೋಣ. ಹನುಮಂತನನ್ನು ನಾನು ಯಾವ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಹೇಳಿರುವೆನೋ, ಆ ಸಿಂಹಾಸನವನ್ನು ಇಂದು ನೀವು ನಿಮ್ಮ ಮನೆಗೆ ಕೊಂಡೊಯ್ಯಬೇಕು ಮತ್ತು ನಾಳೆ ವಾಪಸು ಬರುವಾಗ ಪುನಃ ತರಬೇಕು. ಅದರ ನಂತರ ನಾನು ಸಿಂಹಾಸನವನ್ನು ಇಲ್ಲಿ ಇಡುವೆನು. ಕಥೆಯನ್ನು ಆರಂಭಿಸುವ ಮೊದಲು ಹನುಮಂತನನ್ನು ಕರೆಯುವೆನು. ಸ್ವಲ್ಪ ಸಮಯ ಕಳೆದ ಬಳಿಕ ನೀವು ಸಿಂಹಾಸನವನ್ನು ಎತ್ತಿ ತೋರಿಸಬೇಕು. ಒಂದು ವೇಳೆ ನಿಮಗೆ ಸಿಂಹಾಸನವನ್ನು ಎತ್ತಲು ಆಗುತ್ತದೆ ಎಂದಾದರೆ, ಹನುಮಂತನು ಬರಲಿಲ್ಲ ಎಂಬುದಾಗಿ ತಿಳಿಯಬೇಕು”.
ಆ ವ್ಯಕ್ತಿಯು, ಸಾಧು ಹೇಳಿದ ಪರೀಕ್ಷೆಗೆ ಒಪ್ಪಿದನು. ಮಹಾರಾಜರು ಹೇಳಿದರು, “ನಮ್ಮ ಇಬ್ಬರಲ್ಲಿ ಯಾರು ಸೋಲುತ್ತಾರೋ, ಅವರು ಏನು ಮಾಡಬೇಕು, ಇದರ ನಿರ್ಣಯವನ್ನೂ ಮಾಡಿ. ಇದು ಸತ್ಯದ ಪರೀಕ್ಷೆಯಾಗಿದೆ’ ಎಂದರು. ಮಹಾರಾಜರ ಮಾತಿಗೆ ಉತ್ತರಿಸುತ್ತಾ ಆ ವ್ಯಕ್ತಿಯು “ನನಗೆ ಸಿಂಹಾಸನವನ್ನು ಎತ್ತಲು ಸಾಧ್ಯವಾಗದಿದ್ದರೆ ನಿಮ್ಮಿಂದ ದೀಕ್ಷೆಯನ್ನು ಪಡೆಯುವೆನು. ಆದರೆ ನೀವು ಸೋತರೆ ಏನು ಮಾಡುವಿರಿ?” ಮಹಾರಾಜರು ವ್ಯಕ್ತಿಯ ಮಾತಿಗೆ ಉತ್ತರಿಸುತ್ತಾ “ನಾನು ನನ್ನ ಕಥಾ ವಾಚನವನ್ನು ನಿಲ್ಲಿಸಿ ನಿಮ್ಮ ಸೇವಕನಾಗುವೆ” ಎಂದರು.
ಮರುದಿನದ ಕಥಾ ವಾಚನದ ವಿಷಯವು ತುಂಬಾ ರೋಚಕವಾಗಿತ್ತು. ಎಲ್ಲಾ ಜನರು ಭಕ್ತಿ, ಶ್ರದ್ದೆ, ಪ್ರೇಮ ಮತ್ತು ವಿಶ್ವಾಸದಿಂದ ಪರೀಕ್ಷೆಯನ್ನು ನೋಡಲು ಸೇರಿದರು. ಸಾಧು ಮಹಾರಾಜರು ಮತ್ತು ಆ ವ್ಯಕ್ತಿಯು ಕಥಾ ವಾಚನದ ಸ್ಥಳಕ್ಕೆ ಬಂದರು. ಆ ವ್ಯಕ್ತಿಯು ಸಿಂಹಾಸನವನ್ನು ಮಹಾರಾಜರ ಕೈಯಲ್ಲಿ ನೀಡಿದನು. ಪ್ರತಿದಿನವೂ ಹನುಮಂತನಿಗೆ ಕುಳಿತುಕೊಳ್ಳಲು ಎಲ್ಲಿ ಸಿಂಹಾಸನವನ್ನು ಇರಿಸಲಾಗುತ್ತಿತ್ತೊ, ಅದೇ ಸ್ಥಳದಲ್ಲಿ ಸಿಂಹಾಸನವನ್ನು ಇಡಲಾಯಿತು.
ಮಹಾರಾಜರು ಆರ್ತತೆಯಿಂದ ಮಂಗಳಾರತಿಯನ್ನು ಮಾಡಿದರು ಮತ್ತು ಪ್ರಾರ್ಥಿಸುತ್ತ “ಹನುಮಾನಜೀ ಬನ್ನಿ, ವಿರಾಜಮಾನರಾಗಿ”. ಇಷ್ಟು ಹೇಳುತ್ತಲೇ ಸಾಧು ಮಹಾರಾಜರ ಕಣ್ಣುಗಳಲ್ಲಿ ಕಣ್ಣೀರು ಹರಿಯಿತು. ಒಲ್ಲದ ಮನಸ್ಸಿನಿಂದ ಮಹಾರಾಜರು “ಹೇ ಪ್ರಭು! ಇಂದು ನನ್ನ ಪರೀಕ್ಷೆಯಲ್ಲ ನಿಮ್ಮದೇ ಪರೀಕ್ಷೆಯಾಗಿದೆ. ನಾನೊಬ್ಬ ಸಾಧಾರಣ ವ್ಯಕ್ತಿಯಾಗಿದ್ದೇನೆ. ನನ್ನ ಭಕ್ತಿ ಹಾಗೂ ಶ್ರದ್ಧೆಯನ್ನು ರಕ್ಷಿಸಿ” ಎಂದು ದೀನರಾಗಿ ಪ್ರಾರ್ಥನೆಯನ್ನು ಮಾಡಿದರು.
ಸಾಧು ಮಹಾರಾಜರು ಪ್ರಾರ್ಥನೆಯನ್ನು ಮಾಡಿದರು ಮತ್ತು ಆ ವ್ಯಕ್ತಿಗೆ ಸಿಂಹಾಸನವನ್ನು ಎತ್ತಲು ಸೂಚಿಸಿದರು. ಎಲ್ಲರ ದ್ರಷ್ಟಿಯು ಸಿಂಹಾಸನದತ್ತ ಹೋಯಿತು. ಸಾಧು ಮಹಾರಾಜರು ಹೇಳಿದರು “ಮಹಾಶಯರೇ ಸಿಂಹಾಸನವನ್ನು ಎತ್ತಿರಿ”.
ಆ ವ್ಯಕ್ತಿಯು ಸಿಂಹಾಸನವನ್ನು ಎತ್ತಲು ಕೈಯನ್ನು ಮುಂದೆ ಚಾಚಿದನು, ಆದರೆ ಆಶ್ಚರ್ಯದ ಮಾತೆಂದರೆ ಆ ವ್ಯಕ್ತಿಗೆ ಸಿಂಹಾಸನವನ್ನು ಸ್ಪರ್ಶಿಸಲು ಕೂಡ ಸಾಧ್ಯವಾಗಲಿಲ್ಲ. ಮೂರು ಬಾರಿ ವ್ಯಕ್ತಿಯು ಸಿಂಹಾಸನವನ್ನು ಎತ್ತಲು ಕೈ ಚಾಚಿದ ಆದರೆ ಸಿಂಹಾಸನವನ್ನು ಸ್ಪರ್ಶಿಸಲೂ ಸಾಧ್ಯವಾಗಲಿಲ್ಲ. ಮೂರು ಬಾರಿ ಪ್ರಯತ್ನಿಸಿದರೂ ಆಗದೆ ಅವನಿಗೆ ಬೆವರಿಳಿಯಿತು. ಆ ವ್ಯಕ್ತಿಗೆ ಇದು ಸಾಕ್ಷಾತ್ ಹನುಮಂತನ ಪವಾಡ ಎಂಬುದು ಅರ್ಥವಾಯಿತು ಹಾಗೂ ಆ ವ್ಯಕ್ತಿಯು ಸಾಧು ಮಹಾರಾಜರ ಕಾಲಿಗೆರಗಿ ಕ್ಷಮೆಯಾಚೊಸಿದನು. “ಮಹಾರಾಜರೇ, ಸಿಂಹಾಸನವನ್ನು ಎತ್ತುವ ಮಾತು ದೂರ, ನನ್ನ ಕೈಗಳು ಸಿಂಹಾಸನದವರೆಗೆ ತಲುಪುತ್ತಿಲ್ಲ. ಯಾಕೆ ಹೀಗಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ನಾನು ಸೋಲೊಪ್ಪಿಕೊಳ್ಳುತ್ತೇನೆ” ಎಂದನು.
ಆ ವ್ಯಕ್ತಿಯು ಮಾತು ಕೊಟ್ಟಂತೆ ಸಾಧು ಮಹಾರಾಜರಿಂದ ದೀಕ್ಷೆಯನ್ನು ಪಡೆದು ಭಗವಂತನ ಸೇವೆಯಲ್ಲಿ ಜೀವನ ಅರ್ಪಿಸಿದನು.
ಮಕ್ಕಳೇ, ಶ್ರದ್ದೆ ಮತ್ತು ಭಕ್ತಿಯ ಜೊತೆಗೂಡಿ ಮಾಡಿದ ಆರಾಧನೆಗೆ ತುಂಬಾ ಶಕ್ತಿಯಿರುತ್ತದೆ ಎಂಬುದನ್ನು ಅರಿತೆವು. ಭಗವಂತನ ಮೂರ್ತಿಯು ಕಲ್ಲಿನದ್ದಾಗಿರುತ್ತದೆ ಆದರೆ ಭಕ್ತನ ಭಕ್ತಿಯಿಂದ ಅದರಲ್ಲಿ ಪ್ರಾಣ ಪ್ರತಿಷ್ಠೆಯಾಗುತ್ತದೆ ಮತ್ತು ಸ್ವಯಂ ಭಗವಂತನೇ ಅದರಲ್ಲಿ ವಿರಾಜಮಾನನಾಗುತ್ತಾನೆ.