ಮಕ್ಕಳೇ, ಈ ಲೇಖನದಲ್ಲಿ ಸ್ವಭಾವ ಹೇಗೆ ನಿರ್ಮಾಣವಾಗುತ್ತದೆ, ಸ್ವಭಾವದ ಗುಣ-ದೋಷಗಳ ನಮ್ಮ ಮೇಲೆ ಯಾವ ರೀತಿಯ ಪರಿಣಾಮ ಆಗುತ್ತದೆ, ಸ್ವಭಾವದೋಷಗಳಿಂದ ಯಾವ ರೀತಿಯ ಹಾನಿಯಾಗುತ್ತದೆ ಎಂಬುವುದನ್ನು ತಿಳಿದುಕೊಳ್ಳೋಣ.
೧. ಸ್ವಭಾವ ಹೇಗೆ ನಿರ್ಮಾಣವಾಗುತ್ತದೆ ?
ವ್ಯಕ್ತಿಯ ಸ್ವಭಾವವು ಅವನ ನಡವಳಿಕೆಯನ್ನು ಅವಲಂಬಿಸಿರುತ್ತದೆ. ಒಬ್ಬ ಹುಡುಗ ತನ್ನ ಸ್ನೇಹಿತರಿಗೆ ತನ್ನ ವಸ್ತುಗಳನ್ನು ಬಳಸಲು ನೀಡಿದರೆ, ಅವನು ಇತರರಿಗೆ ಸಹಾಯ ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಯಾವುದೇ ಕ್ಷುಲ್ಲಕ ಕಾರಣಕ್ಕಾಗಿ ಕೋಪ ಬಂದರೆ, ಆತನನ್ನು ‘ಕೋಪಿಷ್ಠ’ ಎಂದು ಕರೆಯಲಾಗುತ್ತದೆ. ಯಾರಾದರೂ ಸಣ್ಣ-ಪುಟ್ಟ ಅಥವಾ ದೊಡ್ಡ-ದೊಡ್ಡ ಕೆಲಸಗಳನ್ನು ಮಾಡಲು ಮರೆತುಬಿಟ್ಟರೆ, ಅವರನ್ನು ‘ಮರೆಗುಳಿ’ ಎಂದು ಕರೆಯಲಾಗುತ್ತದೆ. ಸಂಕ್ಷಿಪ್ತವಾಗಿ, ಒಬ್ಬರ ಸ್ವಭಾವವನ್ನು ಅವರ ನಡವಳಿಕೆಯಿಂದ ನಿರ್ಧರಿಸಲಾಗುತ್ತದೆ.
೨. ಸದ್ಗುಣಗಳು ಮತ್ತು ದೋಷಗಳ ಪರಿಣಾಮವೇನು?
ಮಕ್ಕಳ ಸದ್ಗುಣಗಳಿಂದಾಗಿ, ಎಲ್ಲರಿಗೂ ಅವರ ಬಗ್ಗೆ ಪ್ರೀತಿ ಎನಿಸುತ್ತದೆ. ಆದರೆ ಸ್ವಭಾವದಲ್ಲಿರುವ ದೋಷಗಳಿಂದ, ಪ್ರತಿಯೊಬ್ಬರೂ ದೂರವಿರಲು ಪ್ರಯತ್ನಿಸುತ್ತಾರೆ. ಸದ್ಗುಣಗಳಿಂದ ಮಕ್ಕಳು ಆನಂದಿಗಳಾದರೆ, ದೋಷಗಳಿಂದ ದುಃಖಿತರಾಗುತ್ತಾರೆ. ಅಂದರೆ ಸದ್ಗುಣ ಮತ್ತು ದೋಷಗಳಿಂದ ನಮ್ಮ ಜೀವನದಲ್ಲಿ ಸುಖ-ದುಃಖದ ಏರಿಳಿತಗಳು ಬರುತ್ತದೆ. ಇದರಿಂದ ಯಾವ ರೀತಿಯ ಸಮಸ್ಯೆಗಳು ಬರುತ್ತವೆ ಎಂದು ನೋಡೋಣ.
೩. ಸ್ವಭಾವದೋಷಗಳಿಂದ ಮಕ್ಕಳಿಗೆ ಆಗುವ ಹಾನಿ
ತುಂಬಾ ಸ್ವಭಾವದೋಷಗಳನ್ನು ಹೊಂದಿರುವ ಮಕ್ಕಳ ಜೀವನದಲ್ಲಿ ಮಾನಸಿಕ ಒತ್ತಡ ಹೆಚ್ಚಿಸುವ ಮತ್ತು ದುಃಖ ತರುವಂತಹ ಅನೇಕ ಪ್ರಸಂಗಗಳು ನಿರ್ಮಾಣವಾಗುತ್ತವೆ. ಇದರಿಂದ ಮಕ್ಕಳು ಹತಾಶರಾಗಿ ದುಃಖಿಗಳಾಗುತ್ತಾರೆ. ಇದರ ಜೊತೆಗೆ, ಸ್ವಭಾವದೋಷಗಳಿಂದ ಮಕ್ಕಳಿಗೆ ಹೇಗೆ ಹಾನಿಯಾಗಬಹುದು ಎಂಬುದನ್ನು ಈ ಕೆಳಗಿನ ಉದಾಹರಣೆಗಳಿಂದ ತಿಳಿಯುತ್ತದೆ.
ಅ. ವಿದ್ಯಾರ್ಥಿ ಜೀವನದಲ್ಲಿ ಆಗುವ ಹಾನಿ
೧. ಅಧ್ಯಯನದಲ್ಲಿ ಮಕ್ಕಳ ಏಕಾಗ್ರತೆ ಕಡಿಮೆಯಾಗುತ್ತದೆ.
೨. ಅವರ ಆತ್ಮವಿಶ್ವಾಸ ಕಡಿಮೆಯಾಗುತ್ತದೆ.
೩. ಮನೆಗೆಲಸ ಸಮಯಕ್ಕೆ ಸರಿಯಾಗಿ ಪೂರ್ಣವಾಗುವುದಿಲ್ಲ.
೪. ಸ್ನೇಹಿತರೊಂದಿಗೆ ಹೊಂದಿಕೆಯಾಗುವುದಿಲ್ಲ.
ಆ. ಇತರ ಹಾನಿಗಳು
೧. ಮಕ್ಕಳು ಒಬ್ಬಂಟಿ ಮತ್ತು ಸ್ವಾರ್ಥಿಗಳಾಗುತ್ತಾರೆ.
೨. ಮಕ್ಕಳಿಗೆ ಸಹಜವಾಗಿ ಕಿರಿಕಿರಿಯಾಗಿ ಕೋಪ ಬರುತ್ತದೆ.
೩. ಮಕ್ಕಳು ವ್ಯಸನಿಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ.
೪. ಇಂತಹ ಮಕ್ಕಳು ಕೆಟ್ಟವರ ಸಹವಾಸದಲ್ಲಿ ಬಿದ್ದು ಕಳ್ಳತನ ಮಾಡುವ, ಗೂಂಡಾಗಿರಿ ಮಾಡುವಂತಹ ದಾರಿ ಹಿಡಿಯಬಹುದು.
ಮಕ್ಕಳೇ, ಈ ಲೇಖನದಿಂದ, ನಮ್ಮ ಸ್ವಭಾವದಲ್ಲಿನ ದೋಷಗಳಿಂದಾಗಿ ನಮಗೆ ಎಷ್ಟು ಹಾನಿಯಾಗಬಹುದು ಎಂಬುದನ್ನು ನಿಮಗೆ ಗೊತ್ತಾಗಿರಬಹುದು! ಇಂದಿನಿಂದ ಅಲ್ಲ, ಈಗಿನಿಂದಲೇ ದೋಷಗಳನ್ನು ನಿವಾರಿಸಲು ಪ್ರಯತ್ನಿಸೋಣ.
ಆಧಾರ : ಸನಾತನದ ಗ್ರಂಥ, ‘ದೋಷ ನಿವಾರಿಸಿ ಮತ್ತು ಆನಂದಿತರಾಗಿರಿ!‘