ಮಕ್ಕಳು ಚಿತ್ರಕಥೆ (ಕಾಮಿಕ್ಸ್) ಓದುವುದಕ್ಕಿಂತ ಪುರಾಣದಲ್ಲಿನ ಕಥೆಗಳನ್ನು ಓದುವುದರಿಂದ ಎಲ್ಲ ವಿಧಗಳಲ್ಲಿ ಅವರ ವಿಕಾಸವಾಗುವುದು
‘ಮಕ್ಕಳು ಎಲ್ಲಿಯೂ, ಎಂದಿಗೂ, ಯಾರೊಂದಿಗೂ ಇದ್ದರೂ ಅವರಿಗೆ ಚಿತ್ರಕಥೆಗಳದ್ದೇ ಅಮಲಿರುತ್ತದೆ. ಚಿತ್ರಕಥೆಗಳು (ಕಾಮಿಕ್ಸ್) ಮಕ್ಕಳ ಮಾನಸಿಕ, ವೈಚಾರಿಕ ಹಾಗೂ ಚಾರಿತ್ರ್ಯವನ್ನು ನಾಶಗೊಳಿಸುತ್ತವೆ. ಚಿತ್ರಕಥೆಗಳು ಮಕ್ಕಳ ಮನಸ್ಸು, ಬುದ್ಧಿ ಮತ್ತು ಎಲ್ಲ ರೀತಿಯ ವ್ಯಕ್ತಿತ್ವವನ್ನೇ ವಿಕೃತ, ಒಬ್ಬಂಟಿಗ, ಸಂವೇದನಶೂನ್ಯ ಮತ್ತು ಸತ್ವಹೀನಗೊಳಿಸುತ್ತವೆ. ಆ ಮಕ್ಕಳ ಜೀವನದಲ್ಲಿ ಯಾವುದೇ ಸಮಸ್ಯೆ ಅಥವಾ ಅಡಚಣೆ ಬಂದಾಗ ಫ್ಯಾಂಟಮ್ ಅಥವಾ ಸುಪರಮ್ಯಾನ್ ಕ್ಷಣದಲ್ಲಿಯೇ ಅದನ್ನು ದೂರ ಮಾಡುತ್ತಾರೆ ಎಂಬ ಕಲ್ಪನೆಯಿರುತ್ತದೆ. ಆದುದರಿಂದ ಅವರು ವಾಸ್ತವಿಕತೆಯಿಂದ ದೂರ ಹೋಗುತ್ತಾರೆ ಹಾಗೂ ಅವರ ಕಾಲುಗಳು ನೆಲದಲ್ಲಿರುವುದಿಲ್ಲ. ಆ ಕಾಲ್ಪನಿಕ ಶಕ್ತಿಶಾಲಿ, ಧೈರ್ಯ, ಸಾಹಸ, ಮಕ್ಕಳ ಆದರ್ಶವಾಗುತ್ತದೆ. ವಾಸ್ತವಿಕದಲ್ಲಿ ಅವರು ಹಾಗಿರುವುದಿಲ್ಲವೆಂಬ ಸತ್ಯವನ್ನು ಮಕ್ಕಳು ಸ್ವೀಕರಿಸುವುದೇ ಇಲ್ಲ. ಅದರೊಂದಿಗೆ ಚಿತ್ರಕಥೆಗಳ ಭಾಷೆ ಅಶ್ಲೀಲ, ಪೊಳ್ಳು ಹಾಗೂ ವ್ಯಾಕರಣದ ದೃಷ್ಟಿಯಿಂದಲೂ ಶುದ್ಧವಾಗಿರುವುದಿಲ್ಲ. ಚಿತ್ರಕಥೆಗಳಲ್ಲಿ ವಾಕ್ಯಗಳ ಪ್ರಮಾಣ ಕಡಿಮೆ ಮತ್ತು ಚಿತ್ರಗಳ ಪ್ರಮಾಣ ಹೆಚ್ಚಿರುತ್ತದೆ. ಚಿತ್ರಗಳ ಆಧಾರದಿಂದಲೇ ಮಕ್ಕಳು ಕಲ್ಪನೆ ಮಾಡುತ್ತಾರೆ. ಅವರಲ್ಲಿ ಸ್ವತಂತ್ರವಾಗಿ ಕಲ್ಪನೆ ಮಾಡುವ ಹಾಗೂ ಚಿಂತನೆ ಮಾಡುವ ಕ್ಷಮತೆಯಿರುವುದಿಲ್ಲ. ಅವರ ದೃಷ್ಟಿಯ ಮೂಲಕ ಗ್ರಹಣಶಕ್ತಿಯು ಕ್ಷೀಣವಾಗುತ್ತಾ ಹೋಗುತ್ತದೆ.
ನಾವು ಮಕ್ಕಳಿಗೆ ಪುರಾಣದ ಕಥೆಗಳನ್ನು ಏಕೆ ಓದಲು ಕೊಡುವುದಿಲ್ಲ? ಅದರಿಂದ ಅವರ ಜ್ಞಾನ ವೃದ್ಧಿಯಾಗುವುದಂತೂ ನಿಜ, ಅದರೊಂದಿಗೆ ಅವರ ಶಾರೀರಿಕ, ಮಾನಸಿಕ, ಬೌದ್ಧಿಕ ವಿಕಾಸವಾಗುವುದು. ಮಕ್ಕಳಲ್ಲಿ ಧೈರ್ಯ, ಸಾಹಸ ನಿರ್ಮಾಣವಾಗುವುದು. ಅವರಲ್ಲಿ ಕುತೂಹಲ ಮತ್ತು ಜಿಜ್ಞಾಸೆ ಹೆಚ್ಚಾಗುವುದು. ಅವರ ಮನಸ್ಸು ಸಾಗರದಂತೆ ವಿಶಾಲವಾಗುವುದು.’- ಗುರುದೇವ ಡಾ. ಕಾಟೇಸ್ವಾಮೀಜಿ (ಘನಗರ್ಜಿತ, ಜೂನ್ ೨೦೦೯)