ಅವಿದ್ಯಾವಂತ ಕಾಳಿದಾಸನ ಜೀವನದಲ್ಲಿ ಕಾಶಿ ರಾಜಕನ್ಯೆಯಿಂದ ಆದ ಬದಲಾವಣೆ
ಕಾಳಿದಾಸನು ಶಿವಭಕ್ತನಾಗಿದ್ದನು. ಪ್ರಾರಂಭದಲ್ಲಿ ಕಾಳೀದಾಸನು ಅನಕ್ಷರಸ್ಥ, ಅವಿದ್ಯಾವಂತನಾಗಿದ್ದನು. ಆದ್ದರಿಂದ ಎಲ್ಲರೂ ಅವನ ಚೇಷ್ಟೆ ಮಾಡುತ್ತಿದ್ದರು; ಆದರೆ ಅವನ ಜೀವನದಲ್ಲಿ ಅದ್ಭುತವಾದ ಬದಲಾವಣೆಯು ಕಾಶಿಯ ರಾಜಕನ್ನೆಯಿಂದ ಆಯಿತು. ಅವಳು ವಿಲಕ್ಷಣ ಬುದ್ಧಿವಂತಳು ಹಾಗೂ ಪ್ರತಿಭಾವಂತ ಪಾಂಡಿತ್ಯವುಳ್ಳವಳಾಗಿದ್ದಳು. ವಾಂಗ್ಮಯ, ಕಲೆ ಮುಂತಾದ ವಿದ್ಯೆಗಳಲ್ಲಿ ಅವಳಿಗೆ ಸರಿಸಮಾನರಿರಲಿಲ್ಲ. ಅವಳೊಂದಿಗೆ ವಿವಾಹ ಮಾಡಲು ಬಂದ ಅನೇಕ ಯುವಕರನ್ನು ಅವಳು ಬುದ್ಧಿಯ ಸಾಮರ್ಥ್ಯದಿಂದ ಪರಾಭವಗೊಳಿಸಿದಳು. ಅವಮಾನ ಹೊಂದಿದ ಎಲ್ಲರೂ ಆಕೆಯ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ಅವರು ಒಬ್ಬ ಮಹಾಮೂರ್ಖ ಯುವಕನಿಗೆ ಹತ್ತಿರ ಮಾಡಿದರು. ಅವನಿಗೆ ಸಾಕಷ್ಟು ಉತ್ತಮ ಅನ್ನ ಹಾಗೂ ಸುಂದರ ವಸ್ತ್ರಗಳನ್ನು ಕೊಡುವ ಆಸೆಯನ್ನು ತೋರಿಸಿದರು. ರಾಜಕುಮಾರಿಯ ಎದುರು ಅವನಿಗೆ ಕೇವಲ ನಿಲ್ಲಬೇಕಾಗಿತ್ತು. ರಾಜಕುಮಾರಿಯು ಕೇಳಿದ ಪ್ರಶ್ನೆಗಳಿಗೆ, ಉತ್ತರಿಸದೇ ಅವನು ಮೌನವಾಗಿರುವುದು, ಸುಮ್ಮನಿರುವುದು ಅಷ್ಟೇ ಮಾಡಿದರೆ ಸಾಕು ಎಂದು ಹೇಳಿಕೊಟ್ಟರು. ವರು ಆರಿಸಿದ ಯುವಕ ಕಾಳಿದಾಸ. ಒಂದು ದಿನ ಅವನಿಗೆ ಸುಂದರ ವೇಶಭೂಷೆ ಮಾಡಿ ಶೃಂಗರಿಸಲಾಯಿತು. ಅಲಂಕಾರ ಮಾಡಿಸಿ ಅವನೊಬ್ಬ ಅತ್ಯಂತ ಬುದ್ಧಿವಂತ, ಪ್ರತಿಭಾಶಾಲಿ ದಾರ್ಶನಿಕ ಎಂಬುವಂತೆ ಅವನನ್ನು ರಾಜಕುಮಾರಿಯ ಎದುರು ನಿಲ್ಲಿಸಿದರು.
ಕಾಳಿದಾಸ – ರಾಜಕುಮಾರಿಯ ವಿವಾಹ ಮತ್ತು ಅವನ ಮೂರ್ಖತೆಯ ರಹಸ್ಯ ಬಯಲಾಗುವುದು!
ರಾಜಕುಮಾರಿಯು ಅನೇಕ ತತ್ವಶಾಸ್ತ್ರದ ಪ್ರಶ್ನೆಗಳನ್ನು ಕೇಳಿದಳು, ಆಗ ಕಾಳಿದಾಸನು ತಲೆ ಅಲ್ಲಾಡಿಸುತ್ತಿದ್ದನು ಹಾಗೂ ವಿಲಕ್ಷಣ ದೃಷ್ಟಿಯಿಂದ ರಾಜಕುಮಾರಿಯ ಕಡೆಗೆ ನೋಡುತ್ತಿದ್ದನು. ಜನರು ‘ಅತ್ಯಂತ ಪ್ರತಿಭಾವಂತ ಹಾಗೂ ಬುದ್ಧಿವಂತಿಕೆಯ ಶಿಖರ’ ವಾಗಿರುವ ಕಾಳಿದಾಸನ ಉತ್ತರಗಳು ಅವನ ಮೌನದೊಳಗಿನಿಂದ ಅಭಿವ್ಯಕ್ತವಾಗುತ್ತಿರುವುದೆಂದು ಹೇಳಿದರು. ಅವನ ದೃಷ್ಟಿಕ್ಷೇಪದ ನಿರ್ವಚನವನ್ನು ಹೀಗೆ ವ್ಯಕ್ತಪಡಿಸಿದ್ದರಿಂದ ಆ ರಾಜಕುಮಾರಿಗೆ ಸಮಾಧಾನವಾಯಿತು. ರಾಜಕುಮಾರಿಯ ವಿವಾಹವು ಅವನ ಜೊತೆ ಜರುಗಿತು. ನಂತರ ಕೆಲವೇ ದಿನಗಳಲ್ಲಿ ಅವನೊಬ್ಬ ಅವಿದ್ಯಾವಂತ ಎಂದು ಅವಳ ಗಮನಕ್ಕೆ ಬಂತು. ಅತ್ಯಂತ ಕೋಪಗೊಂಡು, ಕಾಳಿದಾಸನನ್ನು ಭಯಂಕರವಾಗಿ ನಿಂದಿಸಿದಳು ಹಾಗೂ ಅವನನ್ನು ಅರಮನೆಯಿಂದ ಹೊರಗೆ ತಳ್ಳಿ, ‘ಎಲ್ಲಿಯವರೆಗೆ ನೀನು ಒಬ್ಬ ಪಂಡಿತನಾಗುವುದಿಲ್ಲವೋ ಅಲ್ಲಿಯವರೆಗೆ ನೀನು ಇಲ್ಲಿ ಬರಕೂಡದು’ ಎಂಬುದಾಗಿ ಅವನಿಗೆ ಹೇಳಿದಳು.
ಕಾಳಿಮಾತೆಯ ದರ್ಶನ, ಕಾಳಿದಾಸನೆಂದು ನಾಮಕರಣ!
ಆ ಯುವಕನು ಪ್ರಾಮಾಣಿಕ, ನಿಷ್ಕಪಟ ಮನಸ್ಸನ್ನು ಉಳ್ಳವನು. ‘ದುಷ್ಟರು ರಾಜಕುಮಾರಿಯನ್ನು ಮೋಸಗೊಳಿಸಲು ನನ್ನ ಉಪಯೋಗ ಮಾಡಿದರು’ ಎಂಬುದು ಅವನ ಗಮನಕ್ಕೆ ಬಂತು. ಅವನಿಗೆ ತನ್ನ ತಪ್ಪಿನ ಅರಿವಾಗಿ ನೇರವಾಗಿ ಕಾಳಿ ದೇವಿಯ ದೇಗುಲಕ್ಕೆ ಹೋದನು. ರಾತ್ರಿ ದೇಗುಲದಲ್ಲಿಯೇ ಉಳಿದನು. ‘ಏನು, ಏಕೆ’ ಎಂಬುದು ಅವನಿಗೆ ತೋಚುತ್ತಿರಲಿಲ್ಲ. ಪೂಜಾರಿಯು ಅವನಿಗೆ ದೇವಿಯ ಆರಾಧನೆ ಮಾಡಲು ಹೇಳಿದನು. ನಂತರ ಅವನು ಆ ದೇಗುಲದಲ್ಲಿದ್ದು ಮಹಾಕಾಳಿಯ ಉಪಾಸನೆ ಮಾಡಿದನು. ಪೂಜಾರಿಯು ಹೇಳಿದಂತೆ ಕಠಿಣ ವ್ರತ ಮಾಡಿದನು. ಒಂದು ರಾತ್ರಿ ಅವನಿಗೆ ಆಕಸ್ಮಿಕವಾಗಿ ಆ ಮೂರ್ತಿಯಿಂದ ಮಹಾಕಾಳಿಯು ಪ್ರಕಟವಾದದ್ದು ಕಂಡಿತು. ಆ ದಿವ್ಯ ದೇವಿಯು ಅವನ ಸಮೀಪ ಬಂದಳು. ಅವಳು ಅವನ ನಾಲಿಗೆಯ ಮೇಲೆ ಮೂಲಾಕ್ಷರಗಳನ್ನು ಬರೆದಳು ಹಾಗೂ ‘ನೀನು ಮಹಾಪಂಡಿತ, ಮಹಾಕವಿ ಆಗುವೆ’ ಎಂದು ಆಶಿರ್ವದಿಸಿದಳು. ಅಷ್ಟೇ ಅಲ್ಲದೆ ‘ಕಾಳಿದಾಸ’ನೆಂದು ನಾಮಕರಣ ಮಾಡಿದಳು.
ಕಾಳೀದಾಸನು ನಾಲ್ಕು ಮಹಾಕಾವ್ಯಗಳನ್ನು ರಚಿಸುವುದು
ನಂತರ ಕಾಳೀದಾಸನು ಅರಮನೆಗೆ ಮರಳಿ ಬಂದನು. ರಾಜಕುಮಾರಿಯು ಕೇಳಿದಳು, ‘ಅಸ್ತಿ ಕಶ್ಚಿತ್ ವಾಗ್ವಿಶೇಷಃ |… ನೀನು ಪುನಃ ಏಕೆ ಬಂದೆ ? ಪಾಂಡಿತ್ಯವೇನಾದರೂ ಸಂಪಾದಿಸಿದ್ದಿಯಾ ?’ ಕಾಳೀದಾಸನು ನಾಲ್ಕು ಮಹಾಕಾವ್ಯಗಳಿಂದ ಅವಳ ಪ್ರಶ್ನೆಗಳ ಉತ್ತರ ನೀಡಿದನು. ಪ್ರತಿಯೊಂದು ಮಹಾಕಾವ್ಯದ ಪ್ರಾರಂಭವು ರಾಜಕುಮಾರಿಯು ಕೇಳಿದ ಪ್ರಶ್ನೆಯ ಒಂದೊಂದು ಶಬ್ದದಿಂದ ಇತ್ತು. ಹಾಗೂ ಅವನು ಆ ನಾಲ್ಕು ಶಬ್ದಗಳಿಂದ ಪ್ರಾರಂಭವಾಗುವ ನಾಲ್ಕು ಮಹಾಕಾವ್ಯಗಳನ್ನು ಪಟಪಟನೆ ಹೇಳಿ ತೋರಿಸಿದನು.
ಕುಮಾರಸಂಭವ ಮಹಾಕಾವ್ಯದ ಪ್ರಾರಂಭದಲ್ಲಿನ ಸಾಲು ಹೀಗಿದೆ
ಅಸ್ತಿ ಉತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ | ಪೂರ್ವಾಪರೌ ತೋಯನಿಧೀ ವಿಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ || |
ಅರ್ಥ : ಉತ್ತರ ದಿಕ್ಕಿಗೆ ದೇವತೆಗಳ ನಿವಾಸವಿರುವ ‘ಹಿಮಾಲಯ’ ಹೆಸರಿನ ಪರ್ವತಗಳ ಸ್ವಾಮಿ, ಪೂರ್ವ ಹಾಗೂ ಪಶ್ಚಿಮ ದಿಕ್ಕಿಗೆ ಇರುವ ಸಮುದ್ರದಲ್ಲಿ ಪೃಥ್ವಿಯ ಮಾನದಂಡವೆಂದು ನಿಂತಿರುತ್ತದೆ.
ಮೇಘದೂತ ಮಹಾಕಾವ್ಯದ ಪ್ರಾರಂಭವು ಹೀಗಿದೆ
ಕಶ್ಚಿತ್ ಕಾಂತಾವಿರಹಗುರುಣಾ ಸ್ವಾಧಿಕಾರಾತ್ಪ್ರಮತ್ತಃ | ಶಾಪೇನಾಸ್ತಂಗಮಿತಮಹಿಮಾ ವರ್ಷಭೋಗ್ಯೇಣ ಭರ್ತುಃ || ಯಕ್ಷಶ್ಚಕ್ರೇ ಜನಕತನಯಾಸ್ನಾನಪುಣ್ಯಯೋದಕೇಷು | ಸ್ನಿಗ್ಧಚ್ಛಾಯಾತರೂಷು ವಸತಿಂ ರಾಮಗಿರ್ಯಾಶ್ರಮೇಷು || |
ಅರ್ಥ : ಸ್ವಕರ್ತವ್ಯದಿಂದ ದೂರವಾದ, ಪ್ರೇಯಸಿಯ ವಿರಹದಿಂದ ವ್ಯಾಕುಲಗೊಂಡ, ಕುಬೇರನ ಶಾಪದಿಂದ ಶ್ರೇಷ್ಠತ್ತ್ವವು ಅಲ್ಪವಾದ ಒಬ್ಬ ಯಕ್ಷನು ಸೀತೆಯ ಮುಣುಗುವಿಕೆಯಿಂದ ಯಾವ ನದಿಯು ಪವಿತ್ರವಾಗಿದೆಯೋ ಹಾಗೂ ಎಲ್ಲಿ ದಟ್ಟವಾದ ನೆರಳು ಇರುವುದೋ, ಇಂತಹ ರಾಮಗಿರಿ ಎಂಬ ಹೆಸರಿನ ಪರ್ವತದ ಮೇಲೆ ನೆಲೆಸಿದನು.
ರಘುವಂಶದ ಪ್ರಾರಂಭವು ಹೀಗೆ
ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೆ | ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ || |
ಅರ್ಥ : ಶಬ್ದ ಮತ್ತು ಅರ್ಥ ಇವುಗಳಂತೆ ಎಕರೋಪವಾಗಿರುವ ಜಗತ್ಪಾಲಕ ಶಿವಪಾರ್ವತಿಯಲ್ಲಿ ಇವುಗಳ (ಶಬ್ದ ಮತ್ತು ಅರ್ಥ) ಅರ್ಥವಾಗಲೆಂದು ನಾನು ವಂದಿಸುತ್ತೇನೆ.
ಋತುಸಂಹಾರ ಮಹಾಕಾವ್ಯದ ಪ್ರಾರಂಭದಲ್ಲಿ
ಗ್ರೀಷ್ಮ ಋತುವಿನ ವರ್ಣನೆ ಈ ರೀತಿಯಿದೆ
ವಿಶೇಷಸೂರ್ಯಃ ಸ್ಪೃಹಣೀಯಚಂದ್ರಮಾಃ | |
ಅರ್ಥ : ಉಗ್ರನಾದ ಸೂರ್ಯ ಹಾಗೂ ಮನೋರಮ್ಯ ಚಂದ್ರನಿರುವ ಗ್ರೀಷ್ಮಋತು (ಬಂದಿರುವುದು)’
ಇಂತಹ ಪ್ರಕಾಂಡ ಪಾಂಡಿತ್ಯ ಉಳ್ಳ ಕಾಳಿದಾಸರು, ಉಜ್ಜಯನಿಯ ಸಮ್ರಾಟ ವಿಕ್ರಮಾದಿತ್ಯನ ದರಬಾರಿನಲ್ಲಿರುವ ನವರತ್ನಗಳ ಪೈಕಿ ಓರ್ವ ರತ್ನ ಎಂದು ಪ್ರಸಿದ್ಧರಾದರು.
ಗುರುದೇವ ಡಾ. ಕಾಟೇಸ್ವಾಮೀಜಿ (ಘನಗರ್ಜಿತ, ಜುಲೈ ೨೦೦೫)