'ತರಗತಿಗೆ ಮುಖ್ಯಸ್ಥರು, ಕರಿಹಲಗೆ (ಬ್ಲಾಕ್ ಬೋರ್ಡ್) ಮತ್ತು ಗುಂಪು ಚರ್ಚೆ ಈ ಸಂಕಲ್ಪನೆಗಳಿಗೆ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಬಹಳ ಮಹತ್ವವಿದೆ. ಇದು ನಮಗೆಲ್ಲರಿಗೂ ತಿಳಿದಿದೆ; ಆದರೆ ಮೂಲದಲ್ಲಿ ಈ ಸಂಕಲ್ಪನೆಯು ಎಲ್ಲಿಂದ ಬಂತು?
ಈ ಸಂಕಲ್ಪನೆಯು ಭಾರತೀಯರಿಂದಲೇ ಬಂದಿದೆ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ೧೬೨೩ ರ ಮಧ್ಯದಲ್ಲಿ ಪಿಯೇತ್ರೋ ದೆಲ್ಲ ವಾಲೆ ಎನ್ನುವ ಒಬ್ಬ ಪ್ರವಾಸಿಗನು ಭಾರತಕ್ಕೆ ಬಂದಿದ್ದನು. ಪಶ್ಚಿಮ ಭಾರತದಾದ್ಯಂತ ಸಂಚರಿಸುವಾಗ ಇಲ್ಲಿಯ ಶಿಕ್ಷಣ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಪಿಯೇತ್ರೋ ತನ್ನ ಪ್ರವಾಸದ ಬಗ್ಗೆ ಬರೆದಿರುವ ಪುಸ್ತಕದಲ್ಲಿ ಇದರ ಬಗ್ಗೆ ಸವಿಸ್ತಾರ ವರ್ಣನೆಯನ್ನು ಮಾಡಿದ್ದಾನೆ.
ಕ್ರಿ.ಶ. ೧೮೦೦ ರ ಆಸುಪಾಸಿನಲ್ಲಿ ಈಸ್ಟ ಇಂಡಿಯಾ ಕಂಪನಿಯ ಡಾ. ಬೆಲ್ ಮತ್ತು ಲಾಕೆಸ್ಟರ ಎಂಬವರು, ಬ್ರಿಟನ್ ಶಾಲೆಗಳಲ್ಲಿ ಕರಿಹಲಗೆ ಮತ್ತು ಗುಂಪು ಚರ್ಚೆ ಮುಂತಾದ ಶಿಕ್ಷಣ ಸಂಕಲ್ಪನೆಗಳನ್ನು ಜಾರಿಗೆ ತರಲು ಪ್ರಯತ್ನಿಸಿದರು. ಆದರೆ ಅವರಿಬ್ಬರಲ್ಲಿ ಇದರ ಶ್ರೇಯಸ್ಸು ಯಾರಿಗೆ ದೊರಕಬೇಕೆಂಬುದರ ಕುರಿತು ಜಗಳಗಳಾದವು. ಆಗ ಅವರ ಜಗಳವನ್ನು ತೀರ್ಮಾನಿಸುವ ಕುರಿತು ನಡೆದ ವಿಚಾರಣೆಯ ಸಮಯದಲ್ಲಿ, ಮೂಲದಲ್ಲಿ ಈ ಶಿಕ್ಷಣ ವ್ಯವಸ್ಥೆಯ ಕಲ್ಪನೆಯ ಶ್ರೇಯಸ್ಸು ಭಾರತೀಯರಿಗೆ ದೊರಕಬೇಕೆಂದು ಗಮನಿಸಲಾಯಿತು. ಆ ಸಮಯದಲ್ಲಿ ಈಸ್ಟ ಇಂಡಿಯಾ ಕಂಪನಿಯ ಒಬ್ಬ ಅಧಿಕಾರಿಯಾದ ಬ್ರಿಗೇಡಿಯರ್ ಜನರಲ್ ಅಲೆಕ್ಸಾಂಡರ ಬೇಕರ್ ಇವರು ತಮ್ಮ ಟಿಪ್ಪಣೆಯಲ್ಲಿ ‘ಮಲಬಾರನ ಭಾರತೀಯ ಬ್ರಾಹ್ಮಣರಲ್ಲಿ ನೋಡಿದ ಈ ಪದ್ಧತಿಯು ಅವರ್ಣನೀಯವಾಗಿದೆ' ಎಂದು ಬರೆದಿದ್ದಾರೆ.
‘ಈ ಪದ್ಧತಿಯಲ್ಲಿ ಶಿಕ್ಷಣ ನೀಡುವುದರಿಂದ ಸಮಾಜದಅತ್ಯಂತ ಕೆಳಗಿನ ಸ್ತರದವರೆಗೂ ಅತ್ಯಂತ ಲಾಭದಾಯಕ ರೀತಿಯಲ್ಲಿ ಶಿಕ್ಷಣವು ತಲುಪುತ್ತದೆ. ಈ ವಿಷಯದ ಕುರಿತಂತೆ ನಾವು ಚಿಂತನೆಯನ್ನು ನಡೆಸಬೇಕಾಗಿದೆ'. ಅಂದರೆ ಅಂದಿನ ಶಿಕ್ಷಣ ನೀಡುವ ಪದ್ಧತಿಯೂ ಎಷ್ಟೊಂದು ಮುಂದುವರೆದಿತ್ತು ಮತ್ತು ಯಾವ ದೃಷ್ಟಿಕೋನವನ್ನಿಟ್ಟು ಶಿಕ್ಷಣವನ್ನು ನೀಡಲಾಗುತ್ತಿತ್ತು ಎನ್ನುವುದನ್ನು ಗಮನಿಸಿ. ಆಗ ಎಲ್ಲೆಡೆಯೂ ಶಾಲೆಗಳಿದ್ದವು. ಶ್ರೀರಂಗಪಟ್ಟಣಮ್‌ನಂತಹ ಸ್ಥಳದ ಕುರಿತು ಹೇಳುವಾಗ ‘ಎಲ್ಲ ವರ್ಗದ ಜನರೂ ಆ ಸ್ಥಳದಲ್ಲಿ ಕಲಿಯಲು ಬರುತ್ತಿದ್ದರು ಹಾಗೂ ಅವರು ಕಲಿಸುವ ವಿಷಯಗಳಲ್ಲಿ ಹಡಗು/ವಿಮಾನ ಯಾನ, ವೈದ್ಯಕೀಯ ಶಾಸ್ತ್ರ, ತರ್ಕಶಾಸ್ತ್ರ, ನ್ಯಾಯ ಇಂತಹ ಎಲ್ಲ ವಿಷಯಗಳೂ ಇರುತ್ತಿದ್ದವು. ಅವರಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಉಚ್ಚ ಶಿಕ್ಷಣ ಎಂದು ವಿಂಗಡಣೆಯಾಗಿತ್ತು. ಯಾರಿಗೆ ಯಾವ ಸ್ಥಳದಲ್ಲಿ, ಯಾವ ವಿಷಯದಲ್ಲಿ ಮತ್ತು ಎಷ್ಟು ಶಿಕ್ಷಣವನ್ನು ಪಡೆಯಬೇಕೆಂದೆನಿಸುತ್ತಿತ್ತೋ ಅಂತಹ ಶಿಕ್ಷಣ ಪಡೆಯುವ ವ್ಯವಸ್ಥೆ ಅಲ್ಲಿತ್ತು.
-ಡಾ. ದುರ್ಗೇಶ ಸಾಮಂತ, ರಾಮನಾಥಿ, ಗೋವಾ (೨೬-೦೪-೨೦೦೭ ರಂದು ತ್ರಂಬಕೇಶ್ವರನಲ್ಲಿ ‘ಸ್ವಾತಂತ್ರ ವೀರ ಸಾವರಕರ ಸ್ಮೃತಿ ಮಂಚ್'ನ ಸ್ಥಾಪನೆಯಾಯಿತು. ಆ ಸಮಯದಲ್ಲಿ ಮಾಡಿದ ಭಾಷಣವನ್ನು ಆಧರಿಸಿ)