ವಿದ್ಯಾರ್ಥಿ ಜೀವನದಲ್ಲಿನ 'ಶಸ್ತ್ರ'ಗಳಾದ ಲೇಖನಿ, ಪಠ್ಯಪುಸ್ತಕ ಹಾಗೂ ಪುಸ್ತಕಗಳ ಪೂಜೆ
ಹಾಗೂ ಅವುಗಳ ಅಪಮಾನವಾಗದಂತೆ ವರ್ತಿಸುವುದೇ ನಿಜವಾದ ದಸರಾ
ವಿದ್ಯಾರ್ಥಿ ಮಿತ್ರರೇ, ನಾವು ಅನೇಕ ಹಬ್ಬಗಳನ್ನು ಆಚರಿಸುತ್ತೇವೆ ಹಾಗೂ ಪ್ರತಿಯೊಂದು ಹಬ್ಬದಿಂದ ನಮಗೆ ಜೀವನದ ಅನೇಕ ನೈತಿಕ ಮೌಲ್ಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ನಮ್ಮ ಜೀವನದಲ್ಲಿ ಈ ಮೌಲ್ಯಗಳನ್ನು ಆಚರಣೆಗೆ ತಂದರೆ ನಮ್ಮ ಜೀವನವು ಆದರ್ಶ ಹಾಗೂ ಆನಂದಮಯವಾಗುವುದು. ಮಿತ್ರರೇ, ನಾವು ಆಚರಿಸುವ ಪ್ರತಿಯೊಂದು ಹಬ್ಬವೂ ಜೀವನದ ಮೌಲ್ಯಗಳ ಖಜಾನೆಯಾಗಿದೆ. ಪ್ರತಿಯೊಂದು ಹಬ್ಬವೂ ಆದರ್ಶ ಜೀವನದ ಪ್ರತ್ಯಕ್ಷಪಾಠವೇ ಆಗಿದೆ. ಆಶ್ವಯುಜ ಶುಕ್ಲ ಪಕ್ಷ ದಶಮಿಯಂದು ನಾವು ದಸರಾ ಹಬ್ಬವನ್ನು ಆಚರಿಸುತ್ತೇವೆ. ಈ ದಿನವು ಮೂರುವರೆ ಶುಭ ಮುಹುರ್ತಗಳಲ್ಲಿ ಒಂದಾಗಿದೆ. ಇಂದು ನಾವು ದಸರಾ ಹಬ್ಬದ ಮಹತ್ವವನ್ನು ತಿಳಿದುಕೊಳ್ಳೋಣ.
೧. ವಿದ್ಯಾರ್ಥಿಗಳು ತಮ್ಮಲಿರುವ ಹತ್ತು ಸ್ವಭಾವದೋಷಗಳನ್ನು ನಿರ್ಮೂಲನ ಮಾಡಲು ನಿಶ್ಚಯಿಸುವ ದಿನವೇ ದಸರಾ ! : ದಸರಾವನ್ನು ದಶಹರಾ ಎಂದೂ ಕರೆಯುತ್ತಾರೆ. 'ದಶ' ಎಂದರೆ ಹತ್ತು ಹಾಗೂ 'ಹರಾ' ಎಂದರೆ ಸೋಲಿಸಿದ. ಮೊದಲ ೯ ದಿನಗಳ ವರೆಗೆ ದೇವಿಯು ಅಸುರರೊಂದಿಗೆ ಯುದ್ಧ ಮಾಡಿದಳು ಹಾಗೂ ೧೦ ದಿಕ್ಕುಗಳ ಮೇಲೆ ವಿಜಯ ಸಾಧಿಸಿದಳು. ಮಿತ್ರರೇ, ಅದೇ ಈ ದಿನವಾಗಿದೆ.
ಮಿತ್ರರೇ, ದೇವಿಯು ಅಸುರರ ಅಂದರೆ ಕೆಟ್ಟ ವಿಷಯಗಳನ್ನು ನಾಶಮಾಡಿದಳು. ಮಿತ್ರರೇ, ನಾವೂ ಈ ದಿನದಂದು ನಮ್ಮಲ್ಲಿ ಇರುವ ಯಾವುದಾದರೂ ೧೦ ದೋಷಗಳನ್ನು ನಿರ್ಮೂಲನಗೊಳಿಸಿ, ಹತ್ತು ದುರ್ಗುಣಗಳ ಮೇಲೆ ವಿಜಯನ್ನು ಸಾಧಿಸಲು ನಿಶ್ಚಯಿಸೋಣ. ಹೀಗೆ ನಿಶ್ಚಯಿಸಿದರೆ ದಸರಾ ಹಬ್ಬವನ್ನು ಸಾರ್ಥಕವಾಗಿ ಆಚರಿಸಿದಂತೆ ! ಮಿತ್ರರೇ, ನಾವು ಹೀಗೆ ಮಾಡಬಹುದಲ್ಲವೇ ?
೨. ತ್ರೇತಾಯುಗ ಮತ್ತು ದ್ವಾಪರಯುಗಗಳಲ್ಲಿ ವಿಜಯ ದಶಮಿಯ ಮಹತ್ವ! : ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ವಧಿಸಿದ ದಿನವೇ ದಸರಾ. ರಾಮನು ರಾವಣನ ಮೇಲೆ ವಿಜಯವನ್ನು ಸಾಧಿಸಿದ 'ವಿಜಯದ ದಿನ'ವೆಂದು ಈ ದಿನವನ್ನು 'ವಿಜಯದಶಮಿ' ಎಂದೂ ಕರೆಯುತ್ತಾರೆ.
ದ್ವಾಪರಯುಗದಲ್ಲಿ ಪಾಂಡವರ ಅಜ್ಞಾತವಾಸ ಮುಗಿಯುತ್ತಿದ್ದಂತೆ ಅವರು ಈ ದಿನದಂದು ಶತಿ ದೇವಿಯ ಪೂಜೆಯನ್ನು ಮಾಡಿದರು. ನಂತರ ಅಜ್ಞಾತವಾಸದ ಪ್ರಾರಂಭದಲ್ಲಿ ಬನ್ನಿ ಮರ (ಶಮಿ ವೃಕ್ಷ)ದ ಮೇಲೆ ಇಟ್ಟಿದ್ದ ತಮ್ಮ ಶಸ್ತ್ರಗಳನ್ನು ಇಳಿಸಿ ಅವುಗಳ ಪೂಜೆಯನ್ನು ಮಾಡಿದ್ದರು.
ಶಮಿ ವೃಕ್ಷದ ಪೂಜೆ ಮತ್ತು ಮಂದಾರದ ಎಲೆಗಳನ್ನು ಬಂಗಾರವೆಂದು ಹಂಚುವ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ !
೩. ದಸರಾದಂದು ನಾವು ಆಪ್ತೇಷ್ಟರಿಗೆ ಮಂದಾರದ ಎಲೆಯನ್ನು ಚಿನ್ನವೆಂದು ಹಂಚುತ್ತೇವೆ : ಹಿಂದಿನ ಕಾಲದಲ್ಲಿ ಮರಾಠಾ ವೀರರು ಶತ್ರುಗಳ ಪ್ರದೇಶಗಳನ್ನು ಕೊಳ್ಳೆಹೊಡೆದು ಸಂಪತ್ತನ್ನು ಬಂಗಾರದ ನಾಣ್ಯಗಳ ರೂಪದಲ್ಲಿ ಮನೆಗೆ ತಂದು ಅದನ್ನು ದೇವರ ಎದುರು ಇಟ್ಟು ನಮಸ್ಕಾರ ಮಾಡುತ್ತಿದ್ದರು. ಅದೇ ವಾಡಿಕೆಯಂತೆ ನಾವು ಮಂದಾರದ ಎಲೆಯನ್ನು ಚಿನ್ನವೆಂದು ಹಂಚುತ್ತೇವೆ.
೪. ಶಸ್ತ್ರ ಹಾಗೂ ಉಪಕರಣಗಳ ಪೂಜೆ ಮಾಡುವುದು :
ರಾಜರು : ಈ ದಿನದಂದು ರಾಜರು ತಮ್ಮ ಶಸ್ತ್ರಗಳ ಪೂಜೆ ಮಾಡುತ್ತಾರೆ. ನಾವು ಪ್ರತಿಯೊಂದು ಶಸ್ತ್ರದಲ್ಲಿ ದೇವರಿದ್ದಾರೆ ಎಂಬ ಭಾವದಿಂದ ಶಸ್ತ್ರಗಳ ಪೂಜೆ ಮಾಡುತ್ತೇವೆ.
ರೈತರು : ಈ ದಿನದಂದು ರೈತರು ಹೊಲದಲ್ಲಿ ಶ್ರಮಿಸುವ ನೇಗಿಲು ಮತ್ತು ಇತರ ಉಪಕರಣಗಳ ಪೂಜ್ಯನ್ನು ಮಾಡುತ್ತಾರೆ
ವಿದ್ಯಾರ್ಥಿಗಳು : ವಿದ್ಯಾರ್ಥಿಗಳು ತಮ್ಮ ಪುಸ್ತಕಗಳ ಪೂಜೆ ಮಾಡುತ್ತಾರೆ. ಮಿತ್ರರೇ, ನಾವೂ ನಮ್ಮ ಪುಸ್ತಕ, ಲೇಖನಿಗಳ ಪೂಜೆ ಮಾಡಬೇಕು, ಏಕೆಂದರೆ ವಿದ್ಯಾರ್ಥಿ ಜೀವನದಲ್ಲಿ ಇವುಗಳು ನಮ್ಮ ಶಸ್ತ್ರಗಳಾಗಿವೆ. ಅಂತೆಯೇ ಇವೆಲ್ಲವುಗಳಲ್ಲಿ ದೇವರಿದ್ದಾರೆ ಎಂಬುದರ ಅರಿವು ನಮ್ಮಲ್ಲಿ ನಿರ್ಮಾಣವಾಗಬೇಕು. ಈ ಶಸ್ತ್ರಗಳು ಇರದಿದ್ದರೆ ನಮಗೆ ಏನು ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಮಿತ್ರರೇ, ವಿದ್ಯಾರ್ಥಿ ಜೀವನದಲ್ಲಿನ ಈ ಶಸ್ತ್ರಗಳು ಸರಸ್ವತಿ ಮಾತೆಯ ಪ್ರತೀಕವಾಗಿವೆ.
೫. ನಮ್ಮ ಈ 'ಶಸ್ತ್ರ'ಗಳ ಕ್ಷಮೆಯನ್ನು ಯಾಚಿಸೋಣ : ಇಂದು ಕೆಲವು ಮಕ್ಕಳು ಪುಸ್ತಕಗಳನ್ನು ಎಸೆಯುವುದು, ಲೇಖನಿಗಳೊಂದಿಗೆ ಆಟವಾಡುವುದು, ಅಂತೆಯೇ ಶಾಲೆಯ ಚೀಲ ಎಸೆಯುವುದು ಮುಂತಾದವುಗಳನ್ನು ಮಾಡುತ್ತಾರೆ. ಇವು ಅಯೋಗ್ಯ ಕೃತಿಗಳಲ್ಲವೇ ಮಿತ್ರರೇ? ನಾವು ಈ ದಿನದಂದು ಈ ಎಲ್ಲ ಉಪಕರಣಗಳಿಗೆ ಕ್ಷಮೆ ಯಾಚಿಸೋಣ ಹಾಗೂ ದಸರಾದಂದು ಅವುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು ಏಕೆಂದರೆ ಈ ಎಲ್ಲ ಉಪಕರಣಗಳಿಂದಲೇ ನಮಗೆ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಮಿತ್ರರೇ, ದಸರಾವು ಈ ಎಲ್ಲವುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ. ಆದರೆ ಈ ಉಪಕರಣಗಳ ಅಪಮಾನವಾಗದಿರಲೆಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡೋಣ. ಮಾಡುವಿರಲ್ಲವೇ ? ಇದು ನಿಜವಾದ ವಿದ್ಯಾರ್ಥಿಗಳ ದಸರಾ ಆಗಿದೆ.
– ಶ್ರೀ ರಾಜೇಂದ್ರ ಪಾವಸಕರ್, ಪನವೇಲ್