ರಾಜಾ ಶೂರಸೇನನ ಆಧ್ಯಾತ್ಮದ ಜಿಜ್ಞಾಸೆ, ಆತ್ಮಾನಂದ ಮಹಾರಾಜರ ಮಾರ್ಗದರ್ಶನ ಪಡೆಯುವ ಇಚ್ಛೆ
ಶೂರಸೇನ ಎಂಬ ಒಬ್ಬ ರಾಜನಿದ್ದನು. ಅವನು ತನ್ನ ರಾಜ್ಯವನ್ನು ಬಹಳಷ್ಟು ವೃದ್ಧಿಸಿದನು. ಅವನ ಪ್ರಜೆಗಳೂ ಸುಖದಿಂದ ಇದ್ದರು. ರಾಜನಿಗೆ ತನ್ನ ಶೌರ್ಯ, ರಾಜ್ಯ, ಐಶ್ವರ್ಯ ಹಾಗೂ ಕರ್ತೃತ್ವದ ಬಗ್ಗೆ ಬಹಳ ಅಭಿಮಾನವಿತ್ತು. ಅವನಿಗೆ ಆಧ್ಯಾತ್ಮವನ್ನು ಕಲಿಯುವ ತೀವೃ ಇಚ್ಛೆಯಾಯಿತು. ಆಗ ಶೂರಸೇನನು ತನ್ನ ಪ್ರಧಾನಿಯನ್ನು ಕರೆದು ರಾಜ್ಯದಲ್ಲಿ ಸರ್ವಶ್ರೇಷ್ಠ ಆಧ್ಯಾತ್ಮದಲ್ಲಿನ ಅಧಿಕಾರಿಗಳಾದ ಗುರುಗಳನ್ನು ಸತ್ಕರಿಸಿ ಅವರನ್ನು ಪ್ರತಿದಿನ ಆಧ್ಯಾತ್ಮ ಕಲಿಸಲು ಅರಮನೆಗೆ ಕರೆತರಲು ಹೇಳಿದನು.
ಪ್ರಧಾನಿ : ಆತ್ಮಾನಂದ ಮಹಾರಾಜರು ನಮ್ಮ ರಾಜಧಾನಿಯ ಬಳಿ ಇರುವ ಕಾಡಿನಲ್ಲಿ ಒಂದು ಗುಡಿಸಲಿನಲ್ಲಿ ವಾಸಿಸುತ್ತಾರೆ. ಅವರಿಗೆ ಸಾಕ್ಷಾತ್ಕಾರವಾಗಿದೆ,ಆದರೆ ನನಗೆ ಅವರು ಇಲ್ಲಿ ಅರಮನೆಗೆ ಬರುವರೆಂದು ಅನಿಸುವುದಿಲ್ಲ.
ರಾಜಾ ಶೂರಸೇನ : ನೀನು ರಥವನ್ನು ತೆಗೆದುಕೊಂಡು ಹೋಗು. ಅವರನ್ನು ಸತ್ಕರಿಸಿ ಹೇಗಾದರೂ ಮಾಡಿ ಇಲ್ಲಿಗೆ ಕರೆದುಕೊಂಡು ಬಾ.
ಪ್ರಧಾನಿಯು ಆತ್ಮಾನಂದ ಮಹಾರಾಜರ ಬಳಿ ಹೋಗಿ ಅವರಿಗೆ ನಮಸ್ಕಾರ ಮಾಡಿ ರಾಜನ ಸಂದೇಶವನ್ನು ಹೇಳಿದನು.
ಆತ್ಮಾನಂದ ಮಹಾರಾಜರು : ನೋಡಿ, ನನಗೆ ಅರಮನೆಯ ಅವಶ್ಯಕತೆಯಿಲ್ಲ. ರಾಜನಿಗೆ ಆಧ್ಯಾತ್ಮವನ್ನು ಕಲಿಯಬೇಕಿದೆ ಅಲ್ಲವೇ? ಅವನಿಗೆ ನಿಜವಾದ ತಳಮಳವಿದ್ದರೆ ಅವನು ಕಲಿಯಲು ನನ್ನ ಗುಡಿಸಲಿಗೆ ಬರಬೇಕು.
ಶೂರಸೇನನ ಆಶ್ರಮ ಭೇಟಿ, ಆತ್ಮಾನಂದರ ದರ್ಶನ
ಪ್ರಧಾನಿಯು ರಾಜನಿಗೆ ಪ್ರಸಂಗವನ್ನು ವಿವರಿಸಿದನು. ರಾಜನು ಆಧ್ಯಾತ್ಮವನ್ನು ಕಲಿಯಲು ಆತ್ಮಾನಂದರ ಗುಡಿಸಲಿಗೆ ಹೋಗಲು ಸಿದ್ಧನಾದನು. ರಾಜನು ಗುಡಿಸಲಿಗೆ ಬಂದಾಗ, ಆತ್ಮಾನಂದರು ಗುಡಿಸಲಿನ ಒಂದು ಕೋಣೆಯಲ್ಲಿ ಕುಳಿತಿದ್ದರು. ರಾಜನು ಪ್ರಧಾನಿಯ ಮೂಲಕ ತಾನು ಬಂದಿರುವುದರ ಸಂದೇಶವನ್ನು ಕಳಿಸಿದನು. ರಾಜನಿಗೆ ’ಆತ್ಮಾನಂದರು ನನ್ನ ಸ್ವಾಗತಕ್ಕಾಗಿ ಹೊರಗೆ ಬರುವರು’ ಎಂದು ಅನಿಸಿತು. ಆತ್ಮಾನಂದ ಮಹಾರಾಜರು ಪ್ರಧಾನಿಗೆ ’ನೀವು ರಾಜರನ್ನು ಕರೆದುಕೊಂಡು ನನ್ನ ಕೋಣೆಗೆ ಬನ್ನಿ’ ಎಂದು ಹೇಳಿದರು. ಕೋಣೆಯ ಬಾಗಿಲು ಕೇವಲ ೪ ಅಡಿ ಎತ್ತರವಾಗಿತ್ತು. ರಾಜ ಹಾಗೂ ಪ್ರಧಾನಿಗೆ ಬಗ್ಗಿ ಕೋಣೆಯ ಒಳಗೆ ಬರಬೇಕಾಯಿತು. ಆತ್ಮಾನಂದ ಮಹಾರಾಜರು ಎದ್ದು ನಿಂತು ಇಬ್ಬರನ್ನೂ ಸ್ವಾಗತಿಸಿದರು. ಅವರಿಗೆ ತಿನ್ನಲು ತಾಜಾ ಹಣ್ಣುಗಳನ್ನು ನೀಡಿದರು ಹಾಗೂ ಹೆಚ್ಚು ಸಮಯ ಮಾತನಾಡದೇ ಆಧ್ಯಾತ್ಮವನ್ನು ಕಲಿಸಲು ಆರಂಭಿಸಿದರು.
ಶೂರಸೇನ ಆಧ್ಯಾತ್ಮದ ಮೊದಲನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು
ಶೂರಸೇನ ಆತ್ಮಾನಂದ ಮಹಾರಾಜರನ್ನು ನೋಡಿ ಆನಂದಿತರಾದರು. ಹೊರಡುವಾಗ ಅವನು ಆತ್ಮಾನಂದ ಮಹಾರಾಜರಿಗೆ ನಮೃತೆಯಿಂದ ’ಮಹಾರಾಜರೇ, ನಾನು ರಾಜ್ಯಭಾರದಲ್ಲಿ ನಿರತನಾಗಿರುತ್ತೇನೆ, ನಿಮ್ಮ ಬಗ್ಗೆ ನನಗೆ ಆದರವಿದೆ. ನಾನು ನಿಮ್ಮ ಬಂದು ಹೋಗುವ ವ್ಯವಸ್ಥೆಯನ್ನು ಸನ್ಮಾನಪೂರ್ವಕವಾಗಿ ಮಾಡಲು ಪ್ರಧಾನಿಗೆ ಹೇಳಿದ್ದೆ. ಹೀಗಿರುವಾಗಲೂ ನೀವು ನನ್ನನ್ನು ಇಲ್ಲಿಗೆ ಏಕೆ ಕರೆದಿರಿ?’ ಎಂದು ಕೇಳಿದನು.
ಆತ್ಮಾನಂದ ಮಹಾರಾಜರು ’ನೀನು 'ನಾನೋರ್ವ ರಾಜಾ' ಎಂಬ ಅಹಂಕಾರವನ್ನು ಬಿಟ್ಟು ಗುಡಿಸಲಿಗೆ ಬಂದೆ ಹಾಗೂ ಗುಡಿಸಲಿಗೆ ಬಂದ ನಂತರವೂ ೪ ಅಡಿಯ ಬಾಗಿಲಿನಿಂದ ಬಗ್ಗಿ ನನ್ನ ಬಳಿ ಬಂದಿರುವೆ, ಇದೇ ನಿನ್ನ ಆಧ್ಯಾತ್ಮದ ಮೊದಲ ಪಾಠವಾಗಿತ್ತು. ನೀನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವೆ. ನಾಳೆಯಿಂದ ನಾನು ನಿನ್ನ ಸಮಯಕ್ಕೆ ಅನುಗುಣವಾಗಿ ಅರಮನೆಗೆ ಬರುವೆನು’ ಎಂದು ಹೇಳಿದರು.
ಮಿತ್ರರೇ, ಈ ಕಥೆಯ ನೀತಿಯನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುವುದು? 'ವಿದ್ಯಾ ವಿನಯೇನ ಶೋಭತೆ' ಎಂಬ ಗಾದೆ ಮಾತಿದೆ. ಯಾವುದೇ ವಿಷಯವನ್ನು ಕಲಿಯಲು ನಮ್ಮಲ್ಲಿ ಮುಖ್ಯವಾಗಿ ವಿನಯವೆಂಬ ಗುಣವಿರಬೇಕು. ಅಹಂಕಾರಿ ಮನುಷ್ಯನಿಗೆ ವಿದ್ಯೆಯಿಂದ ಏನೂ ಲಾಭವಾಗುವುದಿಲ್ಲ.