ನಾನು ಆಷಾಢ ಕೃಷ್ಣ ಷಷ್ಟಿ, ಕಲಿಯುಗ ವರ್ಷ ೫೧೧೫ (೨೮.೭.೨೦೧೩) ರಂದು ಮುಂಬೈಯರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಆಗ ನನ್ನ ಎದುರು ೨ ಕುಟುಂಬಗಳು ಕುಳಿತಿದ್ದವು. ಪ್ರತಿ ಕುಟುಂಬದಲ್ಲಿಯೂ ಒಂದು ಗಂಡು ಮಗುವಿತ್ತು. ಎರಡೂ ಮಕ್ಕಳು ತಮ್ಮ ತಂದೆ-ತಾಯಿಯರೊಂದಿಗೆ ಆಟವಾಡುತ್ತಿದ್ದರು. ಆಟವಾಡುತ್ತ ಅದರಲ್ಲಿ ಒಂದು ಮಗು ಹೊಡೆಯುವಂತೆ ತಂದೆಯ ಮುಂದೆ ಕೈಯಿಂದ ಮುಷ್ಟಿ ಕಟ್ಟಿ ನಿಂತಿತ್ತು. ಕೆಲವೇ ನಿಮಿಷಗಳಲ್ಲಿ ಇನ್ನೊಂದು ಮಗು ತಂದೆಯ ಮುಖದ ಎದುರು ಬಂದೂಕು ಹಿಡಿದು ಗುಂಡು ಹಾರಿಸಿದಂತೆ ಮಾಡಿತು. ತಂದೆ-ತಾಯಿಯರು ಮಕ್ಕಳಿಗೆ ಬೈಯ್ಯದೆ ನಕ್ಕು ಪ್ರೋತ್ಸಾಹಿಸುತ್ತಿದ್ದರು.
ಇದನ್ನು ನೋಡಿದಾಗ ಇವೆಲ್ಲವೂ ಸದ್ಯದ ಚಲನಚಿತ್ರಗಳ ಪ್ರಭಾವವಾಗಿದೆ ಎಂಬುದರ ಅರಿವಾಯಿತು. ಅನೇಕ ಚಲನಚಿತ್ರಗಳಲ್ಲಿ ಹಿಂಸಾತ್ಮಕ ವೃತ್ತಿಯನ್ನು ಪ್ರದರ್ಶಿಸಲಾಗುತ್ತದೆ. ಹೊಡೆದಾಟ, ಪರಸ್ಪರರ ಹತ್ಯೆ,ದಂಗೆ ಹಾಗೂ ಹಿಂಸಾಚಾರ ಇಂತಹ ಅನೇಕ ದೃಶ್ಯಗಳನ್ನು ಸಾರಾಸಗಟಾಗಿ ತೋರಿಸುತ್ತಾರೆ. ಮಕ್ಕಳ ನಿರ್ಮಲ ಮನಸ್ಸಿನ ಮೇಲೆ ಅದರ ಪರಿಣಾಮವಾಗುತ್ತದೆ. ಇದರಿಂದ ಅವರೂ ಹಿಂಸಾತ್ಮಕವಾಗಿ ವರ್ತಿಸಲು ಆರಂಭಿಸುತ್ತಾರೆ. ಹಿಂದಿನ ಕಾಲದಲ್ಲಿ ಮಕ್ಕಳು ತಂದೆ ತಾಯಿಗೆ ನಮಸ್ಕಾರ ಮಾಡುತ್ತಿದ್ದರು, ಆದರೆ ಈ ಬಂದೂಕು ಹಿಡಿದಿರುವಂತೆ ಮಾಡುವುದನ್ನು ನೋಡಿದರೆ ಸಮಾಜದ ನೈತಿಕತೆಯು ರಸಾತಳಕ್ಕೆ ಹೋಗುತ್ತಿರವುದರ ಅರಿವಾಗುತ್ತದೆ, ಇದೇ ಮಕ್ಕಳು ಮುಂದೆ ವಯಸ್ಕರಾದಾಗ ಕೊಲೆ, ಹೊಡೆದಾಟ ಮಾಡುವುದಿಲ್ಲ ಎಂಬುದರ ಪ್ರಮಾಣವೇನು? ನಾಳೆ ಇದೇ ಮಕ್ಕಳು ತಂದೆ-ತಾಯಿಯರ ಎದುರು ನಿಜವಾದ ಬಂದೂಕು ಹಿಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ನಾವು ವರ್ತಮಾನ ಪತ್ರಿಕೆಗಳಲ್ಲಿ ಮಕ್ಕಳು ತಂದೆ-ತಾಯಿ ಹತ್ಯೆ ಮಾಡಿರುವುದರ ಅನೇಕ ಉದಾಹರಣೆಗಳನ್ನು ಓದಿದ್ದೇವೆ. ತಂದೆ-ತಾಯಿ ಅಯೋಗ್ಯ ಕೃತಿಗಳಿಗೆ ನೀಡುವ ಸಕಾರಾತ್ಮಕ ಪ್ರೋತ್ಸಾಹದಿಂದಲೇ ಇಂದಿನ ಪೀಳಿಗೆಯ ಅಧಃಪತನವಾಗುತ್ತಿದೆ.
ಇಂದಿನ ಮಕ್ಕಳಿಗೆ ಸಂಸ್ಕಾರವೆಂದರೆ ಏನು ಎಂಬುದೇ ತಿಳಿದಿಲ್ಲ. ತಂದೆ-ತಾಯಿಯರೇ ಮಕ್ಕಳಿಗೆ ಸಂಸ್ಕಾರವಂತರನ್ನಾಗಿ ಮಾಡಬೇಕು. ಭಾವಿ ಪೀಳಿಗೆಯನ್ನು ಸಂಸ್ಕಾರವಂತರನ್ನಾಗಿಸಲು ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ.
– ಸೌ. ನಮೃತಾ ದಿವೇಕರ, ಪನವೇಲ.