ಮಕ್ಕಳೇ, ಇದು ಮಹಭಾರತದಲ್ಲಿ ಬರುವ ಕಥೆ. ನಿಮಗೆಲ್ಲ ಅಪೂರ್ವ ಬಿಲ್ವಿದ್ಯಾ ಗುರು ದ್ರೊಣಾಚಾರ್ಯರ ಬಗ್ಗೆ ಗೊತ್ತೇ ಇದೆ. ಇವರು ಕೌರವರಿಗೂ, ಪಾಂಡವರಿಗೂ ಬಿಲ್ವಿದ್ಯೆ ಕಲಿಸಿದ ಗುರು. ಇವರಿಗೆ ಅಶ್ವತ್ಥಾಮನೆಂಬ ಮಗನಿದ್ದನು. ಅವನು ತನ್ನ ತಂದೆ ದ್ರೊಣರಿಂದ ಹಾಗು ಸೋದರಮಾವ ಕೃಪಾಚಾರ್ಯರಿಂದ ಬಿಲ್ವಿದ್ಯೆ ಕಲಿತು ಶ್ರೇಷ್ಠ ಬಿಲ್ಲುಗಾರನದನು. ಅನೇಕ ಗೌಪ್ಯ ಬಾಣ ಪ್ರಯೋಗಗಳನ್ನೆಲ್ಲಾ ಕಲಿತು ಬಹುಬೇಗ ನಿಸ್ಸೀಮನಾದನು. ಹೀಗಿರುವಾಗ ಅವನಿಗೆ ಶ್ರೀಕೃಷ್ಣನು ಪಾಂಡವರಿಗೆ ಅಭಯವಿತ್ತ ವಿಷಯ ತಿಳಿಯಿತು. ಅವನು ತಾನೂ ಹೋಗಿ ಶ್ರೀಕೃಷ್ಣನಿಂದ ಏನನ್ನಾದರೂ ಪಡೆಯಲು ಇದೇ ಸುಸಮಯವೆಂದು ಭಾವಿಸಿದನು.
ಶ್ರೀಕೃಷ್ಣನಲ್ಲಿ ಅವನು, "ನೋಡು ನನ್ನ ಬಳಿ ಬ್ರಹ್ಮಶಿರವೆಂಬ ಮಹಾ ಅಸ್ತ್ರವಿದೆ. ಅದನ್ನು ನಿನ್ನ ಶತೃವಿನ ಮೇಲೆ ಪ್ರಯೋಗಿಸಿದರೆ ಅವನ ನಾಶ ನಿಶ್ಚಿತ. ನಾನು ನಿನಗೆ ಈ ಅಸ್ತ್ರವನ್ನು ಕೊಡುತ್ತೇನೆ ನೀನು ನನಗೆ ನಿನ್ನ ಸುದರ್ಶನವನ್ನು ಕೊಡುವೆಯಾ, ಈ ವ್ಯಾಪರಕ್ಕೆ ಒಪ್ಪುವೆಯಾ?" ಎಂದು ಕೇಳಿದನು.
ಶ್ರೀಕೃಷ್ಣನು ಮುಗುಳುನಗೆ ಬೀರಿ "ಸಂತೋಷ, ನೀನೇ ತೆಗೆದುಕೋ" ಎಂದು ತನ್ನ ಬೆರಳನ್ನು ತೋರಿದನು. ಅಶ್ವತ್ಥಾಮನು ಅದನ್ನು ತೆಗೆದುಕೊಳ್ಳಲು ಮುಂದಾದನು. ಆದರೆ ಅವನು ಎಷ್ಟೇ ಪ್ರಯತ್ನಿಸಿದರೂ ಅದನ್ನು ಅಲುಗಡಿಸಲೂ ಆಗಲ್ಲಿಲ್ಲ. ಆಗ ಶ್ರೀಕೃಷ್ಣನು ಮುಗುಳುನಕ್ಕು "ಅಶ್ವತ್ಥಾಮ, ನಿನಗೆ ನನ್ನ ಅಸ್ತ್ರವನ್ನು ಎತ್ತಲೂ ಆಗುತ್ತಿಲ್ಲ, ಅದನ್ನು ನೀನು ಹೇಗೆ ಪ್ರಯೋಗಿಸುವೆ?" ಎಂದನು. ಅಶ್ವತ್ಥಾಮನು ನಾಚಿಕೆಯಿಂದ ತಲೆತಗ್ಗಿಸಿದನು.
ನೀತಿ: ಅಶ್ವತ್ತ್ಥಾಮನಂತೆ ನಾವೂ ಕೂಡ ಭಗವಂತನ ಸ್ಮರಣೆಯ ಬದಲಿಗೆ ಏನ್ನನ್ನಾದರೂ ಅಪೇಕ್ಷಿಸುತ್ತೇವೆ. ಹಿರಿಯರು ಹೇಳುತ್ತಾರೆಂದು ಭಗವಂತನನ್ನು ಪೂಜಿಸಿ ಅವರ ಮೇಲೂ ಭಗವಂತನ ಮೇಲೂ ಉಪಕಾರ ಮಾಡಿದಂತೆ ಎಂದು ತಿಳಿಯುತ್ತೇವೆ. ಈ ಕಥೆಯ ನೀತಿ ಏನೆಂದರೆ ನಾವು ಸಮರ್ಪಣಾ ಭಾವದಿಂದ ದೈನ್ಯತೆಯಿಂದ ಅವನ ಅಗತ್ಯ ನಮಗೆ ಇದೆ ಎಂದು ಭಾವಿಸಿ ಪೂಜಿಸಬೇಕು, ಸ್ಮರಿಸಬೇಕು. ಹೀಗಾದಾಗ ಮಾತ್ರ ಅವನು ತನ್ನ ಅಭಯವನ್ನಿತ್ತು ನಮ್ಮನ್ನು ಸಲಹುತ್ತಾನೆ.