ಭಾರತಾಂಬೆಯ ಚರಣಗಳಲ್ಲಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳ ಪಟ್ಟಿಯಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಇವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಸೌಂಡರ್ಸ್ ಎಂಬ ಆಂಗ್ಲ ಅಧಿಕಾರಿಯ ಪೀಡೆಯಿಂದ ಮುಕ್ತಿ ನೀಡಿದ ಈ ಮೂವರು, ನಗುನಗುತ ನೇಣುಗಂಬವನ್ನು ಏರಿದರು. ಈ ಮೂರು ಮಹಾನ್ ಕ್ರಾಂತಿಕಾರಿಗಳ ಬಲಿದಾನ ದಿನದ ನಿಮಿತ್ತ ಈ ವಿಶೇಷ ಲೇಖನವನ್ನು ಅರ್ಪಿಸುತ್ತೇವೆ.
ಭಾರತದ ಅಂದಿನ ಪರಿಸ್ಥಿತಿ..
೧೯೨೮ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಆಗಮಿಸಿತು. ಭಾರತದ ಮುಂದಿನ ದಿಶೆಯನ್ನು ನಿರ್ಧರಿಸುವುದು ಈ ಮಂಡಲದ ಉದ್ದೇಶವಾಗಿತ್ತು. ಭಾರತದಾದ್ಯಂತ ಈ ಮಂಡಲಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಲಾಲಾ ಲಜಪತ ರಾಯ್ ನೇತೃತ್ವದಲ್ಲಿ ಜನರು ‘ಸೈಮನ್ ಗೋ ಬ್ಯಾಕ್’ (ಸೈಮನ್ ಹಿಂದಿರುಗು) ಎಂದು ನಿಷೇಧ ಯಾತ್ರೆಯೊಂದಿಗೆ ಬೀದಿಗಿಳಿದರು! ಪರಿಸ್ಥಿತಿಯನ್ನು ನಿಯಂತ್ರಿಸಲು ಆಂಗ್ಲ ಅಧಿಕಾರಿಗಳು ನೆರೆದವರ ಮೇಲೆ ಅಮಾನುಷ ಲಾಠಿ ಪ್ರಹಾರ ಮಾಡಿಸಿದರು. ಇದರಲ್ಲಿ ಲಾಲಾ ಲಜಪತ ರಾಯ್ ಅಸುನೀಗಿದರು. ಇದನ್ನು ಸಹಿಸದ ಕ್ರಾಂತಿಕಾರಿಗಳು, ಲಾಲಾಜಿ ಸಾವಿಗೆ ಕಾರಣನಾದ ಆಂಗ್ಲ ಅಧಿಕಾರಿ ಸ್ಕಾಟ್ ನನ್ನು ಕೊಲ್ಲುವ ನಿರ್ಧಾರ ಮಾಡಿದರು. ಅದರಂತೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಸೇರಿ ಸ್ಕಾಟ್ ನಿವಾಸದ ಹೊರಗೆ ಹೊಂಚು ಹಾಕಿದರು. ಆದರೆ ಸ್ಕಾಟ್ ಬದಲು ಸೌಂಡರ್ಸ್ ಎಂಬ ಇನ್ನೋರ್ವ ಕ್ರೂರ ಅಧಿಕಾರಿಯು ಭಗತ್ ಸಿಂಗ್ ಹಾರಿಸಿದ ಗುಂಡಿಗೆ ಬಲಿಯಾದನು. ಆಂಗ್ಲ ಅಧಿಕಾರಿಯನ್ನು ಕೊಂದ ಈ ಮೂವರನ್ನು ಹಿಡಿಯಲು ಬ್ರಿಟಿಷ್ ಸರಕಾರ ಶತಪ್ರಯತ್ನ ಮಾಡಿತು. ಆದರೆ ಆರಕ್ಷಕರ ಕಣ್ಣು ತಪ್ಪಿಸಿ ಇವರೆಲ್ಲರೂ ಭೂಗತರಾದರು ಮತ್ತು ಇತರ ಕ್ರಾಂತಿಕಾರಿಗಳಿಗೆ ಈ ಕಾರ್ಯವನ್ನು ಮುನ್ನಡೆಸಲು ಸ್ಪೂರ್ತಿ ನೀಡಿದರು. ಮುಂದೊಂದು ದಿನ ಇವರನ್ನು ಇನ್ನೊಂದು ಪ್ರಕರಣದಲ್ಲಿ ೨೩.೩.೧೯೩೦ರಲ್ಲಿ ಗಲ್ಲಿಗೇರಿಸಲಾಯಿತು.
ಭಗತ್ ಸಿಂಗ್ ಕಿರು ಪರಿಚಯ
ಜನನ : ೨೭.೯.೧೯೦೭ ರಂದು ಪಂಜಾಬಿನ ಒಂದು ದೇಶಭಕ್ತ ಸಿಖ್ ಕುಟುಂಬದಲ್ಲಿ
ಬಾಲ್ಯ : ಸ್ವಾತಂತ್ರ್ಯ ಪೂರ್ವದ ಘಟನೆ. ಪಂಜಾಬಿನ ಒಂದು ಹಳ್ಳಿ. ೩ ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಸುತ್ತಾಡಿ ಬರಲು ಮನೆಯಿಂದ ಹೊರಟ. ಅವರೊಂದಿಗೆ ಅವನ ತಂದೆಯ ಮಿತ್ರರೊಬ್ಬರು ಇದ್ದರು. ಮೂವರೂ ಮಾತಾಡುತ್ತ ಮುಂದೆ ಮುಂದೆ ಹೋಗಿ ಅವರ ಊರಿನ ಗಡಿಯಾಚೆ ನಡೆದರು. ಊರಿನಾಚೆ ಹೊಲ ಗದ್ದೆಗಳ ಮಧ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಿರಿಯರು ಬಾಲಕನ ನೆನಪಾಗಿ ತಿರುಗಿ ನೋಡಿದರು. ಅವನು ಗದ್ದೆಯೊಂದರಲ್ಲಿ ಕುಳಿತು ಏನೋ ಮಾಡುತ್ತಿದ್ದದ್ದನ್ನು ಕಂಡು ಅವನೆಡೆಗೆ ನಡೆದರು. ಬಾಲಕನ ತಂದೆ ಕುತೂಹಲದಿಂದ ‘ಏನು ಮಾಡುತ್ತಿದ್ದೀಯಾ?’ ಎಂದು ಕೇಳಿದರು. ಆಗ ಬಾಲಕನು ‘ಈ ಹೊಲದ ತುಂಬಾ ನಾನು ಬಂದೂಕುಗಳನ್ನು ನೆಡುತ್ತೇನೆ’ ಎಂದು ಮುಗ್ಧವಾಗಿ ಉತ್ತರಿಸಿದನು. ಈ ಮಾತು ಹೇಳುವಾಗ ಅವನ ಕಣ್ಣಿನಲ್ಲಿ ‘ನೆಟ್ಟಿರುವ ಬಂದೂಕುಗಳು ಹೊಲದ ತುಂಬಾ ಬೆಳೆಯಲಿವೆ’ ಎಂಬ ಬಲವಾದ ನಂಬಿಕೆ ಕಾಣುತ್ತಿತ್ತು! ಏಕೆ ಎಂದು ಪ್ರಶ್ನಿಸಿದಕ್ಕೆ ‘ಈ ಬಂದೂಕುಗಳಿಂದ ನಾವು ಆಂಗ್ಲರನ್ನು ನಮ್ಮ ದೇಶದಿಂದ ಹೊರಗೆ ಓಡಿಸಬಹುದು’ ಎಂಬ ಉತ್ತರವನ್ನು ನೀಡಿದ! ಇದನ್ನು ಕೇಳುತ್ತಿದ್ದ ಹಿರಿಯರು ಈ ಬಾಲಕನ ದೇಶಭಕ್ತಿಯ ಬಗ್ಗೆ ಆಶ್ಚರ್ಯಚಕಿತರಾದರು.
ಯುವಾವಸ್ಥೆ :ಉನ್ನತ ಶಿಕ್ಷಣ, ಸಿರಿವಂತ ಮನೆಯ ಸರ್ವ ಅನುಕೂಲಗಳು ಇವೆಲ್ಲವನ್ನೂ ತ್ಯಜಿಸಿ, ದೇಶಕ್ಕಾಗಿ ಅವಿವಾಹಿತನಾಗಿರಲು ನಿರ್ಧಿರಿಸದ ಭಗತ್ ಸಿಂಗ್, ಕ್ರಾಂತಿಕಾರಿಯಾದನು. ‘ನೌಜವಾನ್ ಭಾರತ ಸಭಾ’, ‘ಕೀರ್ತಿ ಕಿಸಾನ್ ಪಾರ್ಟಿ’ ಮತ್ತು ‘ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್’ ಮುಂತಾದ ಅನೇಕ ಸಂಘಟನೆಗಳನ್ನು ಸ್ಥಾಪಿಸಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೃತಿಶೀಲನಾದನು.
ಜೀವನದ ಕೆಲವು ಪ್ರಸಂಗಗಳು : ತನಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ತಿಳಿದ ನಂತರ ಭಗತ್ ತಾಯಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾನೆ – ‘ಅಮ್ಮ, ಚಿಂತಿಸಬೇಡ! ಗಲ್ಲು ಆದರೇನು! ಆಂಗ್ಲ ಸರಕಾರವನ್ನು ಕಿತ್ತೊಗೆಯಲು ಒಂದೇ ವರ್ಷದಲ್ಲಿ ಪುನಃ ಜನ್ಮ ತಾಳುವೆನು!’
ಶಿವರಾಮ ಹರಿ ರಾಜಗುರು
ಜನನ : ೨೪.೮.೧೯೦೮ ರಲ್ಲಿ ಮಹಾರಾಷ್ಟ್ರದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನನ. ಅನೇಕ ಗ್ರಂಥಗಳ ಅಧ್ಯಯನ ಮಾಡಿದವರು. ಇವರು ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಸದಸ್ಯರಾಗಿದ್ದರು.
ರಾಜಗುರು ಜೀವನದ ಕೆಲವು ಪ್ರಸಂಗಗಳು
ಪ್ರಸಂಗ ೧ : ಒಮ್ಮೆ ಕ್ರಾಂತಿಕಾರಿಗಳು ಊಟಕ್ಕಾಗಿ ಸೇರಿದಲ್ಲಿ ರಾಜಗುರು ರೊಟ್ಟಿಯನ್ನು ತಯಾರಿಸುತ್ತಿದ್ದನು. ತಂದೂರ್ ಒಳಗೆ ಬೇಯಿಸಿದ ರೊಟ್ಟಿಗಳನ್ನು ಬರಿಗೈಯ್ಯಿಂದ ಹೊರತೆಗೆಯುತ್ತಿದ್ದ ರಾಜಗುರುನನ್ನು ನೋಡಿದ ಓರ್ವ ಕ್ರಾಂತಿಕಾರಿ ಅವನ ಪ್ರಶಂಸೆ ಮಾಡಿದನು. ಆಗ ಇನ್ನೋರ್ವ ಕ್ರಾಂತಿಕಾರಿ ತಮಾಷೆ ಮಾಡುತ್ತಾ ‘ತಂದೂರ್ ಒಳಗೆ ಕೈ ಹಾಕುವುದು ದೊಡ್ಡ ಕೆಲಸವಲ್ಲ. ರಾಜಗುರು ಪೊಲೀಸರ ಅತ್ಯಾಚಾರಗಳನ್ನು ಇಷ್ಟು ಸಹಿಷ್ಣುತೆಯಿಂದ ಎದುರಿಸಿದರೆ ಮಾತ್ರ ಅದು ಪ್ರಶಂಸನೀಯ’ ಎಂದನು. ಇದನ್ನು ಕೇಳಿದ ರಾಜಗುರು ಶಾಂತವಾಗಿ ಒಂದು ಬಾಣಾಲೆಯನ್ನು ಬಿಸಿ ಮಾಡಿ ತನ್ನ ಎದೆಗೆ ಒತ್ತಿಕೊಂದನು. ಚರ್ಮ ಸುಟ್ಟು ಹೋಯಿತು. ಪುನಃ ಹಾಗೆ ಮಾಡಿದನು! ನಗುತ್ತ ‘ಈಗ ಹೇಳು, ನಾನು ಕಾರಾಗೃಹ ಅತ್ಯಾಚಾರಗಳನ್ನು ಸಹಿಸಲು ಸಿದ್ಧನಿದ್ದೇನೆ ಎಂಬುದಕ್ಕೆ ಏನಾದರೂ ಸಂದೇಹ ಉಂಟೆ?’ ಎಂದು ಕೇಳಿದನು. ಆ ಕ್ರಾಂತಿಕಾರಿಗೆ ತನ್ನ ತಪ್ಪಿನ ಅರಿವಾಯಿತು, ‘ರಾಜಗುರು, ನಿನ್ನ ಪ್ರಖರ ದೇಶಭಕ್ತಿಯ ಬಗ್ಗೆ ನನಗೆ ಕಿಂಚಿತ್ತೂ ಅನುಮಾನವಿಲ್ಲ, ನನ್ನನ್ನು ಕ್ಷಮಿಸು’ ಎಂದು ಕ್ಷಮೆ ಯಾಚಿಸಿದನು.
ಪ್ರಸಂಗ ೨ : ರಾಜಗುರು ಕಾರಾಗೃಹದಲ್ಲಿದ್ದಾಗ ಅವರ ಮೇಲೆ ಅಮಾನವೀಯ ಅತ್ಯಾಚಾರಗಳು ಆದವು. ಲಾಹೋರ್ ನಲ್ಲಿ ಆಗ ತೀವ್ರ ಬೇಸಿಗೆ. ಆ ಬಿಸಿಲಿನಲ್ಲಿ, ಸುತ್ತಲೂ ಬೆಂಕಿಯನ್ನು ಹಚ್ಚಿ ಅವರನ್ನು ಮಧ್ಯದಲ್ಲಿ ಕೂರಿಸಿದರು. ಮಂಜುಗಡ್ಡೆಯ ‘ಹಾಸಿಗೆ’ಯ ಮೇಲೆ ಮಲಗಿಸಿದರು. ಅವಯವಗಳ ನಿಷ್ಕ್ರಿಯವಾದವು! ಯಾವುದಕ್ಕೂ ಬಗ್ಗದ ರಾಜಗುರು ತಲೆಯ ಮೇಲೆ ಮಲದ ಧಾರೆ ಕೂಡ ಎರೆದರು. ಇದೆಲ್ಲವನ್ನು ಸಹಿಸಿದ ರಾಜಗುರು ಬಾಯಿ ಬಿಡಲಿಲ್ಲ, ತನ್ನ ಸಹಕ್ರಾಂತಿಕಾರಿಗಳ ಹೆಸರನ್ನು ಹೇಳಲಿಲ್ಲ !
ಪ್ರಸಂಗ ೩ : ರಾಷ್ಟ್ರ ಕಾರ್ಯಕ್ಕಾಗಿ ಹಂಬಲಿಸುವ ರಾಜಗುರು: ನೇಣುಗಂಬವನ್ನು ಏರುವ ಮೊದಲು ಇತರ ಕ್ರಾಂತಿಕಾರಿಗಳೊಂದಿಗೆ ಮಾತನಾಡುತ್ತ ರಾಜಗುರು ಹೀಗೆ ಹೇಳಿದರು – ‘ನೀವೆಲ್ಲರೂ ಇನ್ನಷ್ಟು ವರ್ಷಗಳು ಭಾರತಾಂಬೆಗಾಗಿ ಕಾರ್ಯ ಮಾಡಲಿರುವಿರಿ. ಆದರೆ ನೇಣುಗಂಬ ಏರಿದ ತಕ್ಷಣ ನಮ್ಮ ಪ್ರವಾಸ ಅಂತ್ಯಗೊಳ್ಳುತ್ತದೆ ಎಂದು ಯೋಚಿಸಿ ದುಃಖವಾಗುತ್ತಿದೆ’.
ಸುಖದೇವ್ ಥಾಪರ್
ಜನನ : ೧೫.೫.೧೯೦೭ ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಜನನ. ‘ನೌಜವಾನ್ ಭಾರತ ಸಭಾ’ ಸಂಸ್ಥಾಪಕ ಮತ್ತು ‘ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್’ನ ಕಾರ್ಯಕರ್ತ.
ಸುಖದೇವ ಜೀವನ : ಸುಖದೇವ್ ಮೇಲೆ ಭಗತ್ ಸಿಂಗ್ ನ ಕ್ರಾಂತಿಕಾರಿ ವಿಚಾರಗಳ ತೀವ್ರ ಪರಿಣಾಮವಾಯಿತು. ಲಾಹೋರಿನ ನ್ಯಾಷನಲ್ ಕಾಲೇಜಿನಲ್ಲಿ ‘ಭಾರತದ ಗೌರವಶಾಲಿ ಇತಿಹಾಸ, ಜಗತ್ತಿನ ಕ್ರಾಂತಿಕಾರಿ ಘಟನೆಗಳ ಅಧ್ಯಯನ, ರಶ್ಶಿಯಾದಲ್ಲಿ ನಡೆದ ಕ್ರಾಂತಿ’ ಇವೆಲ್ಲವುಗಳ ಅಧ್ಯಯನಕ್ಕಾಗಿ ವಿಚಾರವಾದಿಗಳನ್ನು ಸೇರಿಸಿದರು. ಸ್ವಾತಂತ್ರ್ಯ ಸಮರದಲ್ಲಿ ಸಹಭಾಗಿಯಾಗುವಂತೆ ಯುವಕರನ್ನು ಪ್ರೇರೇಪಿಸುವುದು, ಶಾಸ್ತ್ರೀಯ ಅಧ್ಯಯನ, ಕ್ರಾಂತಿಕಾರಿ ಹೋರಾಟ, ಅಸ್ಪೃಶ್ಯತೆಯ ನಿವಾರಣೆ ಇತ್ಯಾದಿ ಧ್ಯೇಯಗಳನ್ನು ಪೂರಿಸಲು ‘ನೌಜವಾನ್ ಭಾರತ ಸಭಾ’ ಸ್ಥಾಪಿಸಿದರು. ಕ್ರಾಂತಿಕಾರಿಗಳ ಮೇಲೆ ನಡೆಯುವ ಅತ್ಯಾಚಾರಗಳ ವಿರುದ್ಧ ೧೯೨೯ರಲ್ಲಿ ಪ್ರಾರಂಭವಾದ ಆಮರಣಾಂತ ಉಪವಾಸದಲ್ಲಿ ಸುಖದೇವ್ ಕೂಡ ಭಾಗವಹಿಸಿದರು.
ಭಾರತಾಂಬೆಯ ಚರಣಗಳಲ್ಲಿ ಲೀನ!
೨೩ ಮಾರ್ಚ, ೧೯೩೧ ರಂದು ಲಾಹೋರಿನ ಸೆಂಟ್ರಲ್ ಜೈಲ್ ನಲ್ಲಿ ಸಂಜೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಈ ಮೂವರೂ ನಗುಮುಖದಿಂದ ನೇಣುಗಂಬವನ್ನು ಏರಿದರು. ಬನ್ನಿ ಈ ಮಹಾನ್ ದೇಶಭಕ್ತರಿಗೆ ನಮ್ಮ ನಮನಗಳನ್ನು ಅರ್ಪಿಸೋಣ!