ಭಾರತೀಯರು ಶೂನ್ಯದ ಆವಿಷ್ಕಾರದಿಂದ ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ !
ಭಾರತೀಯ ಋಷಿಗಳು ಸಂಖ್ಯಾಶಾಸ್ತ್ರದ ಮೇಲೆ ಆಳವಾದ ಅಧ್ಯಯನವನ್ನು ಮಾಡಿ ಅದನ್ನು ಅಂಕಗಣಿತ, ಬೀಜಗಣಿತ ಹಾಗೂ ಜ್ಯೋತಿಷ ಶಾಸ್ತ್ರದಲ್ಲಿ ಉಪಯೋಗಿಸಿರುವುದು ಕಂಡುಬರುತ್ತದೆ. ಶೂನ್ಯದ ಆವಿಷ್ಕಾರ ಭಾರತೀಯರು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಆರ್ಯಭಟರು ಪ್ರಾಚೀನ ಗಣಿತತಜ್ಞ ಹಾಗೂ ಜೋತಿಷಿಗಳಾಗಿದ್ದರು. ಅನಂತರ ಭಾಸ್ಕರಾಚಾರ್ಯರು ಸಿದ್ಧಾಂತ ಶಿರೋಮಣಿ ಗ್ರಂಥವನ್ನು ನಾಲ್ಕು ಭಾಗಗಳಾಗಿ ವಿಭಜಿಸಿದರು –
೧.ಲೀಲಾವತಿ
೨.ಬೀಜಗಣಿತ
೩. ಗಣಿತಾಧ್ಯಾಯ
೪. ಗೋಲಾಧ್ಯಾಯ
ಇವುಗಳ ಪೈಕಿ ಲೀಲಾವತಿ ಎಂಬ ಗಣಿತದ ವಿಷಯದಲ್ಲಿನ ಗ್ರಂಥವು ಅತ್ಯಂತ ಜನಪ್ರಿಯವಾಗಿದೆ. ಐದನೆ-ಆರನೆಯ ಶತಮಾನದಲ್ಲಿನ ಪ್ರಸಿದ್ಧ ಜೋತಿಷಿ ಹಾಗೂ ಗಣಿತತಜ್ಞ ವರಾಹಮಿಹಿರರ ಪಂಚ ಸಿದ್ಧಾಂತಿಕಾ ಎಂಬ ಗ್ರಂಥದಲ್ಲಿ ಆಗಾಗ ಶೂನ್ಯದ ಉಲ್ಲೇಖವು ಕಂಡುಬರುತ್ತದೆ. ಅಂಕಿಯು '೦ ಯಿಂದ ೯' ರವರೆಗೆ ಇರುತ್ತದೆ. ಉಳಿದೆಲ್ಲ ಅಂಕಿಗಳು ಇದರ ವಿಸ್ತಾರವಾಗಿವೆ.
– ಪ.ಪೂ. ಪರಶರಾಮ ಮಾಧವ ಪಾಂಡೆ ( ಶ್ರೀ ಗಣೇಶ-ಅಧ್ಯಾತ್ಮ ದರ್ಶನ, ಪುಟ ೪೫)
ಇಂದಿನವರೆಗೆ ನಮಗೆ 'ಶೂನ್ಯವು ಭಾರತೀಯರು ಜಗತ್ತಿಗೆ ನೀಡಿದ ಕೊಡುಗೆಯಾಗಿದೆ', 'ಪಾಯಥಾಗೋರಸನ ಸೂತ್ರವನ್ನು ಬೋಧಾಯನರು ಮೊದಲೇ ಹೇಳಿದ್ದರು' ಎಂಬುದು ತಿಳಿದಿತ್ತು, ಆದರೆ ಇದು ಹಿಮಾಲಯದ ಅಂಚಿನಂತಿದೆ. ಭಾರತೀಯರು ಗಣಿತದಲ್ಲಿ ಪ್ರಚಂಡ ಪ್ರಗತಿಯನ್ನು ಸಾಧಿಸಿದ್ದರು ಹಾಗೂ ಅವರ ಗ್ರಂಥಗಳು ಇಂದಿಗೂ ಉಪಲಬ್ಧವಿವೆ. ಇದರಲ್ಲಿನ ವಟೇಶ್ವರ ಸಿದ್ಧಾಂತ (ಕ್ರಿ.ಶ. ೯೦೪ ) ದಂತಹ ಗ್ರಂಥವು ದೊಡ್ಡ ದೊಡ್ಡ ಗಣಿತತಜ್ಞರಿಗೂ ತಿಳಿಯುವುದಿಲ್ಲ.
ಪಾಯಥಾಗೋರಸ ಸೂತ್ರದ ಮೂಲವಾಗಿರುವ ಬೋಧಾಯನರ ಸೂತ್ರ
ದೀರ್ಘಚತುರಸ-ಅಕ್ಷ್ಣಯಾ ರಜ್ಜುಃ ಪಾರ್ಶ್ವಮಾನಿ ತಿರ್ಯಂಗಾನಿ ಚ
ಯತ್ಪೃಥಂಗ್ಭೂತೆ ಕುರುತಃ ತದುಭಯಂ ಕರೋತಿ |
– ಬೋಧಾಯನ ಶುಲ್ಬಸೂತ್ರ, ೧.೪೮
ಅರ್ಥ : ಲಂಬಕೋನವು ತ್ರಿಕೋನದ ಕರ್ಣದ ಮೇಲಿನ ವರ್ಗ ಕ್ಷೇತ್ರಫಲವು ಅದೇ ತ್ರಿಕೋನದ ಉಳಿದ ಎರಡು ಬದಿಯ ವರ್ಗ ಕ್ಷೇತ್ರಫಲದ ಮೊತ್ತದಷ್ಟು ಇರುತ್ತದೆ.
ಗಣಿತ, ಬೀಜಗಣಿತ, ವರ್ಗಸಮೀಕರಣ ಮುಂತಾದವುಗಳ ಮೂಲ ಭಾರತ !
ಪೃಥ್ವಿಗೆ ಸೂರ್ಯನ ಸುತ್ತ ಸುತ್ತಲು ೩೬೫.೨೫೮೧ ದಿನಗಳು ಬೇಕಾಗುತ್ತವೆ, ಎಂಬುದರ ಗಣಿತ(ಲೆಕ್ಕಾಚಾರ)ವನ್ನು ಭಾಸ್ಕರಾಚಾರ್ಯರು ಎಷ್ಟೋ ಶತಮಾನಗಳ ಹಿಂದೆಯೆ ಮಾಡಿ ತೋರಿಸಿದ್ದರು. ಪಾಯ್ (pi) ನ ಮೌಲ್ಯವನ್ನು ಮೊಟ್ಟಮೊದಲಿಗೆ ಬುಧಾಯನರು ತೋರಿಸಿಕೊಟ್ಟರು. ಆಧುನಿಕ ಪಾಯಥಾಗೋರಸ ಪ್ರಮೇಯವನ್ನು ಅವರು ಸಾಕಷ್ಟು ಹಿಂದೆ ಅಂದರೆ ಆರನೆಯ ಶತಮಾನದಲ್ಲಿಯೇ ಯುರೋಪಿಯನ್ ಗಣಿತತಜ್ಞರಿಗಿಂತಲೂ ಮೊದಲೇ ಕಂಡು ಹಿಡಿದಿದ್ದರು. ಬೀಜಗಣಿತ, ಕಲನಶಾಸ್ತ್ರ, ತ್ರಿಕೋಣಮಿತಿಯ ಉಗಮವು ಭಾರತದಲ್ಲಿಯೇ ಆಗಿದೆ. ೧೧ನೇ ಶತಮಾನದಲ್ಲಿ ಶ್ರೀಧರಾಚಾರ್ಯರು ದ್ವಿಘಾತವುಳ್ಳ ಸಮೀಕರಣ ತಿಳಿಸಿ ಹೇಳಿದರು. ಗ್ರೀಕ್ ಹಾಗೂ ರೋಮನ್‌ರು ಹೆಚ್ಚೆಂದರೆ ೧೦ ರ ೬ ನೇ ಘಾತದವರೆಗಿನ ಸಂಖ್ಯೆಯನ್ನು ಉಪಯೋಗಿಸುತ್ತಿದ್ದರು. ಆಗ ಭಾರತದಲ್ಲಿ ಕ್ರಿ.ಪೂ. ೫೦೦೦ ರಲ್ಲಿ ೧೦ ರ ೫೩ ನೇ ಘಾತದವರೆಗಿನ ಸಂಖ್ಯೆಯನ್ನು ಉಪಯೋಗಿಸುತ್ತಿದ್ದರು ಹಾಗೂ ಅದಕ್ಕೆ ಒಂದು ವಿಶಿಷ್ಟ ಸಂಜ್ಞೆಯನ್ನು ಕೊಡಲಾಗಿತ್ತು. ಇಂದಿಗೂ ಕೇವಲ ೧೦ ರ ೧೨ನೆಯ ಘಾತದ ವರೆಗಿನ ಹೆಸರುಗಳನ್ನೇ ಬಳಸಲಾಗುತ್ತದೆ.