ಅನೇಕ ಕೌರವರು ಹಾಗೂ ಶೂರ ಯೋಧರು ಯುದ್ಧದಲ್ಲಿ ಪಾಂಡವರ ಕೈಯಲ್ಲಿ ಮಡಿಯುವುದು; ಇದರಿಂದ ಸಂತಪ್ತ ದುರ್ಯೋಧನನು ಭೀಷ್ಮಾಚಾರ್ಯರಿಗೆ ಈ ಬಗ್ಗೆ ಪ್ರಶ್ನಿಸುವುದು : ಮಹಾಭಾರತದ ಮೊದಲ ಮೂರು ದಿನಗಳಲ್ಲಿ ದುರ್ಯೋಧನನ ಸಾಕಷ್ಟು ಕೌರವಬಂಧುಗಳು ಹಾಗೂ ಕೌರವರ ಪಕ್ಷದಲ್ಲಿ ಹೋರಾಡಿದ ಇತರ ಶೂರ ಯೋಧರು ಪಾಂಡವರಿಂದ ಹತರಾದರು. ಪಂಚಪಾಂಡವರು ಹಾಗೂ ಅವರ ಪಕ್ಷದ ಪ್ರಮುಖ ಯೋಧರ ಪೈಕಿ ಯಾರೂ ಹತರಾಗಿರಲಿಲ್ಲ; ಆದುದರಿಂದ ಸಂತಪ್ತಗೊಂಡ ದುರ್ಯೋಧನನು ಕೌರವರ ಸೇನಾಪತಿಯಾದ ಭೀಷ್ಮಾಚಾರ್ಯರನ್ನು ಈ ಬಗ್ಗೆ ಪ್ರಶ್ನಿಸಿದಾಗ ಭೀಷ್ಮಾಚಾರ್ಯರು 'ನಾಳೆ ನಾನು ೫ ಬಾಣಗಳಿಂದ ಐದೂ ಪಾಂಡವರನ್ನು ಕೊಲ್ಲುವೆನು' ಎಂಬ ಪ್ರತಿಜ್ಞೆಯನ್ನು ಮಾಡಿದರು. ಆಗ ದುರ್ಯೋಧನನು 'ಯಾವ ಐದು ಬಾಣಗಳಿಂದ ಪಾಂಡವರನ್ನು ಕೊಲ್ಲುವವರಿದ್ದರೋ, ಆ ಬಾಣಗಳನ್ನು ಮಂತ್ರಿಸಿ ನನ್ನ ವಶಕ್ಕೆ ನೀಡಿ, ನಾನು ಆ ಬಾಣಗಳನ್ನು ನಾಳೆ ಬೆಳಿಗ್ಗೆ ಯುದ್ಧಕ್ಕೆ ಹೊರಡುವ ಮುನ್ನ ನಿಮಗೆ ತಂದು ಕೊಡುವೆನು' ಎಂದು ಹೇಳಿದನು. ಭೀಷ್ಮಾಚಾರ್ಯರು ೫ ಬಾಣಗಳನ್ನು ಮಂತ್ರಿಸಿ ದುರ್ಯೋಧನನಿಗೆ ಕೊಟ್ಟರು. ದುರ್ಯೋಧನನು ಆ ಬಾಣಗಳನ್ನು ಪಡೆದು ತನ್ನ ಶಿಬಿರಕ್ಕೆ ಮರಳಿ ಬಂದನು.
ಶ್ರೀಕೃಷ್ಣನು ಅರ್ಜುನನಿಗೆ ದುರ್ಯೋಧನನ ಬಳಿ ಹೋಗಿ ಐದು ಬಾಣಗಳನ್ನು ಕೇಳಲು ಹೇಳುವುದು : ಶ್ರೀಕೃಷ್ಣನಿಗೆ ಈ ವಿಷಯ ತಿಳಿಯಿತು. ಅವನಿಗೆ ಅದರ ಉಪಾಯವೂ ಹೊಳೆಯಿತು. ಪಾಂಡವರ ವನವಾಸದ ಸಮಯದಲ್ಲಿ ಒಮ್ಮೆ ದುರ್ಯೋಧನನು ವನವಿಹಾರಕ್ಕೆ ತೆರಳಿದ್ದಾಗ ಅರ್ಜುನನು ಅವನ ಪ್ರಾಣವನ್ನು ರಕ್ಷಿಸಿದ್ದನು; ಆದುದರಿಂದ ದುರ್ಯೋಧನನು ಅರ್ಜುನನಿಗೆ ಯಾವುದೇ ವರ ಬೇಡಲು ಹೇಳಿದಾಗ ಅರ್ಜುನನು ಅವನಿಗೆ 'ಈಗ ಬೇಡ, ಅವಶ್ಯಕತೆಯಿದ್ದಾಗ ನಾನು ನಿನ್ನ ಬಳಿ ವರ ಕೇಳುವೆನು, ಆಗ ಬೇಡಿದ್ದನ್ನು ಕೊಡಬೇಕು' ಎಂದು ಹೇಳಿದ್ದನು.
ಶ್ರೀಕೃಷ್ಣನು ಅರ್ಜುನನ ಹತ್ತಿರ ಹೋಗಿ 'ತಕ್ಷಣ ಹೋಗಿ ದುರ್ಯೋಧನನಿಂದ ಆ ಐದು ಬಾಣಗಳನ್ನು ಬೇಡಲು' ಹೇಳಿದನು. ಅರ್ಜುನನು ದುರ್ಯೋಧನನ ಬಳಿ ಹೋದನು ಹಾಗೂ ಭೀಷ್ಮಾಚಾರ್ಯರು ಮಂತ್ರಿಸಿ ಕೊಟ್ಟ ಐದು ಬಾಣಗಳನ್ನು ಬೇಡಿದನು. ಅರ್ಜುನನಿಗೆ ವರ ನೀಡಿದ್ದರಿಂದ ದುರ್ಯೋಧನನಿಗೆ ಅನಿವಾರ್ಯವಾಗಿ ಆ ಬಾಣಗಳನ್ನು ಕೊಡಬೇಕಾಯಿತು.
ಶ್ರೀಕೃಷ್ಣನು ಪಾಂಡವರ ಪ್ರಾಣ ಉಳಿಸಿದನು. ದುರ್ಯೋಧನನೂ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆ ಐದು ಬಾಣಗಳನ್ನು ಅರ್ಜುನನಿಗೆ ಕೊಟ್ಟನು; ಆದುದರಿಂದಲೇ ಮಹಾಭಾರತವನ್ನು 'ಧರ್ಮಯುದ್ಧ'ವೆಂದು ಹೇಳುತ್ತಾರೆ.
ಆಧಾರ : ಇಸ್ಕಾನ ವಾಂಗ್ಮಯ