ಗುರುದಕ್ಷಿಣೆಯಲ್ಲಿ ಬೆರಳನ್ನು ನೀಡುವ ಏಕಲವ್ಯ
ಏಕಲವ್ಯನು ಗುರು ದ್ರೋಣಾಚಾರ್ಯರ ಬಳಿ ಹೋಗಿ 'ಗುರುದೇವ, ನನಗೆ ಧನುರ್ವಿದ್ಯೆಯನ್ನು ಕಲಿಸುವ ಕೃಪೆ ಮಾಡುವಿರೇ ?' ಎಂದು ಕೇಳಿದನು.
ಗುರು ದ್ರೋಣಾಚಾರ್ಯರ ಎದುರು ಧರ್ಮಸಂಕಟ ಬಂದೆರಗಿತ್ತು; ಏಕೆಂದರೆ ಅವರು ಪಿತಾಮಹ ಭೀಷ್ಮರಿಗೆ 'ಈ ವಿದ್ಯೆಯನ್ನು ಕೇವಲ ರಾಜಕುಮಾರರಿಗೇ ಕಲಿಸುತ್ತೇನೆ' ಎಂದು ವಚನ ನೀಡಿದ್ದರು. ಏಕಲವ್ಯನು ರಾಜಕುಮಾರನಾಗಿರಲಿಲ್ಲ, ಆದುದರಿಂದ ಅವನಿಗೆ ಈ ವಿದ್ಯೆಯನ್ನು ಕಲಿಸುವುದಾದರೂ ಹೇಗೆ? ದ್ರೋಣಾಚಾರ್ಯರು ಏಕಲವ್ಯನಿಗೆ 'ನಾನು ನಿನಗೆ ಈ ವಿದ್ಯೆಯನ್ನು ನೀಡಲಾರೆ' ಎಂದು ಹೇಳಿದರು.
ಹತಾಶಗೊಂಡ ಏಕಲವ್ಯನು ಮನೆಗೆ ಹಿಂದಿರುಗಿದನು. ಆದರೆ ನಂತರ ಗುರು ದ್ರೋಣಾಚಾರ್ಯರ ಒಂದು ಪ್ರತಿಮೆಯನ್ನು ನಿಲ್ಲಿಸಿ, ಅದರ ಮುಂದೆ ತಲೆ ಬಾಗಿ 'ಈ ಪ್ರತಿಮೆಯೇ ನನಗೆ ಗುರುವಾಗಲಿ' ಎಂದು ಹೇಳಿ ಧನುರ್ವಿದ್ಯೆಯನ್ನು ಕಲಿಯಲು ಪ್ರಾರಂಭಿಸಿದನು. ಹಂತ ಹಂತವಾಗಿ ಅವನ ಕೌಶಲ್ಯದಲ್ಲಿ ವೃದ್ಧಿಯಾಯಿತು.
ಒಮ್ಮೆ ದ್ರೋಣಾಚಾರ್ಯರು, ಪಾಂಡವರು ಹಾಗೂ ಕೌರವರು ಧನುರ್ವಿದ್ಯೆಯ ಅಭ್ಯಾಸಕ್ಕಾಗಿ ಒಂದು ಕಾಡಿಗೆ ಹೋದರು. ಅವರೊಂದಿಗೆ ಒಂದು ನಾಯಿಯೂ ಇತ್ತು. ಅದು ತಿರುಗಾಡುತ್ತ ಸ್ವಲ್ಪ ಮುಂದೆ ಹೋಗಿ ಏಕಲವ್ಯನ ಬಳಿ ತಲುಪಿತು. ನಾಯಿಯು ಅವನನ್ನು ನೋಡಿ ಬೊಗಳಲಾರಂಭಿಸಿತು.
ಏಕಲವ್ಯನು ನಾಯಿಗೆ ತಾಗಬಾದರು ಆದರೆ ಅದು ಬೊಗಳುವುದು ನಿಲ್ಲಬೇಕು ಎಂದು ಏಳು ಬಾಣಗಳನ್ನು ಆ ನಾಯಿಯ ಬಾಯಿಗೆ ಹೊಡೆದನು. ನಾಯಿಯು ಪುನಃ ಗುರು ದ್ರೋಣಾಚಾರ್ಯರು, ಪಾಂಡವರು ಹಾಗೂ ಕೌರವರಿರುವಲ್ಲಿಗೆ ಹೋಯಿತು.
ಗುರು ದ್ರೋಣಾಚಾರ್ಯರು 'ಅರ್ಜುನನ ತರಹದ ಧನುರ್ಧರನು ಬೇರೆಲ್ಲಿಯೂ ಇರಲಾರ' ಎಂದು ವಚನ ನೀಡಿದ್ದರು; ಆದರೆ ಇಲ್ಲಿ ಇನ್ನೂ ಹೆಚ್ಚು ನಿಪುಣ ಧನುರ್ಧರನಿದ್ದನು. ಗುರುಗಳ ಎದುರು ಧರ್ಮಸಂಕಟ ಎದುರಾಯಿತು. ಏಕಲವ್ಯನನ್ನು ಉದ್ದೇಶಿಸಿ, 'ನಿನಗೆ ಧನುರ್ವಿದ್ಯೆಯನ್ನು ನೀಡಿದವರು ಯಾರು?' ಎಂದು ಪ್ರಶ್ನಿಸಲು, ಏಕಲವ್ಯನು ಸಮೀಪದಲ್ಲೇ ಇದ್ದ ಪ್ರತಿಮೆಯನ್ನು ತೋರಿಸಿ 'ನೀವೇ ನನಗೆ ಗುರು' ಎಂದು ಹೇಳಿದನು. ಏಕಲವ್ಯನ ದೃಢ ಶೃದ್ಧೆಯನ್ನು ನೋಡಿ ಗುರುದೇವರು 'ನನ್ನ ಮೂರ್ತಿಯ ಎದುರು ಕುಳಿತು ನೀನು ಧನುರ್ವಿದ್ಯೆಯನ್ನು ಕಲಿತೆ ಎಂದು ನೀನು ಹೇಳಿದೆ, ಅದರೆ ಗುರುದಕ್ಷಿಣೆಯನ್ನು ಕೊಡಲಿಲ್ಲ' ಎಂದು ಕೇಳಿದರು.
ಏಕಲವ್ಯ : ನೀವು ಕೇಳಿದ ಗುರುದಕ್ಷಿಣೆಯನ್ನು ಕೊಡುತ್ತೇನೆ.
ಗುರು ದ್ರೋಣಾಚಾರ್ಯರು : ನಿನ್ನ ಬಲಗೈಯ ಹೆಬ್ಬೆರಳನ್ನು ಕೊಡು!
ಏಕಲವ್ಯನು ತಕ್ಷಣ ಒಂದು ಕ್ಷಣವೂ ವಿಚಾರ ಮಾಡದೇ ತನ್ನ ಬಲಗೈಯ ಹೆಬ್ಬೆರಳನ್ನು ಕತ್ತರಿಸಿ ಗುರುದೇವರ ಚರಣಗಳಿಗೆ ಅರ್ಪಿಸಿದನು.
ಗುರು ದ್ರೋಣಾಚಾರ್ಯರು : ಮಗು ! ಅರ್ಜುನನಿಗೆ ವಚನ ನೀಡಿದ್ದರಿಂದ ಅವನು ಧನುರ್ವಿದ್ಯೆಯಲ್ಲಿ ಸರ್ವಶ್ರೇಷ್ಠನಿದ್ದಾನೆ, ಆದರೂ ಏಲ್ಲಿಯ ವರೆಗೆ ಆಕಾಶದಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳಿವೆಯೋ ಅಲ್ಲಿಯ ವರೆಗೆ ಜನರು ನಿನ್ನ ಗುರುನಿಷ್ಠೆ ಹಾಗೂ ಗುರುಭಕ್ತಿಯನ್ನು ಸ್ಮರಿಸುವರು ಹಾಗೂ ನಿನ್ನ ಯಶೋಗಾಥೆಯನ್ನು ಹಾಡುವರು !