ಮಕ್ಕಳೇ ತುಂಬಾ ವರ್ಷಗಳ ಹಿಂದೆ ವ್ರತ್ರಾಸುರನೆಂಬ ಒಬ್ಬ ರಾಕ್ಷಸನಿದ್ದನು. ಅವನು ತುಂಬಾ ಅಹಂಕಾರಿಯಾಗಿದ್ದನು. ಅವನು ದೇವರ ಮೇಲೆ ಆಕ್ರಮಣ ಮಾಡಿದನು. ಅವನು ತುಂಬಾ ಬಲಶಾಲಿಯಾದ್ದರಿಂದ ಅವನನ್ನು ಸೋಲಿಸುವುದು ಅವರಿಗೆ ಕಷ್ಟವಾಯಿತು. ಅವನನ್ನು ಹೇಗೆ ನಾಶ ಪಡಿಸಬಹುದು ಎಂದು ತಿಳಿಯಲು ದೇವೇಂದ್ರ ಇಂದ್ರನು ವಿಷ್ಣುವಿನ ಬಳಿಗೆ ಹೋದನು. ಆಗ ಶ್ರೀವಿಷ್ಣು“ದಧೀಚಿ ಋಷಿಯ ಬೆನ್ನಿನ ಮೂಳೆಯಿಂದ ಆಯುಧವನ್ನು ಮಾಡಿದರೆ ಅದರಿಂದ ರಾಕ್ಷಸನನ್ನು ವಧಿಸಬಹುದು“,ಎಂದು ಹೇಳಿದರು.
ದಧೀಚಿ ಋಷಿಗಳು ತುಂಬಾ ಶಾಂತ ಸ್ವಭಾವದವರು, ಎಲ್ಲರನ್ನೂ ಪ್ರೀತಿಸುವವರು, ಎಲ್ಲಾರಿಗೂ ಸಹಾಯ ಮಾಡುವವರಾಗಿದ್ದರು, ಇಂತಹವರ ಬಳಿಗೆ ಹೋಗಿ ಅವರ ಮೂಳೆಯನ್ನು ಹೇಗೆ ಕೇಳುವುದು ಎಂದು ಎಲ್ಲಾರಿಗೂ ಪ್ರಶ್ನೆ ಮೂಡಿತು. ಶ್ರೀ ವಿಷ್ಣು ಇಂದ್ರನಿಗೇ ದಧೀಚಿ ಋಷಿಯ ಬಳಿಗೆ ಹೊಗಲು ಹೇಳಿದರು. ದಧೀಚಿ ಋಷಿಗಳು ನೀನು ಹೇಳುವುದನ್ನೆಲ್ಲಾ ಕೇಳುವರು ಮತ್ತು ಅತ್ಯಂತ ಆನಂದದಿಂದ ಪ್ರಾಣತ್ಯಾಗ ಮಾಡುವರು ಎಂದು ಹೇಳಿದರು.
ಇಂದ್ರದೇವನು ತನ್ನ ಸಹಚರರೊಂದಿಗೆ ದಧೀಚಿ ಋಷಿಯ ಬಳಿ ಹೋದರು. ದಧೀಚಿ ಋಷಿಗಳು ಅತ್ಯಂತ ಆನಂದದಿಂದ ಅವರನ್ನು ಸ್ವಾಗತಿಸಿದರು. ನಂತರ ನಮ್ರತೆಯಿಂದ ಇಂದ್ರನನ್ನು ಬಂದ ಕಾರಣ ಕೇಳಿದರು. ಇಂದ್ರನು ಹೇಳಿದನು, “ನಾವು ನಿಮ್ಮ ಕಡೆ ಯಾಚಕರಾಗಿ ಬಂದಿದ್ದೇವೆ. ವ್ರತ್ರಾಸುರನೆಂಬ ರಾಕ್ಷಸನನ್ನು ಸಾಯಿಸಲು ನಮಗೆ ಒಂದು ಆಯುಧವನ್ನು ತಯಾರಿಸಬೇಕಿದೆ. ಆ ಆಯುಧಕ್ಕಾಗಿ ನಿಮ್ಮ ಮೂಳೆಗಳು ಬೇಕಾಗಿದೆ. ನಿಮ್ಮ ಸಹಾಯವಿಲ್ಲದೆ ನಮಗೆ ಇದು ಸಾಧ್ಯವಿಲ್ಲ.” ಇದನ್ನು ಕೇಳಿದ ದಧೀಚಿ ಋಷಿಗಳು ಕೂಡಲೇ ತಮ್ಮ ಪ್ರಾಣತ್ಯಾಗ ಮಾಡಿದರು. ನಂತರ ಅವರ ಬೆನ್ನಿನ ಮೂಳೆಗಳಿಂದ ತಯಾರಿಸಿದ ಆಯುಧದಿಂದ ವ್ರತ್ರಾಸುರನನ್ನು ವಧಿಸಿದರು.
ಮಕ್ಕಳೇ, ವ್ರತ್ರಾಸುರನನ್ನು ವಧಿಸಲು ದಧೀಚಿ ಋಷಿಯು ಅತ್ಯಂತ ಸಹಜತೆಯಿಂದ ತಮ್ಮ ಪ್ರಾಣತ್ಯಾಗ ಮಾಡಿದರು. ಇದರಿಂದ ನಮಗೆ ತಿಳಿಯುತ್ತದೆ ಋಷಿಮುನಿಗಳು ಎಷ್ಟು ಶ್ರೇಷ್ಠರಿದ್ದಾರೆ ಎಂದು. ನಾವೂ ಸಹ ನಮಗೆ ಸಾಧ್ಯವಾದಷ್ಟು ತ್ಯಾಗವನ್ನು ಮಾಡಿ ನಮ್ಮ ಪರಂಪರೆಯನ್ನು ಉಳಿಸೋಣ.