ಹಿಂದೆ ಧೌಮ್ಯ ಎಂಬಋಷಿಗಳಿದ್ದರು. ಅವರೊಂದಿಗೆ ತುಂಬಾ ಶಿಷ್ಯಂದಿರಿದ್ದರು. ಅವರಲ್ಲಿ ಅರುಣಿ ಎಂಬ ಒಬ್ಬ ಶಿಷ್ಯನಿದ್ದನು. ಒಂದು ಸಲ ಜೋರಾಗಿ ಮಳೆ ಬರಲು ಶುರುವಾಯಿತು. ಹತ್ತಿರದಲ್ಲಿದ್ದ ಹೊಳೆಯ ನೀರು ಗದ್ದೆಗೆ ಹೋಗಬಾರದೆಂದು ಕಟ್ಟೆಯನ್ನು ಕಟ್ಟಲಾಗಿತ್ತು. ಮಳೆ ಜೋರಾಗಿ ಬಂದಿದ್ದರಿಂದ ಕಟ್ಟೆಯು ಒಡೆದು ಹೋಗುವ ಸ್ಥಿತಿಯಲ್ಲಿತ್ತು. ಆಗ ಗುರುಗಳು ಶಿಷ್ಯರಿಗೆ ಹೇಳಿದರು "ಹೋಗಿ, ಮಳೆಯ ನೀರು ಗದ್ದೆಗೆ ಹೋಗದಂತೆ ನೀರನ್ನು ತಡೆಯಿರಿ."
ಅರುಣಿ ಮತ್ತು ಅನ್ಯ ಕೆಲವು ಶಿಷ್ಯರು ಕಟ್ಟೆಯನ್ನು ಸರಿ ಮಡಲು ಹೋದರು. ಕಟ್ಟೆಯನ್ನು ಸರಿ ಮಾಡಲು ಎಷ್ಟು ಪ್ರಯತ್ನ ಮಾಡಿದರೂ ನೀರು ತುಂಬಾ ರಭಸವಾಗಿದ್ದರಿಂದ ಅವರ ಪ್ರಯತ್ನಗಳೆಲ್ಲವೂ ವ್ಯರ್ಥವಾಯಿತು. ಕೊನೆಗೆ ಕಟ್ಟೆಯ ಒಂದು ಸಣ್ಣಭಾಗವು ಮುರಿದು ಬಿತ್ತು. ನೀರು ಸ್ವಲ್ಪ ಸ್ವಲ್ಪ ಗದ್ದಗೆ ಹೋಗಲು ಶುರುವಾಯಿತು. ಇಷ್ಟರಲ್ಲೇ ರಾತ್ರಿಯಾಗಿತ್ತು. ಈಗ ಏನೂ ಮಾಡಲು ಸಾಧ್ಯವಿಲ್ಲ ಎಂದು ಎಲ್ಲ ಶಿಷ್ಯರೂ ತಿರುಗಿ ಆಶ್ರಮಕ್ಕೆ ಬಂದರು. ದಿನವಿಡಿ ಕಷ್ಟಪಟ್ಟಿದ್ದರಿಂದ ಎಲ್ಲ ಶಿಷ್ಯರೂ ಕೂಡಲೇ ಗಾಢನಿದ್ರೆ ಮಾಡಿದರು. ಬೆಳಗ್ಗೆಯ ಹೊತ್ತಿಗೆ ಮಳೆ ನಿಂತಿತು. ಆಗ ಅವರಿಗೆ ತಿಳಿಯಿತು ಅರುಣಿಯು ಎಲ್ಲಿಯೂ ಕಾಣಿಸುತ್ತಿಲ್ಲವೆಂದು. ಅವರು ಅರುಣಿಯನ್ನು ಹುಡಕಿ ಸಿಗದಿದ್ದಾಗ ಗುರುಗಳ ಬಳಿಗೆ ಹೋಗಿ ಹೇಳಿದರು, "ಗುರುಗಳೇ, ಅರುಣಿಯು ಕಾಣಿಸುತ್ತಿಲ್ಲ." ಆಗ ಗುರುಗಳು ಹೇಳಿದರು, "ನಾವು ಗದ್ದೆಗೆ ಹೋಗಿ ನೋಡೋಣ." ಎಲ್ಲ ಶಿಷ್ಯರು ಮತ್ತು ಧೌಮ್ಯಋಷಿಗಳು ಗದ್ದೆಗೆ ಹೋಗಿ ನೋಡುತ್ತಾರೆ, ಕಟ್ಟೆಯು ಮುರಿದ ಜಾಗದಲ್ಲಿ ನೀರು ಗದ್ದೆಗೆ ಹೋಗದಂತೆ ನಿಲ್ಲಿಸಲು ಸ್ವತಃ ಅರುಣಿಯೇ ಕಟ್ಟೆಗೆ ಅಡ್ಡವಾಗಿ ಮಲಗಿದ್ದಾನೆ. ಇದನ್ನು ನೋಡಿ ಎಲ್ಲರೂ ದಂಗಾದರು. ರಾತ್ರಿ ಇಡೀ ಚಳಿ ಮಳೆಯಲ್ಲಿ, ಊಟವನ್ನೂ ಮಾಡದೇ ಮಲಗಿದ್ದ ಅರುಣಿಯನ್ನು ನೋಡಿ ಎಲ್ಲರಿಗೂ ಪ್ರೀತಿ ಎನಿಸಿತು. ಮಳೆ ನಿಂತಿದ್ದರಿಂದ ನೀರು ಕಡಿಮೆಯಾಗಿತ್ತು ಆದರೆ ಅರುಣಿಗೆ ಅಲ್ಲಿಯೇ ನಿದ್ದೆ ಬಂದಿತ್ತು. ಎಲ್ಲರೂ ಅರುಣಿಯ ಬಳಿಗೆ ಹೋಗಿ ಅವನನ್ನು ಎಬ್ಬಿಸಿದರು. ಗುರುಗಳು ಅರುಣಿಯ ಬಳಿಗೆ ಹೋಗಿ ಪ್ರೀತಿಯಿಂದ ಅವನ ತಲೆ ಸವರಿದರು. ಇದನ್ನು ನೋಡಿ ಎಲ್ಲ ಶಿಷ್ಯರ ಕಣ್ಣುಗಳಲ್ಲಿ ನೀರು ಬಂತು.
ಮಕ್ಕಳೇ, ಅರುಣಿ ಇಂದ ನಾವೇನು ಕಲಿಯಬಹುದು? ಗುರುಗಳು ಹೇಳಿದ್ದನ್ನು ಮಾಡಲೇಬೇಕೆಂಬ ತೀವ್ರ ತಳಮಳ. ಗುರುಗಳ ಆಜ್ಞಾಪಾಲನೆ ಮಾಡಲು ಅರುಣಿಯು ತನ್ನ ಸ್ವಂತದ ವಿಚಾರವನ್ನೂ ಮಾಡಲಿಲ್ಲ. ಅದಕ್ಕಾಗಿಯೇ ಅವನು ಗುರುಗಳ ಮೆಚ್ಚಿನ ಶಿಷ್ಯನಾಗಿದ್ದನು. ಇದಕ್ಕಾಗಿ ನಾವೂ ಕೂಡಾ ಗುರುಗಳಲ್ಲಿ ಬೇಡೋಣ, "ಹೇ ಗುರುದೇವಾ, ನಮಗೆ ಶಿಷ್ಯನ ಗುಣಗಳಾದ ಆಜ್ಞಾಪಾಲನೆಯನ್ನು ನೀಡಿರಿ"