ಬಾಲಮಿತ್ರರೇ, ಹಿಂದೊಮ್ಮೆ ಕಡುಬಡತನದಿಂದ ಬಳಲಿದ ಒಬ್ಬ ವ್ಯಕ್ತಿಯು ‘ತನ್ನ ಜೀವನದಲ್ಲಿ ದುಃಖವೇ ತುಂಬಿಕೊಂಡಿದೆ, ಇದನ್ನು ಹೇಗೆ ದೂರ ಮಾಡುವುದು?’ ಎಂಬ ಚಿಂತೆಯಲ್ಲಿದ್ದನು. ಹೀಗೆ ಖಿನ್ನನಾಗಿರುವಾಗ, ಸಂತ ಕಬೀರರು ಓರ್ವ ಮಹಾನ್ ಸಂತರೆಂದೂ, ಅವರ ಮಾರ್ಗದರ್ಶನದಲ್ಲಿ ಅನೇಕ ಜನರ ದುಃಖ ನಿವಾರಣೆ ಆಗಿರುವುದರ ವಿಷಯ ಒಬ್ಬ ವ್ಯಕ್ತಿಯ ಗಮನಕ್ಕೆ ಬಂತು. ತನ್ನ ದುಃಖವನ್ನು ಸಂತ ಕಬೀರರಲ್ಲಿ ಹೇಳಲು ಅವರನ್ನು ಭೇಟಿ ಮಾಡಿದ. ಕಬೀರರ ನಿವಾಸ ಮತ್ತು ಜೀವನ ಶೈಲಿಯು ಅತ್ಯಂತ ಸರಳವಾಗಿತ್ತು. ಇದನ್ನು ನೋಡಿದ ಆ ವ್ಯಕ್ತಿ ಕ್ಷಣಮಾತ್ರಕ್ಕೆ ಆಶ್ಚರ್ಯಚಕಿತನಾದ. ಆದರೂ ಕಬೀರರು ಬಂದಾಗ ಕೈಯನ್ನು ಜೋಡಿಸಿ, ವಿನಮ್ರತೆಯಿಂದ ‘ನಾನು ದುಃಖಿತನಾಗಿದ್ದೇನೆ, ಈ ದೀನ ಸ್ಥಿತಿಯಿಂದ ಹೊರಬರಲು ಏನಾದರೂ ಉಪಾಯವಿದ್ದರೆ ದಯವಿಟ್ಟು ಮಾರ್ಗದರ್ಶನ ಮಾಡಿ’ ಎಂದು ಬೇಡಿಕೊಂಡನು.
ಕಬೀರರು ಏನೂ ಹೇಳದೇ ಅವನನ್ನು ಕರೆದುಕೊಂಡು ಊರಲ್ಲಿ ಸುತ್ತತೊಡಗಿದರು. ‘ಅರೆ! ನಾನು ಇವರಲ್ಲಿ ಮಾರ್ಗದರ್ಶನ ಪಡೆಯಲು ಬಂದರೆ ಇವರು ನನ್ನನ್ನು ವಿಹಾರಕ್ಕೆ ಏಕೆ ಕರೆದುಕೊಂಡು ಹೋಗುತ್ತಿದ್ದಾರೆ’ ಎಂಬ ಸಂಶಯ ಆ ಮನುಷ್ಯನ ಮನಸ್ಸಿನಲ್ಲಿ ಬಂತು. ಹೀಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರಿಗೆ ಒಂದು ಬಾವಿ ಕಂಡುಬಂತು. ಆ ಕಾಲದಲ್ಲಿ ನಲ್ಲಿಗಳು ಬಳಕೆಯಲ್ಲಿರಲಿಲ್ಲ. ಜನರು ಬಾವಿಗಳಿಂದ ಅಥವಾ ದೂರದ ನದಿಗಳಿಂದ ನೀರು ತರಬೇಕಾಗಿತ್ತು. ದಾರಿಯೂ ಸುಗಮವಾಗಿರುತ್ತಿರಲಿಲ್ಲ. ಕಲ್ಲು-ಮುಳ್ಳುಗಳಿಂದ ಕೂಡಿದ ಏರುಪೇರಾದ ರಸ್ತೆಯಲ್ಲಿ ಕ್ರಮಿಸಬೇಕಾಗಿತ್ತು. ಆ ಬಾವಿಯ ಹತ್ತಿರ ಕೆಲವು ಹೆಂಗಸರು ಬಟ್ಟೆಗಳನ್ನು ಒಗೆಯುತ್ತಿದ್ದರೆ, ಇನ್ನು ಕೆಲವರು ಮನೆಗೆ ಒಯ್ಯಲು ಸಣ್ಣ ಸಣ್ಣ ಮಡಕೆಗಳಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದರು. ನೀರು ತುಂಬಿಸಿಕೊಂಡ ಮೇಲೆ, ಆ ಮಹಿಳೆಯರು ತಮ್ಮ ತಲೆಯ ಮೇಲೆ ಒಂದರ ಮೇಲೊಂದು ಮಡಕೆ ಇಟ್ಟು ಹರಟೆ ಮಾಡುತ್ತಾ ಹೊರಟುಹೋದರು. ಈ ದೃಶ್ಯವನ್ನು ಆ ವ್ಯಕ್ತಿಗೆ ತೋರಿಸುತ್ತ ಕಬೀರರು ‘ನೋಡು, ಮೂರು ಮೂರು ತುಂಬಿದ ಮಡಕೆಗಳನ್ನು ತಲೆಯ ಮೇಲಿಟ್ಟು ಹೇಗೆ ನಿರಾತಂಕವಾಗಿ ನಡೆದುಕೊಂಡು ಹೊಗುತ್ತಿದ್ದಾರೆ. ಅವರಿಗೆ ಆ ಮಡಕೆಗಳು ಕೆಳಗೆ ಬಿದ್ದು ಒಡೆದು ಚೂರು ಚೂರು ಆಗಬಹುದು ಎಂಬ ವಿಚಾರ ಬರುವುದೇ ಇಲ್ಲ. ಇದರ ಕಾರಣ ಅವರಿಂದ ತಿಳಿದುಕೊಳ್ಳೋಣ’.
ಹೀಗೆ ಹೋಗುತ್ತಿದ್ದ ಕೆಲವು ಮಹಿಳೆಯರನ್ನು ಉದ್ದೇಶಿಸಿ ‘ನೀವು ಹೀಗೆ ತಲೆಯ ಮೇಲೆ ಮಡಕೆ ಇಟ್ಟು ನಿರಾತಂಕವಾಗಿ ಹರಟೆ ಹೊಡೊಯುತ್ತಾ ನಡೆದುಕೊಂಡು ಹೋಗುತ್ತಿದ್ದೀರಲ್ಲಾ, ಆ ಮಡಕೆ ಬಿದ್ದು ಒಡೆದು ಚೂರಾಗುವ ಭಯ ನಿಮಗಿಲ್ಲವೇ?’ ಎಂದು ಕಬೀರರು ಪ್ರಶ್ನಿಸಿದರು. ಆಗ ಅಲ್ಲಿದ್ದ ಒಬ್ಬ ಮಹಿಳೆ ನಗುತ್ತ ಹೀಗೆ ಉತ್ತರಿಸಿದಳು ‘ಅದು ಹೇಗೆ ತಾನೇ ಬೀಳುತ್ತದೆ? ನಮ್ಮ ಗಮನವೆಲ್ಲವೂ ಆ ಮಡಕೆಗಳ ಮೇಲೆಯೇ ಇದೆ’, ಮತ್ತು ಹೊರಟು ಹೋದಳು.
ಇದನ್ನು ಕೇಳಿದ ಆ ವ್ಯಕ್ತಿಗೆ ಸಂತ ಕಬೀರರು ತನಗೆ ಏನು ಹೇಳಲು ಬಯಸಿದ್ದಾರೆ ಎಂದು ತಿಳಿಯಿತು. ಮೇಲ್ನೋಟಕ್ಕೆ ನಾವು ಯಾವುದಾದರೂ ಕಾರ್ಯದಲ್ಲಿ ತೊಡಗಿದ್ದರೂ, ಒಳಗಿನಿಂದ (ಅಂದರೆ ಮನಸ್ಸಿನಲ್ಲಿ) ಸತತವಾಗಿ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಿರಬೇಕು. ಹೀಗೆ ಮಾಡಿದರೆ ನಾವು ಮಾಡುವ ಪ್ರತಿಯೊಂದು ಕಾರ್ಯ ಭಗವಂತನ ಇಚ್ಚೆಯಂತೆ ನಡೆಯುತ್ತಿದೆ ಎಂಬ ವಿಚಾರ ನಮ್ಮಲ್ಲಿದ್ದು ಶಾಂತಿ ಮತ್ತು ಸಮಾಧಾನ ಅನುಭವಿಸುತ್ತೇವೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸಂತ ಕಬೀರರು ಹೇಗೆ ಆನಂದದಿಂದ ಇರುತ್ತಾರೆ ಎಂಬುವುದೂ ಅವನ ಗಮನಕ್ಕೆ ಬಂದಿತು. ಆಗ ಅವನ ಮುಖದಲ್ಲಿದ್ದ ಆನಂದವನ್ನು ನೋಡಿ ಸಂತ ಕಬೀರರಿಗೂ ಸಮಾಧಾನವೆನಿಸಿತು.
ಮಕ್ಕಳೇ ನೆನಪಿಡಿ, ನಾವು ಯಾವುದೇ ಕಾರ್ಯ ಮಾಡುತಿದ್ದರೂ, ಅಂತರ್ಮನಸ್ಸಿನಲ್ಲಿ ಭಗವಂತನಅನನ್ನು ಸ್ಮರಿಸುತ್ತಿರಬೇಕು (ನಾಮಸ್ಮರಣೆ ಮಾಡುತ್ತಿರಬೇಕು). ಸತತ ನಾಮಸ್ಮರಣೆಯಿಂದ ನಾವು ಮಾಡುತ್ತಿರುವ ಕಾರ್ಯ ಭಗವಂತನ ಇಚ್ಛೆಗನುಸಾರವಾಗಿ ಆಗುತ್ತದೆ ಮತ್ತು ನಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ.