ನವರಾತ್ರಿಯ ಮೊದಲನೆ ದಿನ ದುರ್ಗಾದೇವಿ ಅಥವಾ ಮಹಾಕಾಳಿಯ ಪ್ರತಿಷ್ಠಾಪನೆಯನ್ನು ಮಾಡುತ್ತಾರೆ ಮತ್ತು ಒಂಬತ್ತು ದಿವಸ ದೇವಿಯ ಉತ್ಸವವನ್ನು ಆಚರಿಸಲಾಗುತ್ತದೆ. ನಾವು ಇಂದು ದುರ್ಗಾದೇವಿಯು ಮಹಿಷಾಸುರ ಮರ್ದಿನಿ ಹೇಗೆ ಆದಳು ಎಂಬುದನ್ನು ತಿಳಿಯೋಣ.
ಹಿಂದೆ ಮಹಿಷಾಸುರ ಎಂಬ ರಾಕ್ಷಸನಿದ್ದ. ಅವನು ಜನರಿಗೆ ತುಂಬಾ ತೊಂದರೆ ನೀಡುತ್ತಿದ್ದನು. ಒಂದು ಸಲ ಅವನು ಇಂದ್ರನೊಂದಿಗೆ ಯುದ್ಧವನ್ನು ಮಾಡಿದನು ಮತ್ತು ಇಂದ್ರನನ್ನು ಸೋಲಿಸಿ ಅವನ ಸ್ಥಾನವನ್ನು ಪಡೆದನು. ಇಂದ್ರನನ್ನು ಸೋಲಿಸಿದಕ್ಕಾಗಿ ಅವನಿಗೆ ತನ್ನ ಶಕ್ತಿಯ ಬಗ್ಗೆ ತುಂಬಾ ಗರ್ವವಾಯಿತು. ಅವನು ಎಲ್ಲರೊಂದಿಗೆ ಕೆಟ್ಟದಾಗಿ ಮಾತನಾಡುತ್ತಿದ್ದನು. ದಿನೇ ದಿನೇ ಹೆಚ್ಚಾಗುತ್ತಿರುವ ಅವನ ಅನ್ಯಾಯವನ್ನು ಸಹಿಸಲಾರದೇ ದೇವತೆಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಿಗೆ ಪ್ರಾರ್ಥನೆಯನ್ನು ಮಾಡಿದರು ಮತ್ತು ಅವನಿಂದ ರಕ್ಷಣೆಯನ್ನು ನೀಡಬೇಕೆಂದು ಪ್ರಾರ್ಥಿಸಿದರು.
ದೇವರು ಒಂದು ಕಡೆ ಸೇರಿ ತಮ್ಮ ತಮ್ಮ ಶಕ್ತಿಯನ್ನು ಸೇರಿಸಿ ದೇವಿಯೊಬ್ಬಳನ್ನು ನಿರ್ಮಾಣ ಮಾಡಿದರು. ಶಂಕರನ ಶಕ್ತಿಯಿಂದ ಮುಖ, ವಿಷ್ಣುವಿನ ಶಕ್ತಿಯಿಂದ ಕೈಗಳು ಮತ್ತು ಅಗ್ನಿಯ ಶಕ್ತಿಯಿಂದ ಮೂರು ಕಣ್ಣುಗಳು ನಿರ್ಮಾಣವಾದವು. ಈ ರೀತಿ ಪ್ರತಿಯೊಬ್ಬ ದೇವರು ಒಂದುಂದು ಅಂಗವನ್ನು ನೀಡಿ ಸಾಕ್ಷಾತ್ ದೇವಿಯ ನಿರ್ಮಾಣವಾಯಿತು. ಶಿವನು ತನ್ನ ತ್ರಿಶೂಲವನ್ನು, ವಿಷ್ಣು ಚಕ್ರವನ್ನು, ಇಂದ್ರನು ವಜ್ರವನ್ನು ಈ ರೀತಿ ಎಲ್ಲ ದೇವರು ದೇವಿಗೆ ಆಯುಧಗಳನ್ನು ನೀಡಿದರು.
ದೇವರ ತೇಜದಿಂದ ನಿರ್ಮಾಣವಾದ ದೇವಿಯು ಮಹಿಷಾಸುರನನ್ನು ವಧಿಸಲು ರೌದ್ರರೂಪವನ್ನು ತಾಳಿದರು. ಮಹಿಷಾಸುರ ಮತ್ತು ದೇವಿಗೆ ಒಂಬತ್ತು ದಿನಗಳ ಘೋರ ಯುದ್ಧವಾಯಿತು. ದುರ್ಗಾದೇವಿಯು ತನ್ನ ತ್ರಿಶೂಲದಿಂದ ಮಹಿಷಾಸುರನ್ನು ವಧಿಸಿದರು. ಮಹಿಷಾಸುರನನ್ನು ವಧಿಸಿದರಿಂದ ದೇವಿಗೆ ಮಹಿಷಾಸುರಮರ್ದಿನಿ ಎಂದು ಹೆಸರು ಬಂದಿತು. ಇದರ ನೆನಪಿಗಾಗಿ ನಾವು ನವರಾತ್ರಿಯನ್ನು ಆಚರಿಸುತ್ತೇವೆ.
ನಾವು ಯಾಕೆ ನವರಾತ್ರಿಯನ್ನು ಆಚರಿಸುತ್ತೇವೆಂದು ತಿಳಿಯಿತೇ? ಹಾಗಿದ್ದರೆ ಆ ದಿನಗಳಲ್ಲಿ ನಡೆಯುವ ಅಯೋಗ್ಯ ಪ್ರಕಾರಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವಿರಲ್ಲವೇ?