ರಾಮಾನುಜಾಚಾರ್ಯರ ಪರೀಕ್ಷೆ

ರಾಮಾನುಜರು ಶಠಕೋಪಸ್ವಾಮಿಗಳ ಶಿಷ್ಯರಾಗಿದ್ದರು. ಸ್ವಾಮಿಗಳು ರಾಮಾನುಜರಿಗೆ ಈಶ್ವರಪ್ರಾಪ್ತಿಯ ರಹಸ್ಯವನ್ನು ಹೇಳಿದ್ದರು ಆದರೆ ಅದನ್ನು ಯಾರಿಗೂ ಹೇಳಬಾರದೆಂದು ತಾಕೀತು ಮಾಡಿದ್ದರು. ಆದರೆ ರಾಮಾನುಜರು ಗುರುಗಳ ಈ ಆಜ್ಞೆಯನ್ನು ಪಾಲಿಸಲಿಲ್ಲ. ಗುರುಗಳು ಯಾವ ಜ್ಞಾನವನ್ನು ಕೊಟ್ಟಿದ್ದರೋ, ಈಶ್ವರ ಪ್ರಾಪ್ತಿಯ ಯಾವ ಮಾರ್ಗವನ್ನು ಹೇಳಿದ್ದರೋ, ಆ ಜ್ಞಾನವನ್ನು ಅವರು ಜನರಿಗೆ ನೀಡಲು ಪ್ರಾರಂಭಿಸಿದರು. ಶಠಕೋಪಸ್ವಾಮಿಗಳಿಗೆ ಈ ಬಗ್ಗೆ ತಿಳಿದಾಗ ಅವರು ಬಹಳ ಕೋಪಗೊಂಡರು. ಅವರು ರಾಮಾನುಜರನ್ನು ಕರೆದು, ’ನನ್ನ ಆಜ್ಞೆಯನ್ನು ಉಲ್ಲಂಘಿಸಿ ನೀನು ಸಾಧನೆಯ ರಹಸ್ಯವನ್ನು ಎಲ್ಲರಿಗೂ ಹೇಳುತ್ತಿರುವೆ, ಇದು ಅಧರ್ಮವಾಗಿದೆ, ಪಾಪವಾಗಿದೆ! ಇದರ ಪರಿಣಾಮ ಏನಾಗುತ್ತದೆ ಎಂಬುದು ನಿನಗೆ ತಿಳಿದಿದೆಯೇ ?’ ಎಂದು ಕೇಳಿದರು.

ಆಗ ರಾಮಾನುಜರು ನಮ್ರತೆಯಿಂದ, ’ಗುರುದೇವ, ಗುರುಗಳ ಆಜ್ಞೆ ಉಲ್ಲಂಘಿಸಿದರೆ ಶಿಷ್ಯನು ನರಕಕ್ಕೆ ಹೋಗಬೇಕಾಗುತ್ತದೆ.’ ಎಂದು ಹೇಳಿದರು. ಶಠಕೋಪಸ್ವಾಮಿಗಳು ’ಇದು ನಿನಗೆ ತಿಳಿದಿದ್ದರೂ ನೀನು ಹೀಗೇಕೆ ಮಾಡಿದೆ ?’ ಎಂದು ಕೇಳಿದಾಗ, ರಾಮಾನುಜರು ಹೇಳಿದರು, ’ವೃಕ್ಷವು ತನ್ನ ಸರ್ವಸ್ವವನ್ನು ಜನರಿಗೆ ಕೊಡುತ್ತದೆ. ಅದಕ್ಕೆ ಯಾವಾಗಲೂ ಸ್ವಾರ್ಥದ ನೆನಪಾಗುವುದಿಲ್ಲ. ನಾನು ಇದೆಲ್ಲವನ್ನೂ ಜನರ ಕಲ್ಯಾಣವಾಗಬೇಕು, ಜನರಿಗೂ ಈಶ್ವರ ಪ್ರಾಪ್ತಿಯ ಆನಂದ ದೊರೆಯಬೇಕು’ ಎಂಬ ಉದ್ದೇಶದಿಂದ ಮಾಡಿದ್ದೇನೆ. ಇದಕ್ಕಾಗಿ ನನಗೆ ನರಕಕ್ಕೆ ಹೋಗಬೇಕಾದರೂ ಪರವಾಗಿಲ್ಲ, ನನಗೆ ಅದರ ಬಗ್ಗೆ ದುಃಖವಾಗುವುದಿಲ್ಲ.’ ಎಂದು ಹೇಳಿದರು.

ಈಶ್ವರಪ್ರಾಪ್ತಿಯ ಸಾಧನೆ ಇತರರಿಗೂ ಹೇಳುವ ರಾಮಾನುಜರ ತಳಮಳವನ್ನು ನೋಡಿ ಸ್ವಾಮಿಗಳು ಪ್ರಸನ್ನರಾದರು. ಅವರು ರಾಮಾನುಜರನ್ನು ಆಲಿಂಗಿಸಿದರು. ಅವನಿಗೆ ಸರ್ವೋತ್ತಮವಾದ ಆಶೀರ್ವಾದ ನೀಡಿದರು ಹಾಗೂ ಜನರಲ್ಲಿ ನಿಜವಾದ ಜ್ಞಾನದ ಪ್ರಚಾರ ಮಾಡಲು ಬಲು ಪ್ರೀತಿಯಿಂದ ಕಳುಹಿಸಿದರು.

ಮಕ್ಕಳೇ, ರಾಮಾನುಜರು ಈಶ್ವರಪ್ರಾಪ್ತಿಯ ಸಾಧನೆ ಇತರರಿಗೆ ಹೇಳಿದರು. ಅವರ ತಳಮಳದಿಂದ ಸ್ವಾಮಿಗಳು ಅವರ ಮೇಲೆ ಪ್ರಸನ್ನರಾದರು. ನಾವೂ ನಮಗೆ ದೊರೆತ ಜ್ಞಾನವನ್ನು ಹೀಗೆಯೇ ಹಂಚಬೇಕು.

Leave a Comment