ಶಿಕ್ಷಕರಲ್ಲಿ ಧರ್ಮಪಾಲನೆಯ ಅಭಾವ, ಮಕ್ಕಳು ಮುಂದೆ ಭ್ರಷ್ಟಾಚಾರಿಗಳಾಗುವುದು !
ನಿಜ ಹೇಳುವುದಾದರೆ, ವಿದ್ಯಾರ್ಥಿಗಳಲ್ಲಿ ಸದ್ಗುಣಗಳ ವೃದ್ಧಿ ಮಾಡಿ ಅವುಗಳ ಜೋಪಾನ ಮಾಡುವುದು ಶಿಕ್ಷಕರ ಧರ್ಮವಾಗಿದೆ. ಏಕೆಂದರೆ ಒಬ್ಬ ವಿದ್ಯಾರ್ಥಿಯು ಶಾಲೆಯಿಂದ ಸದ್ಗುಣಿಯೆಂದು ಹೊರಬಿದ್ದ ನಂತರ ಸಮಾಜಕ್ಕೆ ಅವನಿಂದ ಲಾಭವಾಗುತ್ತದೆ. ಸಮಾಜ ಹಾಗೂ ರಾಷ್ಟ್ರ ಇವುಗಳಿಗೋಸ್ಕರ ಸಕ್ಷಮ ಹಾಗೂ ಒಳ್ಳೆ ಗುಣಗಳಿಂದ ಸಂಪನ್ನ, ಪರಿಪೂರ್ಣ ನಾಗರಿಕರನ್ನು ನಿರ್ಮಿಸುವುದು ಶಿಕ್ಷಕರ ಕರ್ತವ್ಯ! ಒಂದು ವೇಳೆ ಚಿಂತನೆ ಮಾಡಿದಲ್ಲಿ, ನಮ್ಮಿಂದ ಒಳ್ಳೆಯ ನಾಗರಿಕರ ನಿರ್ಮಿತಿ ಆಗುತ್ತಿಲ್ಲ ಎಂಬುವುದು ನಮ್ಮ ಗಮನಕ್ಕೆ ಬರುವುದು. ಇದರ ಅರ್ಥ ನಾವು ಧರ್ಮಪಾಲನೆ ಮಾಡುತ್ತಿಲ್ಲ ಎಂದು! ‘ಮಕ್ಕಳು ಪರೀಕ್ಷೆಯಲ್ಲಿ ಒಳ್ಳೆ ಅಂಕಗಳು ಪಡೆದರೆ ಆಯಿತು, ನಮ್ಮ ಕರ್ತವ್ಯ ಅಲ್ಲಿಗೆ ಮುಗಿಯಿತು’ ಎಂಬುವುದು ಶಿಕ್ಷಕರ ಧೋರಣೆ. ಆದರೆ ಇದಿಷ್ಟು ಮಾಡುವುದರಿಂದ ಅವರ ಕರ್ತವ್ಯ ಮುಗಿಯುವದಿಲ್ಲ. ಅಂಕಗಳಿಂದ ಮಕ್ಕಳಿಗೆ ನೌಕರಿ ಹಾಗೂ ಹಣ ಸಿಗಬಹುದು, ಆದರೆ ಅವರು ಪ್ರೇಮ, ಪ್ರಾಮಾಣಿಕತೆ ಹಾಗೂ ನೀತಿವಂತರಾಗಿ ಸಮಾಜ ಸೇವೆ ಮಾಡುತ್ತಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ; ಆದುದರಿಂದ ಇಂದು ಪ್ರತಿಯೊಂದು ಕಾರ್ಯಾಲಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರಿಗಳು ನೋಡಲು ಸಿಗುತ್ತಾರೆ. ಅವರು ನಾಚಿಕೆಯಿಲ್ಲದೇ ಭ್ರಷ್ಟಾಚಾರ ಮಾಡುತ್ತಾರೆ. ‘ನಾವು ಸಮಾಜದ ವ್ಯಕ್ತಿಗೆ ತೊಂದರೆ ಕೊಡುತ್ತಿದ್ದೇವೆ’, ಎಂಬುವುದರ ಬಗ್ಗೆ ಅವರಿಗೆ ಏನೂ ಅನ್ನಿಸುವುದಿಲ್ಲ.
ಶಿಕ್ಷಕರು ಸಮಾಜಕ್ಕೆ ಸೇವಕರನ್ನು ನೀಡಿದಲ್ಲಿಯೇ ಅವರ ಧರ್ಮಪಾಲನೆಯಾಗುವುದು !
ಶಿಕ್ಷಕರಾದ ನಾವು ಸಮಾಜಕ್ಕೆ ನಿಜವಾದ ಸೇವಕರನ್ನು ಕೊಡಬೇಕು. ಇದೇ ಶಿಕ್ಷಕರ ನಿಜವಾದ ಧರ್ಮ ಹಾಗೂ ಕರ್ತವ್ಯವಾಗಿದೆ. ಅವರು ವೈದ್ಯರಾಗಿರಬಹುದು, ಅಭಿಯಂತರಾಗಿರಬಹುದು ಅಥವಾ ಸರಕಾರಿ ಅಧಿಕಾರಿಯಾಗಿರಬಹುದು; ಎಲ್ಲ ಕ್ಷೇತ್ರಗಳಲ್ಲಿಯೂ ಸಮಾಜಕ್ಕೆ ‘ಸೇವಕ’ರನ್ನು ನೀಡಿದರೆ ನಾವು ನಿಜವಾದ ಧರ್ಮಪಾಲನೆ ಮಾಡಿದಂತೆ!
ನಾವು ನಮ್ಮ ಧರ್ಮಪಾಲನೆ ಮಾಡದಿದ್ದರೆ, ವ್ಯಕ್ತಿಯ, ಪರೋಕ್ಷವಾಗಿ ಸಮಾಜದ ಹಾಗೂ ರಾಷ್ಟ್ರದ ಅಂದರೆ ನಮ್ಮ ವಿನಾಶವನ್ನೇ ನಾವು ತಂದುಕೊಳ್ಳುತ್ತೇವೆ ಎಂಬುದನ್ನು ಮರೆಯಬಾರದು.
– ಶ್ರೀ. ರಾಜೇಂದ್ರ ಪಾವಸಕರ (ಗುರುಜಿ) , ಪನವೇಲ.