ಮಿತ್ರರೇ, ಶಾಸ್ತ್ರಾನುಸಾರ ನವರಾತ್ರಿ ಉತ್ಸವವನ್ನು ಆಚರಿಸೋಣ !
ವಿದ್ಯಾರ್ಥಿ ಮಿತ್ರರೇ, ನಾವು ನಮ್ಮ ಹಿಂದೂ ಸಂಸ್ಕೃತಿಯಲ್ಲಿರುವ ಅನೇಕ ಹಬ್ಬಉತ್ಸವಗಳನ್ನು ಆಚರಿಸುತ್ತೇವೆ. ಹಬ್ಬಗಳ ಆಚರಣೆಯು ದೇವರ ಭಕ್ತಿ ಮಾಡಿ ಆನಂದಮಯ ಜೀವನವನ್ನು ನಡೆಸಲು ಒಂದು ಸುಲಭ ಮಾರ್ಗವಾಗಿದೆ. ಪ್ರತಿಯೊಬ್ಬರಿಗೂ ದೇವರ ಶಕ್ತಿ ಹಾಗೂ ಅಸ್ತಿತ್ವದ ಅರಿವಾಗಬೇಕು ಹಾಗೂ ನಾವೆಲ್ಲರೂ ಆನಂದದಿಂದ ಇರಲು, ಅಂತೆಯೇ ಆದರ್ಶ ಜೀವನವನ್ನು ನಡೆಸಲು ದೇವರು ಈ ಎಲ್ಲ ಉತ್ಸವಗಳನ್ನು ನಿರ್ಮಿಸಿದನು; ಆದರೆ ಈಗ ನಮಗೆ ಈ ಎಲ್ಲ ಹಬ್ಬ ಉತ್ಸವಗಳನ್ನು ಶಾಸ್ತ್ರಬದ್ಧವಾಗಿ ಹೇಗೆ ಆಚರಿಸುವುದು ಹಾಗೂ ಅವುಗಳ ಹಿಂದಿನ ಶಾಸ್ತ್ರ ತಿಳಿದಿಲ್ಲ. ಆದುದರಿಂದ ಹಬ್ಬ ಮತ್ತು ಉತ್ಸವಗಳಲ್ಲಿ ಅನೇಕ ತಪ್ಪು ಆಚರಣೆಗಳು ನಡೆಯುತ್ತಿವೆ. ಈ ಲೇಖನದ ಮಾಧ್ಯಮದಿಂದ ನಾವು ನವರಾತ್ರಿ ಉತ್ಸವವನ್ನು ಹೇಗೆ ಆಚರಿಸುವುದು ಹಾಗೂ ನವರಾತ್ರಿಯ ಆಚರಣೆಯ ಶಾಸ್ತ್ರೀಯ ಹಿನ್ನೆಲೆಯನ್ನು ತಿಳಿಯುವವರಿದ್ದೇವೆ.
ನವರಾತ್ರಿ ಹಬ್ಬದ ಹಿಂದಿನ ಶಾಸ್ತ್ರ
ನವರಾತ್ರಿಯಲ್ಲಿ ನಾವು ಮಹಾಕಾಳಿ, ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿಯ ಉಪಾಸನೆಯನ್ನು ಮಾಡುತ್ತೇವೆ. ಈ ೯ ದಿನಗಳಲ್ಲಿ ಮೊದಲ ೩ ದಿನಗಳವರೆಗೆ ಮಹಾಕಾಳಿ, ನಂತರದ ೩ ದಿನಗಳಲ್ಲಿ ಮಹಾಲಕ್ಷ್ಮೀ ಹಾಗೂ ಕೊನೆಯ ಮೂರು ದಿನಗಳಲ್ಲಿ ಮಹಾಸರಸ್ವತಿಯ ಉಪಾಸನೆಯನ್ನು ಮಾಡಲಾಗುತ್ತದೆ. ಈಗ ನಾವು ವಿವಿಧ ದೇವತೆಗಳ ಉಪಾಸನೆಯನ್ನು ಮಾಡುವುದರ ಹಿಂದಿನ ಶಾಸ್ತ್ರವನ್ನು ನೋಡೋಣ.
೨. ನವರಾತ್ರಿಯಲ್ಲಿ ೯ ದಿನಗಳಲ್ಲಿ ಅನುಕ್ರಮವಾಗಿ ಮಹಾಕಾಳಿ, ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿಯ ಪೂಜೆ ಮಾಡುವುದರ ಹಿಂದಿನ ಶಾಸ್ತ್ರ
೨ ಅ. ನವರಾತ್ರಿಯ ಮೊದಲನೇ ೩ ದಿನಗಳಲ್ಲಿ ಮಹಾಕಾಳಿಯ ಉಪಾಸನೆ ಮಾಡುವುದರ ಹಿಂದಿನ ಶಾಸ್ತ್ರ
೨ ಅ ೧. ಸ್ವಭಾವದೋಷ ಹಾಗೂ ದುರ್ಗುಣಗಳು ಜೀವನವನ್ನು ದುಃಖಮಯ ಹಾಗೂ ಒತ್ತಡಗ್ರಸ್ತವನ್ನಾಗಿಸುವ ಶತ್ರುಗಳಾಗಿರುವುದು : ನಾವು ನಮ್ಮ ಜೀವನದಲ್ಲಿ ಸಂಕಟಗಳ ನಿವಾರಣೆಯಾಗಿ ಶತ್ರುಗಳ ನಾಶವಾಗಬೇಕೆಂದು ಮಹಾಕಾಳಿಯ ಉಪಾಸನೆಯನ್ನು ಮಾಡುತ್ತೇವೆ. ಮಿತ್ರರೇ, ನಮ್ಮ ವಿದ್ಯಾರ್ಥಿ ಜೀವನದಲ್ಲಿ ನಮ್ಮ ಜೀವನವನ್ನು ದುಃಖಮಯ ಹಾಗೂ ಒತ್ತಡಗ್ರಸ್ತರನ್ನಾಗಿಸುವ ಶತ್ರುಗಳು ಯಾರು? ಮಿತ್ರರೇ, ಸ್ವಭಾವದೋಷಗಳು ಹಾಗೂ ದುರ್ಗುಣಗಳೇ ನಮ್ಮ ಶತ್ರುಗಳಾಗಿವೆ. ಯಾವ ಮಕ್ಕಳಲ್ಲಿ ಅಧಿಕ ಪ್ರಮಾಣದಲ್ಲಿ ದುರ್ಗುಣಗಳಿವೆಯೋ ಆ ಮಕ್ಕಳು ಆನಂದದಿಂದ ಇರಲು ಸಾಧ್ಯವಿಲ್ಲ. ಇದರ ಉದಾಹರಣೆಗಳನ್ನು ನೋಡಿ.
೨ ಅ ೧ ಅ. ಜಗಳಗಂಟತನ : ಓರ್ವ ಮಗುವಿನಲ್ಲಿ ಜಗಳಗಂಟತನದ ದೋಷ ಇದ್ದರೆ ಅವನಿಗೆ ಬಹಳ ಶತ್ರುಗಳಿರುತ್ತಾರೆ. ಹೀಗಿದ್ದರೆ ಆ ವಿದ್ಯಾರ್ಥಿಯು ಆನಂದದಿಂದ ಇರಬಲ್ಲನೇ? ಅಂದರೆ ಅವನ ಜಗಳಗಂಟತನವೇ ಅವನ ಮುಖ್ಯ ಶತ್ರುವಾಗಿದೆ.
೨ ಅ ೧ ಆ. ಆಲಸ್ಯ : ಒಂದು ಮಗುವಿನಲ್ಲಿ ಆಲಸ್ಯದ ದೋಷವಿದ್ದರೆ ಅವನು ಸಮಯಕ್ಕೆ ಸರಿಯಾಗಿ ಅಧ್ಯಯನವನ್ನು ಪೂರ್ಣಗೊಳಿಸುವುದಿಲ್ಲ. ಅವನ ಮನಸ್ಸು ಬಹಳ ಒತ್ತಡ ಹಾಗೂ ಭಯದಿಂದ ಒದ್ದಾಡುತ್ತಿರುತ್ತದೆ. ಆಲಸ್ಯ ದೋಷವು ಈ ಮಗುವಿನ ಶತ್ರುವಾಗಿದೆ.ಮಿತ್ರರೇ, ನಮ್ಮ ದೋಷಗಳೇ ನಮ್ಮ ಶತ್ರುಗಳಾಗಿವೆ, ಅವುಗಳ ನಿವಾರಣೆಗಾಗಿ ನಾವು ಮಹಾಕಾಳಿ ದೇವಿಗೆ ಪ್ರಾರ್ಥನೆ ಮಾಡೋಣ.
೨ ಅ ೨. ಮಕ್ಕಳೇ, ಸ್ವಭಾವದೋಷ ದೂರವಾಗಲು ಮಹಾಕಾಳಿ ಮಾತೆಗೆ ಪ್ರಾರ್ಥಿಸಿರಿ : ಮಿತ್ರರೇ, ನಮ್ಮ ಸ್ವಭಾವದೋಷಗಳೇ ನಮ್ಮನ್ನು ಆನಂದಮಯ ಜೀವನದಿಂದ ದೂರ ಕೊಂಡೊಯ್ಯುವ ಶತ್ರುಗಳಾಗಿವೆ. ಆದುದರಿಂದ ನಾವು ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿ ದೇವಿಗೆ ‘ಹೇ ಮಹಾಕಾಳಿ ದೇವಿ, ನನ್ನನ್ನು ಆನಂದಮಯ ಜೀವನದಿಂದ ದೂರ ಕೊಂಡೊಯ್ಯುವ ಶತ್ರುಗಳಾದ ನನ್ನ ದೋಷಗಳ ಅರಿವಿರಲಿ ಹಾಗೂ ಅವುಗಳ ನಿವಾರಣೆಗಾಗಿ ನನ್ನಿಂದ ಸಾತತ್ಯದಿಂದ ಹಾಗೂ ಉದ್ದೇಶಪೂರ್ವಕ ಪ್ರಯತ್ನಗಳಾಗಲಿ ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ’ಎಂದು ಪ್ರಾರ್ಥನೆ ಮಾಡಬೇಕು.
ಮಿತ್ರರೇ, ನಾವು ದೇವಿಗೆ ದೋಷಗಳನ್ನು ನಿವಾರಿಸುವುದಾಗಿ ವಚನ ಕೊಡೋಣ ಹಾಗೂ ಎಲ್ಲರೂ ಈ ನಿಟ್ಟಿನಲ್ಲಿ ಪ್ರಯತ್ನಿಸೋಣ.
೨ ಆ. ನವರಾತ್ರಿಯ ನಂತರದ ೩ ದಿನಗಳ ವರೆಗೆ ಮಹಾಲಕ್ಷ್ಮೀ ದೇವಿಯ ಉಪಾಸನೆ ಮಾಡುವುದರ ಹಿಂದಿನ ಶಾಸ್ತ್ರ : ಮಿತ್ರರೇ, ಈ ದೇವತೆಯು ನಮಗೆ ಸುಖ, ಶಾಂತಿ ಹಾಗೂ ಸಮಾಧಾನವನ್ನು ಪ್ರದಾನಿಸುತ್ತಾಳೆ. ಆದುದರಿಂದ ನಾವು ಮಹಾಲಕ್ಷ್ಮೀಯ ಉಪಾಸನೆ ಮಾಡುತ್ತೇವೆ.
೨ ಇ. ನವರಾತ್ರಿಯ ಕೊನೆಯ ೨ ದಿನಗಳಲ್ಲಿ ಸರಸ್ವತಿದೇವಿಯ ಉಪಾಸನೆಯನ್ನು ಮಾಡುವುದರ ಹಿಂದಿನ ಶಾಸ್ತ್ರ
ನಮಸ್ತೇ ಶಾರದೇ ದೇವಿ ವೀಣಾಪುಸ್ತಕಧಾರಿಣಿ |
ವಿದ್ಯಾರಂಭಂ ಕರಿಷ್ಯಾಮಿ ಪ್ರಸನ್ನಾ ಭವ ಸರ್ವದಾ || |
ಅರ್ಥ : ಕೈಯಲ್ಲಿ ವೀಣೆ ಹಾಗೂ ಗ್ರಂಥವನ್ನು ಧರಿಸಿರುವ ಹೇ ಸರಸ್ವತಿ ದೇವಿಯೇ ನಿನಗೆ ವಂದಿಸಿ ನಾನು ನನ್ನ ಅಧ್ಯಯನವನ್ನು ಆರಂಭಿಸುತ್ತಿದ್ದೇನೆ. ನೀನು ನನ್ನ ಮೇಲೆ ಯಾವಾಗಲೂ ಪ್ರಸನ್ನವಾಗಿರು.
೨ ಇ ೧. ಮಕ್ಕಳೇ, ‘ವಿದ್ಯಾರ್ಥಿಯು ಜ್ಞಾನ ಹಾಗೂ ಕಲೆಯ ಉಪಾಸಕನಿರುವುದರಿಂದ’ ಸರಸ್ವತಿದೇವಿಯ ಉಪಾಸನೆ ಮಾಡಿರಿ : ನವರಾತ್ರಿಯ ಕೊನೆಯ ೩ ದಿನಗಳಲ್ಲಿ ಸರಸ್ವತಿ ದೇವಿಯ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುವುದರಿಂದ ನಾವು ಅವಳ ಉಪಾಸನೆಯನ್ನು ಮಾಡುತ್ತೇವೆ. ಮಿತ್ರರೇ, ಸರಸ್ವತಿ ಎಂದರೆ ಕಲೆ ಹಾಗೂ ಜ್ಞಾನವನ್ನು ನೀಡುವ ದೇವತೆ. ಈ ಮೂರು ದಿನಗಳಲ್ಲಿ ನಾವು ನಮ್ಮಲ್ಲಿ ಗುಣಗಳನ್ನು ಬೆಳೆಸಲು ಪ್ರಯತ್ನಿಸಬೇಕು; ಏಕೆಂದರೆ ಗುಣವೃದ್ಧಿಯಾಗದ ಹೊರತು ಜ್ಞಾನ ಹಾಗೂ ಕಲೆಯನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ನಾವು ಈ ದಿನಗಳಲ್ಲಿ ಗುಣಸಂವರ್ಧನೆಯ ಪ್ರತಿಜ್ಞೆ ಮಾಡೋಣ. ಆಗಲೇ ನಮ್ಮ ಮೇಲೆ ಸರಸ್ವತಿ ಮಾತೆಯ ಕೃಪೆಯಾಗುತ್ತದೆ. ಈ ದೇವತೆಯು ವಿದ್ಯಾರ್ಥಿ ದೆಸೆಯ ಅತ್ಯಂತ ಮಹತ್ವದ ದೇವತೆಯಾಗಿರುವುರಿಂದ ಪ್ರತಿದಿನ ಶಾಲೆಯಲ್ಲಿ ಈ ದೇವತೆಯ ಪ್ರಾರ್ಥನೆಯನ್ನು ಮಾಡಬೇಕು. ವಿದ್ಯಾರ್ಥಿಯು ಜ್ಞಾನ ಹಾಗೂ ಕಲೆಯ ಉಪಾಸಕನಾಗಿದ್ದಾನೆ ಎಂದು ನೆನಪಿಟ್ಟುಕೊಳ್ಳಿ!
೨ ಇ ೨. ಸರಸ್ವತಿ ದೇವಿಯ ಶಾಸ್ತ್ರೀಯ ಮಾಹಿತಿ : ಈ ದೇವತೆಯ ಕೃಪೆಯನ್ನು ಸಂಪಾದಿಸಲು ನಮ್ಮಲ್ಲಿ ಮುಂದಿನ ಗುಣಗಳಿರಬೇಕು.
೨ ಇ ೨ ಅ. ಕಲಿಯುವ ವೃತ್ತಿ : ಮಿತ್ರರೇ, ಯಾರು ಸತತವಾಗಿ ಕಲಿಯುವ ಸ್ಥಿತಿಯಲ್ಲಿ ಇರುತ್ತಾರೆಯೋ ಅವರ ಮೇಲೆ ಸರಸ್ವತಿ ಮಾತೆಯು ಪ್ರಸನ್ನಳಾಗುತ್ತಾಳೆ. ನಮಗೆ ಎಲ್ಲ ವಿಷಯಗಳೂ ತಿಳಿದಿರುವುದಿಲ್ಲ. ನಮಗೆ ಇತರರಿಂದ ಕಲಿಯುವ ವೃತ್ತಿಯಿದ್ದರೆ ನಾವು ವಿವಿಧ ವ್ಯಕ್ತಿ ಹಾಗೂ ವಸ್ತುಗಳಿಂದ ಏನಾದರೂ ಕಲಿಯಬಹುದು; ಏಕೆಂದರೆ ಪ್ರತಿಯೊಬ್ಬರಲ್ಲಿ ವಿವಿಧ ಗುಣ, ಜ್ಞಾನ ಹಾಗೂ ಕಲೆಯಸಂಪತ್ತು ಇರುತ್ತದೆ. ನಮ್ಮ ತರಗತಿಯಲ್ಲಿ ಕೆಲವು ಮಕ್ಕಳಚಿತ್ರಕಲೆ ಒಳ್ಳೆಯದಿರುತ್ತದೆ, ಕೆಲವರಿಗೆ ಮಧುರವಾಗಿ ಹಾಡಲು ಬರುತ್ತದೆ, ಕೆಲವರಿಗೆ ಗಣಿತ ಸುಲಭವಾಗಿರುತ್ತದೆ. ಕಲಿಯುವ ವೃತ್ತಿ ಇದ್ದರೆ ನಾವು ತರಗತಿಯ ಎಲ್ಲ ಮಕ್ಕಳಿಂದ ಅನೇಕ ವಿಷಯಗಳನ್ನು ಕಲಿಯಬಹುದು.
೨ ಇ ೨ ಆ. ತೀವೃ ತಳಮಳ : ನಮ್ಮಲ್ಲಿ ಜ್ಞಾನ ಹಾಗೂ ಕಲೆಯನ್ನು ಸಂಪಾದಿಸುವ ತೀವೃ ತಳಮಳವಿರಬೇಕು. ನನಗೆ ಯಾವುದೇ ಅಡಚಣೆಗಳು ಬಂದರೂ ನಾನು ಜ್ಞಾನವನ್ನು ಪಡೆದೇ ಪಡೆಯುತ್ತೇನೆ ಎಂಬ ತಳಮಳವು ನಮ್ಮಲ್ಲಿ ಬರಬೇಕು.
೨ ಇ ೨ ಇ. ಮಾರ್ಗದರ್ಶನ ಪಡೆಯುವುದು : ಜ್ಞಾನ ಹಾಗೂ ಕಲೆಯನ್ನು ಪಡೆಯಲು ನಾವು ಯಾವಾಗಲೂ ತಜ್ಞರ ಮಾರ್ಗದರ್ಶನವನ್ನು ಪಡೆಯಬೇಕು.
೨ ಇ ೨ ಈ. ಜಿಗುಟುತನ : ಒಂದು ಜ್ಞಾನ ಗ್ರಹಣವಾಗುವ ವರೆಗೆ ಸತತವಾಗಿ ಪ್ರಯತ್ನಿಸುವುದನ್ನೇ ‘ಜಿಗುಟುತನ’ ಎಂದು ಹೇಳುತ್ತಾರೆ. ಕೆಲವು ಮಕ್ಕಳು ವಿಷಯ ತಿಳಿಯದಿದ್ದರೆ ಅದನ್ನು ತಕ್ಷಣ ಬಿಟ್ಟು ಬಿಡುತ್ತಾರೆ. ನಮಗೆ ಯಾವುದೇ ವಿಷಯವು ‘ತಕ್ಷಣ’ಸಿಗಬೇಕು ಎಂದು ಅನಿಸುತ್ತದೆ. ಮಿತ್ರರೇ, ಯಾವುದೇ ಜ್ಞಾನವನ್ನು ಪಡೆಯಲು ಜಿಗುಟುತನ ಬೇಕೇ ಬೇಕು. ಈ ನವರಾತ್ರಿ ಉತ್ಸವದ ಕಾಲಾವಧಿಯಲ್ಲಿ ಈ ಗುಣವನ್ನು ನಮ್ಮಲ್ಲಿ ತರಲು ನಿಶ್ಚಯ ಮಾಡೋಣ.ಅದಕ್ಕಾಗಿ ನಾವು ಸರಸ್ವತಿ ದೇವಿಗೆ ಪ್ರಾರ್ಥಿಸೋಣ!
೨ ಇ ೨ ಉ. ಧರ್ಮಾಚರಣೆ : ಕೆಲವು ಮಕ್ಕಳು ಹೆಚ್ಚಿನ ಅಂಕಗಳನ್ನು ಪಡೆಯಲು ಇತರರ ಉತ್ತರಗಳನ್ನು ನೋಡಿ (ಕಾಪಿ) ಉತ್ತರ ಬರೆಯುತ್ತಾರೆ. ಇದು ಒಂದು ರೀತಿಯ ಕಳ್ಳತನವಾಗಿದ್ದು ಅಧರ್ಮವಾಗಿದೆ. ಇಂತಹ ವಿದ್ಯಾರ್ಥಿಗಳ ಮೇಲೆ ಸರಸ್ವತಿ ದೇವಿಯು ಏಕೆ ಪ್ರಸನ್ನಳಾಗುವಳು?ನಾವು ಧರ್ಮಾಚರಣೆಯನ್ನು ಮಾಡಿದಾಗಲೇ ನಮ್ಮ ಮೇಲೆ ಸರಸ್ವತಿ ದೇವಿಯ ಕೃಪೆಯಾಗುವುದು. ಸರಸ್ವತಿ ಮಾತೆಗೆ ‘ಹೇ ಸರಸ್ವತಿ ಮಾತೆ, ನನ್ನಿಂದ ಸದಾಕಾಲ ಧರ್ಮಾಚರಣೆಯಾಗಲಿ. ಇಂದಿನಿಂದ ನಾವು ಈ ‘ಕಾಪಿ’ಯವಿಕೃತಿಯನ್ನು ನಷ್ಟಗೊಳಿಸಲು ನಿಶ್ಚಯಿಸುತ್ತಿದ್ದೇವೆ’ಎಂದು ಪ್ರಾರ್ಥನೆ ಮಾಡೋಣ.
೨ ಇ ೨ ಊ. ನಮೃತೆ : ನಮೃತೆ ಇಲ್ಲದ ಹೊರತು ನಮಗೆ ಜ್ಞಾನ ಹಾಗೂ ಕಲೆಯನ್ನು ಗ್ರಹಿಸಲು ಸಾಧ್ಯವಿಲ್ಲ. ‘ವಿದ್ಯಾ ವಿನಯೇನ ಶೋಭತೆ’ ಎಂದು ಹೇಳುತ್ತಾರೆ. ಸರಸ್ವತಿ ದೇವಿಗೆ ನಮೃ ವಿದ್ಯಾರ್ಥಿಗಳು ಬಹಳ ಇಷ್ಟವಾಗುತ್ತಾರೆ. ಮಿತ್ರರೇ, ನಮಗೆ ದೇವಿಯ ಇಷ್ಟದವರಾಗಬೇಕಲ್ಲವೇ ? ನಾವು ಈ ಗುಣವನ್ನು ಅಂಗೀಕರಿಸುವ ನಿಶ್ಚಯ ಮಾಡೋಣ ಹಾಗೂ ಇಂದಿನಿಂದ ನಮೃತೆಯಿಂದ ವರ್ತಿಸಲು ಪ್ರಯತ್ನಿಸೋಣ.
೨ ಇ ೨ ಋ. ತಮಗೆ ದೊರೆತ ಜ್ಞಾನವನ್ನು ಇತರರಿಗೆ ನೀಡುವುದು : ಮಿತ್ರರೇ, ನಮಗೆ ಯಾವುದೇ ಕಲೆ ಅಥವಾ ಜ್ಞಾನ ದೊರೆತರೆ ಅದನ್ನು ಇತರರಿಗೆ ನೀಡುವುದರಲ್ಲಿಯೇ ನಿಜವಾದ ಆನಂದವಿದೆ. ಸಮರ್ಥ ರಾಮದಾಸರು ‘ನಮಗೆ ತಿಳಿದಿರುವುದೆಲ್ಲವನ್ನೂ ಇತರರಿಗೆ ಕಲಿಸಬೇಕು ಹಾಗೂ ಎಲ್ಲರನ್ನೂ ಬುದ್ಧಿವಂತರನ್ನಾಗಿಸಬೇಕು’ ಎಂದು ಹೇಳಿದ್ದಾರೆ. ಕೆಲವು ಮಕ್ಕಳು ಇತರರಿಗೆ ಏನನ್ನೂ ಹೇಳುವುದಿಲ್ಲ, ಕಲಿಸುವುದಿಲ್ಲ, ಅವರಿಗೆ ಸ್ವಾರ್ಥಿ ಎಂದು ಹೇಳಲಾಗುತ್ತದೆ. ಸರಸ್ವತಿ ಮಾತೆಗೆ ಇಂತಹ ವಿದ್ಯಾರ್ಥಿಗಳು ಏಕೆಇಷ್ಟವಾಗಬೇಕು?
ಮಿತ್ರರೇ, ನಾವು ಮೇಲಿನ ಎಲ್ಲ ಗುಣಗಳನ್ನು ನಮ್ಮಲ್ಲಿ ತರಲು ಪ್ರಯತ್ನಿಸೋಣ, ಆಗಲೇ ನಿಜವಾದ ಅರ್ಥದಲ್ಲಿ ನವರಾತ್ರಿ ಉತ್ಸವವನ್ನು ಆಚರಿಸಿದಂತೆ ಆಗುತ್ತದೆ.
೨ ಇ ೩. ಶ್ರೀ ಸರಸ್ವತಿ ದೇವಿಯ ಮೂರ್ತಿಯ ವೈಶಿಷ್ಟ್ಯಗಳು
೨ ಇ ೩ ಅ. ಮೂರ್ತಿಯ ೪ ಕೈಗಳು : ನಾಲ್ಕು ಕೈಗಳು ನಾಲ್ಕು ದಿಕ್ಕುಗಳನ್ನು ದರ್ಶಿಸುತ್ತವೆ ಹಾಗೂ ದೇವಿಯು ಸರ್ವವ್ಯಾಪಿಯಾಗಿದ್ದಾಳೆ ಎಂಬುದನ್ನು ದರ್ಶಿಸುತ್ತವೆ.
೨ ಇ ೩ ಆ. ಕೈಯಲ್ಲಿ ಇರುವ ಗ್ರಂಥ : ದೇವಿಯು ಜ್ಞಾನಪ್ರಾಪ್ತಿಯ ಸಾಧನವಾಗಿದ್ದಾಳೆ. ಅವಳ ಉಪಾಸನೆಯಿಂದ ನಮಗೆ ಜ್ಞಾನಪ್ರಾಪ್ತಿಯಾಗುತ್ತದೆ.
೨ ಇ ೨ ಇ. ಕೈಯಲ್ಲಿ ಇರುವ ಜಪಮಾಲೆ : ಇದು ಏಕಾಗೃತೆಯ ಪ್ರತೀಕವಾಗಿದೆ. ಏಕಾಗೃತೆಯಿಂದ ನಾವು ಜ್ಞಾನವನ್ನು ಶೀಘ್ರವಾಗಿ ಗ್ರಹಿಸಬಲ್ಲೆವು.
೨ ಇ ೩ ಈ. ವೀಣೆ : ವೀಣೆಯು ಸಂಗೀತದಲ್ಲಿನ ಒಂದು ವಾದ್ಯವಾಗಿದೆ. ಸಂಗೀತ ಕೇಳಿದ ನಂತರ ನಮಗೆ ಆನಂದವಾಗುತ್ತದೆ ಹಾಗೂ ಶಾಂತವೆನಿಸುತ್ತದೆ. ಜ್ಞಾನ ಪ್ರಾಪ್ತಿಯಾದ ನಂತರ ನಾವು ಆನಂದಮಯ ಜೀವನದ ಪ್ರತ್ಯಕ್ಷ ಅನುಭವವನ್ನು ಪಡೆಯಬಲ್ಲೆವು.
೨ ಇ ೩ ಉ. ದೇವಿಯ ಅನೇಕ ಅಲಂಕಾರ : ಅಲಂಕಾರವು ಐಶ್ವರ್ಯದ ಪ್ರತೀಕವಾಗಿದೆ. ದೇವಿಯ ಉಪಾಸನೆಯಿಂದ ನಮಗೆ ಐಶ್ವರ್ಯ ಲಭಿಸುತ್ತದೆ.
ಮಿತ್ರರೇ, ಇಂದು ನಾವು ಸರಸ್ವತಿ ಮಾತೆಯ ಉಪಾಸನೆ ಮಾಡಲು ಅವಶ್ಯಕವಾಗಿರುವ ಗುಣಗಳನ್ನು ನೋಡಿದೆವು. ಸರಸ್ವತಿಮಾತೆಯು ಕೈಯಲ್ಲಿ ಧರಿಸಿರುವ ವಸ್ತುಗಳ ಅರ್ಥವನ್ನು ನೋಡಿದೆವು. ನಾವು ಈ ಮಾಹಿತಿಯನ್ನು ಇತರರಿಗೂ ಹೇಳೋಣ. ಮಕ್ಕಳೇ, ಇನ್ನೂ ಹೆಚ್ಚಿನ ಮಾಹಿತಿಗಾಗಿ ’ಸನಾತನ ಸಂಸ್ಥೆ’ಯ ’ಸರಸ್ವತಿ’ ಈ ಲಘುಗ್ರಂಥವನ್ನು ಓದಬಹುದು.
೩. ದೇವತೆ ಹಾಗೂ ಅವರ ಕಾರ್ಯ
ಅ. ಶ್ರೀ ಮಹಾಸರಸ್ವತಿ – ಸೃಷ್ಟಿನಿರ್ಮಿತಿ
ಆ. ಶ್ರೀ ಮಹಾಲಕ್ಷ್ಮೀ – ಪಾಲನೆ ಪೋಷಣೆ
ಇ. ಶ್ರೀ ಮಹಾಕಾಳಿ – ಸಂಕಟ ನಿವಾರಣೆ ಹಾಗೂ ಶತ್ರುವಿನ ನಾಶ
೪. ದೇವಿಯ ಪೂಜೆಯ ಹಿಂದಿನ ಶಾಸ್ತ್ರ
೪ ಅ. ಗಂಧ : ದೇವಿಗೆ ಅನಾಮಿಕಾ ಬೆರಳಿನಿಂದ (ಉಂಗುರದ ಬೆರಳು) ಗಂಧವನ್ನು ಹಚ್ಚಬೇಕು.
೪ ಆ. ದೇವತೆ ಹಾಗೂ ಅವರ ತತ್ತ್ವವನ್ನು ಆಕರ್ಷಿಸುವ ಹೂವುಗಳು
ಶ್ರೀ ದುರ್ಗಾದೇವಿ | ಮಲ್ಲಿಗೆ |
ಶ್ರೀ ಲಕ್ಷ್ಮೀ | ಗುಲಾಬಿ |
ಶ್ರೀ ಸರಸ್ವತಿ | ರಾತ್ರಿರಾಣಿ |
ಶ್ರೀ ಭವಾನಿ | ಬ್ರಹ್ಮಕಮಲ |
ಶ್ರೀ ಅಂಬಾಮಾತೆ | ಪಾರಿಜಾತ |
೧. ದೇವಿಗೆ ಹೂವುಗಳನ್ನು ಒಂದು ಅಥವಾ ೯ರ ಪಟ್ಟಿನಲ್ಲಿ ಹಾಗೂ ವೃತ್ತಾಕಾರವಾಗಿಅರ್ಪಿಸಬೇಕು.
೨. ದೇವಿಗೆ ಮಲ್ಲಿಗೆಯ ಸುಗಂಧ ದೃವ್ಯವನ್ನು ಹಚ್ಚಬೇಕು.
೩. ದೇವಿಗೆ ಒಂದು ಅಥವಾ ೯ರ ಪಟ್ಟಿನಲ್ಲಿ ಪ್ರದಕ್ಷಿಣೆ ಹಾಕಬೇಕು.
೪ ಇ. ದೇವತೆ ಹಾಗೂ ಅವರನ್ನು ಆಕರ್ಷಿಸುವ ಬಣ್ಣಗಳು
ಶ್ರೀ ದುರ್ಗಾದೇವಿ | ಕೆಂಪು |
ಶ್ರೀ ಲಕ್ಷ್ಮೀ | ಹಳದಿ |
ಶ್ರೀ ಸರಸ್ವತಿ | ಬಿಳಿ |
ಶ್ರೀ ಕಾಳಿಕಾ | ನೇರಳೆ |
೪ ಈ. ದೇವಿಗೆ ಅಷ್ಟಭುಜಗಳಿರುವುದರ ಹಿಂದಿನ ಶಾಸ್ತ್ರ : ಅಷ್ಟಭುಜಾದೇವಿಯ ಕೈಯಲ್ಲಿ ಆಯುಧಗಳಿರುತ್ತವೆ. ಅಷ್ಟಭುಜಾದೇವಿಯು ದೇವಿಯ ಮಾರಕರೂಪವಾಗಿದ್ದಾಳೆ. ಅವಳು ಅಷ್ಟದಿಕ್ಕುಗಳನ್ನು ರಕ್ಷಿಸುತ್ತಾಳೆ.
೪ ಉ. ದೇವಿಯ ಹೆಸರಿನಲ್ಲಿ ಭಿಕ್ಷೆ ಬೇಡುವುದು : ದೇವಿಯ ಹೆಸರಿನಲ್ಲಿ ಭಿಕ್ಷೆ ಬೇಡುವುದು ಒಂದು ರೀತಿ ದಾಸ್ಯಭಕ್ತಿಯಾಗಿದೆ. ಇದರಲ್ಲಿ ದೇವಿಗೆ ಶರಣಾಗಿ ಸ್ವಂತವನ್ನು ಮರೆಯಲು ಸಾಧ್ಯವಾಗುತ್ತದೆ ಹಾಗೂ ನಮ್ಮ ಅಹಂಕಾರವು ಕಡಿಮೆಯಾಗುತ್ತದೆ. ’ದೇವಿ, ನಾನು ನಿನ್ನ ದಾಸನಾಗಿದ್ದೇನೆ’ ಎಂಬ ಭಾವ ನಿರ್ಮಾಣವಾಗುತ್ತದೆ.
೪ ಊ. ದೇವಿಯ ಅಲಂಕಾರದ ಮಹತ್ತ್ವ : ಮಿತ್ರರೇ, ನಮ್ಮ ಭಾರತೀಯ ಸಂಸ್ಕೃತಿಯಂತೆ ಪ್ರತಿಯೊಬ್ಬ ಸ್ತ್ರೀಯೂ ದೇವಿಯ ರೂಪವಾಗಿದ್ದಾಳೆ. ದೇವಿಯು ಎಲ್ಲ ಅಲಂಕಾರವನ್ನು ಧರಿಸಿದ್ದಾಳೆ. ಪ್ರತಿಯೊಂದು ಅಲಂಕಾರದಿಂದ ಆ ಸ್ತ್ರೀಗೆ ದೇವಿಯ ಶಕ್ತಿ ದೊರೆಯಬೇಕು, ದೇವಿಯ ಕೃಪೆಯು ಸತತವಾಗಿ ದೊರೆಯಬೇಕೆಂದು ದೇವಿಯು ಸ್ತ್ರೀಯರಿಗೆ ಅಲಂಕಾರ ರೂಪದ ಸಂರಕ್ಷಣಾ ಕವಚವನ್ನು ನೀಡಿದ್ದಾಳೆ.
ಹೀಗೆ, ನಾವು ಮಾಡುವ ಪ್ರತಿಯೊಂದು ಕೃತಿ ಮತ್ತು ವಿಚಾರ ದೇವಿಗೆ ಅಪೇಕ್ಷಿತ ರೀತಿಯಲ್ಲಿ ಆಗುವಂತೆ ಮಾಡಿದರೆ ನವಾರಾತ್ರಿಯನ್ನು ಸಾರ್ಥಕವಾಗಿ ಆಚರಿಸಿದಂತೆ ಆಗುವುದು, ಅಲ್ಲದೇ ನಮ್ಮ ಗುಣಗಳಲ್ಲಿ ವೃದ್ಧಿಯಾಗಿ ನಮ್ಮ ಜೀವನವೂ ಆನಂದಮಯ ಆಗುವುದು, ಅಲ್ಲವೇ?
-ಶ್ರೀ. ರಾಜೇಂದ್ರ ಪಾವಸಕರ (ಗುರುಜೀ), ಪನವೇಲ.