ಹಿಂದೂಸ್ಥಾನದಲ್ಲಿ ೧೮೫೭ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ವೀರ ಪರಾಕ್ರಮಿಗಳು ಪ್ರಜ್ವಲಿಸಿದರು. ಅವರಲ್ಲಿ ರಣರಾಗಿಣಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ.
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜನ್ಮ ಮತ್ತು ಬಾಲ್ಯ
ಎರಡನೇ ಬಾಜೀರಾವ ಪೇಶ್ವೆಯವರ ಸಂಬಂಧಿ ಚಿಮಾಜೀ ಅಪ್ಪಾರವರ ವ್ಯವಸ್ಥಾಪಕರಾಗಿದ್ದ ಮೋರೊಪಂತ ತಾಂಬೆ ಮತ್ತು ಭಗೀರಥಿಬಾಯಿಯವರಿಗೆ ಕಾರ್ತಿಕ ಕೃಷ್ಣ ೧೪, ೧೭೫೭ ವರ್ಷ ಅಂದರೆ ಆಂಗ್ಲ ಪಂಚಾಂಗಕ್ಕನುಸಾರ ೧೯ ನವೆಂಬರ ೧೮೩೫ ರಂದು ರಾಣಿ ಲಕ್ಷ್ಮೀಬಾಯಿಯ ಜನನವಾಯಿತು. ಮಗುವಿಗೆ ‘ಮಣಿಕರ್ಣಿಕಾ’ ಎಂದು ಹೆಸರಿಟ್ಟರು. ಮೋರೋಪಂತರು ಅವಳನ್ನು ಪ್ರೀತಿಯಿಂದ ‘ಮನುತಾಯಿ’ ಎಂದು ಕರೆಯುತ್ತಿದ್ದರು. ಮನು ನೋಡಲು ಸುಂದರ ಮತ್ತು ತುಂಬಾ ಬುದ್ಧಿವಂತೆ. ಮನುಗೆ ೩-೪ ವರ್ಷವಿರುವಾಗಲೇ ಮಾತೃವಿಯೋಗ ಅನುಭವಿಸಬೇಕಾಯಿತು. ಅವಳು ಮುಂದೆ ಬ್ರಹ್ಮಾವರ್ತಾದ ಎರಡನೇ ಬಾಜೀರಾವ ಪೇಶ್ವೆಯವರ ಆಶ್ರಯದಲ್ಲಿ ಬೆಳೆದಳು.
ಯುದ್ಧಕಲೆಯ ಶಿಕ್ಷಣ
ಬ್ರಹ್ಮಾವರ್ತಾದಲ್ಲಿ ನಾನಾಸಾಹೇಬ ಪೇಶ್ವೆ ತಮ್ಮ ಬಂಧು ರಾವಸಾಹೇಬರವರೊಂದಿಗೆ ಕತ್ತಿವರಸೆ, ಬಂದೂಕು ಚಲಾಯಿಸುವುದು ಮತ್ತು ಕುದುರೆ ಸವಾರಿಯನ್ನು ಕಲಿಯುತ್ತಿದ್ದರು. ಮನು ಸಹ ಅವರೊಂದಿಗೆ ಎಲ್ಲ ಯುದ್ಧಕಲೆಗಳನ್ನು ಕಲಿತು ಅದರಲ್ಲಿ ನೈಪುಣ್ಯ ಪಡೆದುಕೊಂಡಳು. ಅವರ ಜೊತೆಯಲ್ಲಿಯೇ ಮನು ವಿದ್ಯಾಭ್ಯಾಸವನ್ನು ಕೂಡ ಪಡೆದಳು.
ವಿವಾಹ
ಮನುಗೆ ಝಾನ್ಸೀ ಸಂಸ್ಥಾನದ ಅಧಿಪತಿ ಗಂಗಾಧರರಾವ ನೆವಾಳಕರರವರೊಂದಿಗೆ ಅವಳ ವಿವಾಹವು ನೆರವೇರಿತು. ಮೋರೋಪಂತ ತಾಂಬೆಯವರ ಮುದ್ದಿನ ಮಗಳಾದ ‘ಮನು’ ವಿವಾಹದ ನಂತರ ಝಾನ್ಸಿರಾಣಿಯಾದಳು. ವಿವಾಹದ ನಂತರ ಮಣಿಕರ್ಣಿಕಾಳನ್ನು ‘ಲಕ್ಷ್ಮೀಬಾಯಿ’ ಎಂದು ಸಂಬೋಧಿಲಾಯಿತು.
ಪುತ್ರವಿಯೋಗದ ದುಃಖ
ರಾಣಿ ಲಕ್ಷ್ಮೀಬಾಯಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಪುತ್ರನ ಜನನದಿಂದ ಅಧಿಕಾರಕ್ಕೆ ವಾರಸುದಾರ ಸಿಕ್ಕನೆಂದು ಗಂಗಾಧರರಾವಗೆ ತುಂಬಾ ಆನಂದವಾಯಿತು. ಆದರೆ ಮಗು ಮೂರು ತಿಂಗಳಿರುವಾಗಲೇ ಅಸುನೀಗಿತು. ಹಾಗಾಗಿ ರಾಣಿ ಲಕ್ಷ್ಮೀಬಾಯಿ ಮತ್ತು ಗಂಗಾಧರರಾವ ಇವರು ಪುತ್ರವಿಯೋಗ ಅನುಭವಿಸಬೇಕಾಯಿತು.
ಮಗನನ್ನು ದತ್ತು ಪಡೆಯುವುದು
ಪುತ್ರವಿಯೋಗವನ್ನು ಸಹಿಸದೆ ಗಂಗಾಧರರಾವ ಹಾಸಿಗೆ ಹಿಡಿದರು. ಗಂಗಾಧರರಾವ ಅವರ ಇಚ್ಛೆಯಂತೆ ವಾರಸುದಾರನಾಗಿ ನೆವಾಳಕರ ವಂಶದ ಆನಂದರಾವನನ್ನು ದತ್ತು ಪಡೆದು ಅವನಿಗೆ ‘ದಾಮೋದರರಾವ’ ಎಂದು ಹೆಸರಿಟ್ಟರು. ದತ್ತು ಪಡೆದ ನಂತರ ಕೆಲವು ಸಮಯದಲ್ಲೇ ಗಂಗಾಧರರಾವ ಮರಣ ಹೊಂದಿದರು. ಪತಿ ವಿಯೋಗದಿಂದ ರಾಣಿಲಕ್ಷ್ಮೀಬಾಯಿಯು ತನ್ನ ೧೮ನೇ ವರ್ಷದಲ್ಲೇ ವಿಧವೆಯಾದರು.
“ನನ್ನ ಝಾನ್ಸಿಯನ್ನು ನಾನು ಎಂದಿಗೂ ಕೊಡುವುದಿಲ್ಲ”
ಆಂಗ್ಲರು ಹೊರಡಿಸಿದ ಹೊಸ ಆಜ್ಞೆಗನುಸಾರ ರಾಜ್ಯದ ಉತ್ತರಾಧಿಕಾರಿಯಾಗಿ ರಾಜನ ದತ್ತು ಪುತ್ರನಿಗೆ ಮಾನ್ಯತೆ ಇರಲಿಲ್ಲ. ಈ ಆಜ್ಞೆಯ ಕುರಿತು ರಾಣಿ ಲಕ್ಷ್ಮೀಬಾಯಿಗೆ ತಿಳಿಸಲು ಆಂಗ್ಲ ಅಧಿಕಾರಿ ಮೇಜರ ಎಲಿಸ ಭೇಟಿಯಾಗಲು ಬಂದನು. ರಾಣಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಝಾನ್ಸಿಯನ್ನು ತಾವು ವಶಪಡೆಸಿಕೊಳ್ಳುವುದಾಗಿ ತಿಳಿಸಿದನು. ರಾಣಿಯು ಸಂತಾಪದಿಂದ ದುಃಖಿತಳಾದಳು ಆದರೆ ಮರುಕ್ಷಣವೇ ಸಿಂಹಿಣಿಯಂತೆ “ನನ್ನ ಝಾನ್ಸಿಯನ್ನು ನಾನು ಎಂದಿಗೂ ಕೊಡುವುದಿಲ್ಲ” ಎಂದು ಗರ್ಜಿಸಿದಳು! ಇದನ್ನು ಕೇಳಿದ ಮೇಜರ ಎಲಿಸನು ಭಯಭೀತನಾಗಿ ಬರಿಗೈಯಲ್ಲಿ ಹಿಂತಿರುಗಿದನು.
೧೮೫೭ ಸಂಗ್ರಾಮ
ಝಾನ್ಸಿ ರಾಣಿಯ ಮೂಲ ಚಿತ್ರ
ಕಾಲ್ಪಿಯ ಯುದ್ಧ
ರಾಣಿ ಲಕ್ಷ್ಮೀಬಾಯಿಯು ೨೪ ಗಂಟೆಗಳಲ್ಲಿ ೧೦೨ ಮೈಲಿಗಳಷ್ಟು ದೂರ ಕುದುರೆ ಸವಾರಿ ಮಾಡಿ ‘ಕಾಲ್ಪಿ’ ಎಂಬ ಊರು ತಲುಪಿದಳು. ಪೇಶ್ವೆಯವರು ಪರಿಸ್ಥಿತಿಯ ಗಾಂಭೀರ್ಯವನ್ನರಿತು ರಾಣಿ ಲಕ್ಷ್ಮೀಬಾಯಿಗೆ ಎಲ್ಲ ರೀತಿಯ ಸಹಾಯ ಮಾಡಲು ತೀರ್ಮಾನಿಸಿದರು. ರಾಣಿ ಕೇಳಿದಷ್ಟು ಸೈನಿಕರನ್ನು ಅವಳಿಗೆ ನೀಡಿದರು. ಮೇ ೨೨ರಂದು ಸರ್ ಹ್ಯೂ ರೋಜ್ ಕಾಲ್ಪಿಯ ಮೇಲೆ ದಾಳಿ ಮಾಡಿದನು. ಯುದ್ಧ ಪ್ರಾರಂಭವಾದದ್ದನ್ನು ನೋಡಿ ರಾಣಿ ಲಕ್ಷ್ಮೀಬಾಯಿಯು ಕೈಯಲ್ಲಿ ಕತ್ತಿ ಹಿಡಿದು ಶರವೇಗದಿಂದ ಮುನ್ನುಗ್ಗಿದಳು. ರಾಣಿಯ ಹಲ್ಲೆಯನ್ನು ನೋಡಿ ಆಂಗ್ಲ ಸೈನ್ಯವು ಕಾಲ್ಕಿತ್ತು ಹಿಂದೆ ಸರಿಯಿತು. ಈ ಪರಾಭವದಿಂದ ದಿಗ್ಭ್ರಾಂತನಾದ ಸರ್ ಹ್ಯೂ ರೋಜ್ ಅಳಿದುಳಿದ ಸೈನ್ಯವನ್ನು ಯುದ್ಧಭೂಮಿಗೆ ಕೂಡಲೇ ಕರೆಸಿದನು. ಹೊಸ ಸೈನ್ಯದ ಮುಂದೆ ದಣಿದಿದ್ದ ಕ್ರಾಂತಿಕಾರರ ಆವೇಶ ಕಡಿಮೆಯಾಯಿತು. ಮೇ ೨೪ರಂದು ಕಾಲ್ಪಿಯನ್ನು ಆಂಗ್ಲರು ತಮ್ಮ ವಶಕ್ಕೆ ಪಡೆದುಕೊಂಡರು.
ಕಾಲ್ಪಿಯಲ್ಲಿ ಪರಾಭವಗೊಂಡ ರಾವಸಾಹೇಬ ಪೇಶ್ವೆ, ಬಾಂದ್ಯದ ನವಾಬ, ತಾತ್ಯಾ ಟೋಪೆ, ಝಾನ್ಸೀಯ ರಾಣಿ ಮತ್ತು ಇತರ ಪ್ರಮುಖ ಸರದಾರರೆಲ್ಲರು ಗೊಪಾಳಪುರದಲ್ಲಿ ಒಂದು ಕಡೆ ಸೇರಿದರು. ಝಾನ್ಸಿರಾಣಿಯು ಗ್ವಾಲಿಯರನ್ನು ಆಂಗ್ಲರಿಂದ ಕಸಿದುಕೊಳ್ಳಬೇಕೆಂದು ಸೂಚನೆ ನೀಡಿದಳು. ಗ್ವಾಲಿಯರನ ರಾಜ ಶಿಂದೆ ಬ್ರಿಟಿಷರ ಅನುಯಾಯಿಯಾಗಿದ್ದನು. ರಾಣಿ ಲಕ್ಷ್ಮೀಬಾಯಿಯು ಮುಂದಾಳತ್ವ ವಹಿಸಿ ಗ್ವಾಲಿಯರನ್ನು ಗೆದ್ದು ಪೇಶ್ವೆಯವರ ಕೈಗಿಟ್ಟಳು.
ಸ್ವಾತಂತ್ರವೀರರ ಬಲಿದಾನ
ಗ್ವಾಲಿಯರನ್ನು ರಾಣಿ ಗೆದ್ದ ಸುದ್ದಿ ಸರ್ ಹ್ಯೂ ರೋಜ್ ನನ್ನು ತಲುಪಿತು. ಇನ್ನು ಸಮಯ ವ್ಯರ್ಥ ಮಾಡಿದರೆ ಆಂಗ್ಲ ಸಾಮ್ರಾಜ್ಯದ ನಾಶವಾಗುವುದೆಂದು ಅರಿತು, ಅವನು ತನ್ನ ಸೈನ್ಯವನ್ನು ಗ್ವಾಲಿಯರನತ್ತ ತಿರುಗಿಸಿದನು. ಜೂನ್ ೧೬ರಂದು ಆಂಗ್ಲರ ಸೈನ್ಯವು ಗ್ವಾಲಿಯರ ತಲುಪಿತು. ರಾಣಿ ಲಕ್ಷ್ಮೀಬಾಯಿ ಮತ್ತು ಪೇಶ್ವೆಯವರು ಸರ್ ಹ್ಯೂ ರೋಜ್ ನನ್ನು ಎದುರಿಸಲು ಸಿದ್ಧರಾದರು. ಗ್ವಾಲಿಯರನ ಪೂರ್ವ ಭಾಗವನ್ನು ರಕ್ಷಿಸುವ ಸಂಪೂರ್ಣ ಹೊಣೆ ರಾಣಿಯ ಮೇಲಿತ್ತು. ಯುದ್ಧದಲ್ಲಿ ಲಕ್ಷ್ಮೀಬಾಯಿಯ ಧೈರ್ಯ ನೋಡಿ ಸೈನಿಕರಿಗೆ ಸ್ಫೂರ್ತಿ ಸಿಕ್ಕಿತು. ರಾಣಿಯ ದಾಸಿಯರಾದ ಮಂದಾರ ಮತ್ತು ಕಾಶಿಯೂ ಪುರುಷರ ವೇಷ ಧರಿಸಿ ಯುದ್ಧ ಮಾಡಲು ಬಂದರು. ರಾಣಿಯ ಶೌರ್ಯದಿಂದಾಗಿ ಆ ದಿನ ಆಂಗ್ಲರು ಪರಾಭವ ಹೊಂದಬೇಕಾಯಿತು.
ಜೂನ್ ೧೮ ರಂದು ರಾಣೀ ಲಕ್ಷ್ಮೀಬಾಯಿಯ ಶೌರ್ಯದಿಂದ ಹತಾಶರಾದ ಆಂಗ್ಲರು ಗ್ವಾಲಿಯರನ್ನು ಎಲ್ಲ ದಿಕ್ಕುಗಳಿಂದ ಒಟ್ಟಿಗೆ ಆಕ್ರಮಿಸಿದರು. ಆಗ ರಾಣಿಯು ಆಂಗ್ಲರಿಗೆ ಶರಣಾಗದೆ ಅವರ ಕಣ್ಗಾವಲನ್ನು ಭೇದಿಸಿ ಹೊರಗೆ ಹೋಗಲು ನಿರ್ಧರಿಸಿದಳು. ಶತ್ರುಗಳ ಸೈನ್ಯವನ್ನು ಭೇದಿಸಿ ಹೊರಹೋಗುವಾಗ ಒಂದು ಹೊಳೆ ನಡುವೆ ಬಂದಿತು. ರಾಣಿಯ ಬಳಿ ಯಾವಾಗಲೂ ಇರುವ ಕುದುರೆ ‘ರಾಜರತ್ನ’ ಇರದ ಕಾರಣ ಮತ್ತೊಂದು ಕುದುರೆಯ ಜೊತೆ ರಾಣಿಯು ಯುದ್ಧಕ್ಕೆ ಇಳಿದಿದ್ದಳು. ಆ ಕುದುರೆಗೆ ಹೊಳೆ ದಾಟಲು ಸಾಧ್ಯವಾಗದೆ ಅಲ್ಲಿಯೇ ಸುತ್ತಲೂ ಶುರುಮಾಡಿತು. ಮುಂದೇನಾಗಬಹುದೆಂದು ಅರಿತ ರಾಣಿ ತನ್ನನ್ನು ಬೆಂಬತ್ತಿ ಬರುತ್ತಿದ್ದ ಸೈನ್ಯವನ್ನು ಎದುರಿಸಿದಳು. ಆಕೆಗೆ ಬಿದ್ದ ಹೊಡೆತದಿಂದಾಗಿ ರಕ್ತಸಿಕ್ತಳಾಗಿ ಕೆಳಗೆ ಬಿದ್ದಳು. ಪುರುಷರ ವೇಷ ಧರಿಸಿದ್ದ ಕಾರಣ ಸೈನಿಕರಿಗೆ ಅದು ರಾಣಿ ಎಂಬುದು ತಿಳಿಯಲಿಲ್ಲ. ಹಾಗಾಗಿ ಅವಳು ಬಿದ್ದ ತಕ್ಷಣ ಆಂಗ್ಲರು ಹೊರಟು ಹೋದರು. ರಾಣಿಯ ಸೇವಕರು ಅವಳನ್ನು ಸಮೀಪವಿದ್ದ ಗಂಗಾದಾಸರ ಮಠಕ್ಕೆ ಕರೆದುಕೊಂಡು ಹೋದರು ಮತ್ತು ಗಂಗಾಜಲವನ್ನು ನೀಡಿದರು. ತನ್ನ ಶರೀರ ಆಂಗ್ಲರ ಕೈಗೆ ಸಿಗಬಾರದೆಂಬ ಇಚ್ಛೆಯನ್ನು ವ್ಯಕ್ತಪಡಿಸಿ ರಾಣಿಯು ವೀರಮರಣವನ್ನಪ್ಪಿದಳು.
ಝಾನ್ಸಿ ರಾಣಿಯ ಸಮಾಧಿ ಸ್ಥಳದ ಚಿತ್ರ
ಜಗತ್ತಿನಾದ್ಯಂತ ಕ್ರಾಂತಿಕಾರರಿಗೆಲ್ಲ ಭಗತ ಸಿಂಗನ ತ್ಯಾಗ, ನೇತಾಜಿ ಸುಭಾಶ್ಚಂದ್ರ ಬೋಸ್ ರವರ ಸಂಘಟನಾ ಶಕ್ತಿ ಹಾಗೆಯೇ ಝಾನ್ಸಿರಾಣಿಯ ಶೌರ್ಯವು ಸ್ಫೂರ್ತಿಯನ್ನು ನೀಡಿದೆ. ಇಂತಹ ವೀರಾಂಗನೆ ರಾಣಿಲಕ್ಷ್ಮೀಬಾಯಿಯ ಚರಣಗಳಲ್ಲಿ ನಮನಗಳು.
Jay bhartiya adhyatma……..jay swarazya…..jay sanatan