ಮಕ್ಕಳ ಸಾಮಾನ್ಯವಾಗಿ ಇತರರನ್ನು ಅನುಕರಿಸುತ್ತಲೇ ಇರುತ್ತಾರೆ. ಜನ್ಮ ತಾಳಿದ ಸಮಯದಿಂದ ಅವರು ತಂದೆ ತಾಯಿಯ ಪ್ರತಿಯೊಂದು ಕೃತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆದುದರಿಂದ ಅನೇಕ ಮಕ್ಕಳು ಮಾತನಾಡುವ, ನಡೆದಾಡುವ ಮತ್ತು ವರ್ತಿಸುವ ರೀತಿಯು ಅವರ ತಂದೆ ತಾಯಿಯ ವರ್ತನೆಗೆ ಹೋಲಿಕೆಯಾಗುತ್ತದೆ. ಆದುದರಿಂದ ಪಾಲಕರು ತಮ್ಮ ಪ್ರತಿಯೊಂದು ಕೃತಿಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು, ಮತ್ತು ದೋಷಗಳು ಕಂಡು ಬಂದರೆ ಅವುಗಳನ್ನು ನಿವಾರಿಸಿಕೊಳ್ಳಬೇಕು.
೧. ಪ್ರತಿದಿವಸ ಎದ್ದ ನಂತರ ದೇವರಿಗೆ ನಮಸ್ಕರಿಸಿ, ಪ್ರಾಣಾಯಾಮ ಮಾಡಿ ಸ್ವಲ್ಪ ಸಮಯ ಧ್ಯಾನಸ್ಥರಾಗಬೇಕು.
೨. ಸ್ನಾನದ ನಂತರ ದೇವರಿಗೆ, ತಂದೆ ತಾಯಿಗೆ ಮತ್ತು ಮನೆಯಲ್ಲಿರುವ ಹಿರಿಯರಿಗೆ ನಮಸ್ಕರಿಸಬೇಕು. ಅದಲ್ಲದೆ ಹಿರಿಯರು, ಗುರುಗಳು ಅಥವಾ ಶಿಕ್ಷಕರು ಭೇಟಿಯಾದರೆ ಅವರಿಗೆ ನಮಸ್ಕಾರ ಮಾಡಬೇಕು.
೩. ಪ್ರತಿದಿವಸ ಸೂರ್ಯನಮಸ್ಕಾರವನ್ನು ಮಾಡಬೇಕು ಅಥವಾ ಆಸನ ಮತ್ತು ವ್ಯಾಯಾಮವನ್ನು ಮಾಡಬೇಕು.
೪. ಹಾಲು, ಚಹಾ, ಕಾಪಿ ಕುಡಿದ ನಂತರ ತನ್ನ ಲೋಟವನ್ನು ತೊಳೆದು ಇಡುವ ಅಭ್ಯಾಸ ಮಾಡಬೇಕು.
೫. ಹೊರಗಿನಿಂದ ಬಂದ ಮೇಲೆ ಪಾದರಕ್ಷೆಗಳನ್ನು ಹೊರಗಡೆ ವ್ಯವಸ್ಥಿತವಾಗಿ ಇಟ್ಟು, ಕಾಲುಗಳನ್ನು ತೊಳೆದು ಮನೆಯೊಳಗೆ ಪ್ರವೇಶಿಸಬೇಕು.
೬. ಬಾಳೆಹಣ್ಣು, ಕಿತ್ತಳೆ ಮುಂತಾದ ಹಣ್ಣುಗಳನ್ನು ತಿಂದರೆ, ಸಿಪ್ಪೆಗಳನ್ನು ಕೂಡಲೇ ಮನೆಯಲ್ಲಿರುವ ಕಸದ ಬುಟ್ಟಿಯಲ್ಲಿ ಹಾಕಬೇಕು.
೭. ಏನಾದರೂ ತಿನ್ನುವ ಅಥವಾ ಊಟ ಮಾಡುವ ಮುಂಚೆ ಕೈಗಳನ್ನು ತೊಳೆಯಬೇಕು.
೮. ತಿನ್ನುವ ಮುಂಚೆ ಅನ್ನಪೂರ್ಣಾ ದೇವಿಗೆ ಪ್ರಾರ್ಥನೆ ಮಾಡಿಯೇ ಪ್ರಾರಂಭಿಸಬೇಕು. ರಾತ್ರಿ ಊಟದ ನಂತರ ಹಲ್ಲು ಉಜ್ಜಿಯೇ ಮಲಗಬೇಕು.
೯. ಪುಸ್ತಕಗಳನ್ನು ಓದಿದ ನಂತರ ನಿಗದಿತ ಸ್ಥಳದಲ್ಲಿ ಇಡಬೇಕು. ಹೀಗೆ ಮಾಡಿದರೆ ಮಕ್ಕಳು ಕೂಡ ತಮ್ಮ ಆಟಿಕೆಗಳನ್ನು ಸರಿಯಾದ ಸ್ಥಳದಲ್ಲಿ ಇಡುತ್ತಾರೆ.
೧೦. ಸದಾ ವಿನಮ್ರತೆಯಿಂದ ವ್ಯವಹರಿಸಬೇಕು. ಅತಿಥಿಗಳು ಬಂದರೆ ಅವರನ್ನು ಆದರಾತಿಥ್ಯದಿಂದ ಬರಮಾಡಿಕೊಳ್ಳಬೇಕು.
೧೧. ಸಾಯಂಕಾಲ ದೇವರ ಮುಂದೆ ದೀಪವನ್ನು ಹಚ್ಚಿ ಸ್ತೋತ್ರಗಳನ್ನು ಹೇಳಬೇಕು.
೧೨. ಪಾಲಕರಿಗೆ ಸಾಮಾನ್ಯವಾಗಿ 'ಅಧ್ಯಯನವನ್ನು ಬಿಟ್ಟು ಮಕ್ಕಳು ಚಲನಚಿತ್ರ/ ದೂರದರ್ಶನ ಕಾರ್ಯಕ್ರಮಗಳನ್ನು ನೋಡಬಾರದು' ಎಂದು ಅನಿಸುತ್ತದೆ; ಹೀಗಾಗಬೇಕಾದರೆ, ಪಾಲಕರೇ ನೀವೂ ಕೂಡ ಆ ಸಮಯದಲ್ಲಿ ತಾಳ್ಮೆಯನ್ನು ಪ್ರದರ್ಶಿಸಿ, ನಿಮ್ಮ ಇಷ್ಟದ ಕಾರ್ಯಕ್ರಮಗಳನ್ನು ತ್ಯಜಿಸಬೇಕು.
ನೀವು ಮಾಡುವ ಒಳ್ಳೆಯ ಕೃತಿಗಳನ್ನು ಮಕ್ಕಳು ತಾವಾಗಿಯೇ ಅನುಸರಿಸಲು ಪ್ರಾರಂಭಿಸುತ್ತಾರೆ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳುತ್ತಾರೆ.