ರಾಷ್ಟ್ರದ ಇಂದಿನ ದಿಶಾಹೀನ ಪೀಳಿಗೆ
ನಮ್ಮ ರಾಷ್ಟ್ರದ ನೂತನ ಪೀಳಿಗೆಯು ನೈತಿಕತೆಯಿಲ್ಲದ ಪೀಳಿಗೆಯಾಗಿದೆ. ಮಕ್ಕಳ ವರ್ತನೆಯು ಅಯೋಗ್ಯವಾಗುತ್ತಿದೆ. ಮಕ್ಕಳು ಕಾರ್ಟೂನಿನಂತಹ ವಿಕೃತ ಕಾರ್ಯಕ್ರಮಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಲ್ಲಿ ಸ್ವಾಭಿಮಾನ ಮತ್ತು ರಾಷ್ಟ್ರನಿಷ್ಠೆ ಏನೂ ಉಳಿದಿಲ್ಲ. ಯಾವ ಶಿಕ್ಷಣದಿಂದ ರಾಷ್ಟ್ರದಲ್ಲಿ ರಾಷ್ಟ್ರಪ್ರೇಮಿ ಪೀಳಿಗೆಯ ನಿರ್ಮಾಣವಾಗುವುದಿಲ್ಲವೋ, ಅದು ಶಿಕ್ಷಣವೇ ಅಲ್ಲ. ಈಗ ‘ನಾನು ಮತ್ತು ನನ್ನ’ ಎಂಬ ಸಂಕುಚಿತ ಮಾನಸಿಕತೆಯ ಪೀಳಿಗೆಯು ನಿರ್ಮಾಣವಾಗಿದೆ.
ವಿದ್ಯಾರ್ಥಿಗಳ ಮನಸ್ಸನ್ನು ವ್ಯಾಪಕಗೊಳಿಸುವಂತಹ ಶಿಕ್ಷಣದ ಅವಶ್ಯಕತೆಯಿದೆ.
ಶಿಕ್ಷಕರೇ, ನಾವು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸದ್ಯದ ಶಿಕ್ಷಣದಿಂದ ಸ್ವಾರ್ಥಿ ಪೀಳಿಗೆಯ ನಿರ್ಮಾಣವಾಗುತ್ತಿದ್ದರೆ, ನಮ್ಮ ರಾಷ್ಟ್ರದ ವಿನಾಶವು ನಿಶ್ಚಿತವಾಗಿದೆ. ಇಂದು ವಿದ್ಯಾರ್ಥಿಗಳ ಮನಸ್ಸು ವ್ಯಾಪಕಗೊಳಿಸುವಂತಹ ಶಿಕ್ಷಣವನ್ನು ನೀಡಲಾಗುವುದಿಲ್ಲ. ಈ ಸ್ಥಿತಿಯನ್ನು ಬದಲಾಯಿಸದಿದ್ದರೆ, ರಾಷ್ಟ್ರದ ನಾಶದೊಂದಿಗೆ ನಮ್ಮ ವಿನಾಶವು ಖಚಿತ.
ಶಿಕ್ಷಣದ ಮಹತ್ವ
ಸಮಾಜದ ಈ ಸ್ಥಿತಿಯನ್ನು ಬದಲಾಯಿಸಲು ಒಂದೇ ಘಟಕವು ಸಮರ್ಥವಾಗಿದೆ. ಆ ಘಟಕವೆಂದರೆ ಶಿಕ್ಷಕರು. ಶಿಕ್ಷಕರೇ ರಾಷ್ಟ್ರದ ನಿಜವಾದ ಸೇನಾಪತಿಯಾಗಿದ್ದಾರೆ; ಆದುದರಿಂದ ಯಾವುದೇ ರಾಷ್ಟ್ರದ ಸೇನಾಪತಿಯು ನಾಶವಾದರೆ, ರಾಷ್ಟ್ರವು ದಿಕ್ಕಿಲ್ಲದಂತಾಗುತ್ತದೆ. ಮಿತ್ರರೇ, ಸಮಾಜದ ಇಂತಹ ಸ್ಥಿತಿ ಮತ್ತು ಮನೆಯ ಸಮಸ್ಯೆಗಳನ್ನು ನೋಡಿ ನಮಗೂ ಕಳವಳವೆನಿಸುತ್ತದೆ. ಮನಸ್ಸಿನಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ‘ಈ ಸ್ಥಿತಿ ಬದಲಾಗುವುದಿಲ್ಲ’, ಎಂದು ತಿಳಿದಾಗ ನಾವು ಅಸಹ್ಯವೆನಿಸುತ್ತದೆ.
ಕೇವಲ ಒತ್ತಡಮುಕ್ತ ಶಿಕ್ಷಕರಿಂದ ಮಾತ್ರ ಒಳ್ಳೆಯ ಪೀಳಿಗೆ ನಿರ್ಮಾಣವಾಗುವುದು
ಈ ಎಲ್ಲ ಒತ್ತಡಗಳಿಂದ ನಾವು ಮುಕ್ತರಾಗಬೇಕಾಗಿದೆ. ಶಿಕ್ಷಕರ ಒತ್ತಡದ ಪರಿಣಾಮವು ವಿದ್ಯಾರ್ಥಿಗಳ ಮೇಲಾಗುತ್ತದೆ. ಆದ್ದರಿಂದ ಈ ಎಲ್ಲ ಪ್ರಕ್ರಿಯೆಯಲ್ಲಿ ಶಿಕ್ಷಕರು ಆನಂದದಿಂದ ಇರಬೇಕು. ಶಿಕ್ಷಕರು ಆನಂದದಿಂದ ಇದ್ದರೆ, ಮಕ್ಕಳು ಆನಂದಿಯಾಗುತ್ತಾರೆ, ಇದರ ಪರಿಣಾಮವಾಗಿ ರಾಷ್ಟ್ರವೂ ಆನಂದಮಯವಾಗುತ್ತದೆ. ಹೀಗೆ ಮಾಡಿದರೆ ರಾಷ್ಟ್ರಕ್ಕೆ ನಾವು ಒತ್ತಡಮುಕ್ತ ಹಾಗೂ ಆತ್ಮವಿಶ್ವಾಸ ತುಂಬಿರುವ ಪೀಳಿಗೆಯನ್ನು ನೀಡಿ ರಾಷ್ಟ್ರರಕ್ಷಣೆ ಮಾಡಬಹುದು.
ಶಿಕ್ಷಕರೇ, ಒತ್ತಡಮುಕ್ತ ಶಿಕ್ಷಣವನ್ನು ಹೇಗೆ ಮಾಡುವಿರಿ?
ಒತ್ತಡಮುಕ್ತರಾಗಲು ನಾವು ಶಿಕ್ಷಣದಲ್ಲಿ ಈ ಕೆಳಗಿನ ಅಂಶಗಳನ್ನು ಉಪಯೋಗಿಸಬೇಕು. ಈ ಎಲ್ಲ ಅಂಶಗಳನ್ನು ಕೃತಿಯಲ್ಲಿ ಹೇಗೆ ತರಬಹುದು, ಎಂಬುದನ್ನು ನೋಡೋಣ.
ನಕಾರಾತ್ಮಕವಾಗಿ ಮಾತನಾಡಬಾರದು : ತರಗತಿಯನ್ನು ಪ್ರವೇಶಿಸಿದ ನಂತರ ಶಿಕ್ಷಕರ ಬಾಯಿಯಲ್ಲಿ ಒಂದೇ ಒಂದು ನಕಾರಾತ್ಮಕ ಶಬ್ದವೂ ಬರಬಾರದು. ಕೆಲವು ಶಿಕ್ಷಕರು ಓರ್ವ ವಿದ್ಯಾರ್ಥಿಗೆ ‘ನೀನು ಏನೂ ಉಪಯೋಗವಿಲ್ಲ. ನಿನ್ನಿಂದ ಏನೂ ಆಗುವುದಿಲ್ಲ. ನೀನು ತಂದೆ-ತಾಯಿಯವರಿಗೆ ತೊಂದರೆ ನೀಡಲು ಬಂದಿರುವೆ. ನಿನ್ನಿಂದಾಗಿ ಸಂಪೂರ್ಣ ತರಗತಿಗೆ ತೊಂದರೆಯಾಗುತ್ತದೆ' ಎಂದೆಲ್ಲ ಬೈದು ಹೀಯಾಳಿಸುತ್ತಾರೆ, ಆದರೆ ಹೀಗೆ ಹೇಳಬಾರದು. ಈ ವಾಕ್ಯಗಳು ಮಕ್ಕಳ ಅಂತರ್ಮನಸ್ಸನ್ನು ನೋಯಿಸುತ್ತವೆ. ಹೀಗೆ ಮಾತನಾಡುವುದರಿಂದ ನಮ್ಮ ಮನಸ್ಸಿನಲ್ಲಿಯೂ ಒತ್ತಡ ಉಂಟಾಗುತ್ತದೆ. ಬಿಂಬ-ಪ್ರತಿಬಿಂಬ ಎಂಬ ತತ್ತ್ವದಂತೆ ಆ ವಿದ್ಯಾರ್ಥಿಗೆ ಎಷ್ಟು ದುಃಖವಾಗುತ್ತದೆಯೋ, ಅದಕ್ಕಿಂತಲೂ ಹೆಚ್ಚಿನ ದುಃಖ ನಮ್ಮ ಮನಸ್ಸಿಗೂ ಆಗುತ್ತದೆ. ‘ಈ ಒತ್ತಡದ ಬೇರು (ಮೂಲ) ನನ್ನಲ್ಲಿಯೇ ಇದೆ’; ಏಕೆಂದರೆ ನಾನು ನಕಾರಾತ್ಮಕವಾಗಿ ಮಾತನಾಡಿದೆ. ನನ್ನಲ್ಲಿರುವ ನಕಾರಾತ್ಮಕ ವಿಚಾರಗಳು ನನ್ನನ್ನೇ ದುಃಖಿ ಮಾಡಿದವು, ಅಂದರೆ ನಾನು ಸದಾ ಸಕಾರಾತ್ಮಕವಾಗಿಯೇ ಮಾತನಾಡಬೇಕು', ಎಂದು ಪ್ರತಿಯೊಬ್ಬ ಶಿಕ್ಷಕರೂ ವಿಚಾರ ಮಾಡಬೇಕು.
ತುಲನೆ ಮಾಡಬೇಡಿ : ಕೆಲವು ಶಿಕ್ಷಕರು ಮಕ್ಕಳ ತುಲನೆ ಮಾಡುತ್ತಾರೆ, ಉದಾ. ನಾವು ಕಲಿಯುವುದರಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ‘ನೋಡು, ಅವನು ಹೇಗೆ ಅಧ್ಯಯನ ಮಾಡುತ್ತಾನೆ. ನಿನಗೇಕೆ ಆಗುವುದಿಲ್ಲ?’ ಎಂದು ಹೇಳುತ್ತೇವೆ. ಹೀಗೆ ತುಲನೆ ಮಾಡುವುದಕ್ಕಿಂತಲೂ ಉತ್ತಮವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಯನ್ನು ಹೊಗಳಬೇಕು ಹಾಗೂ ಅವನು ಹೇಗೆ ಅಧ್ಯಯನ ಮಾಡುತ್ತಾನೆ, ಎಂಬುದನ್ನು ಹೇಳಿ 'ನೀನೂ ಹಾಗೆಯೇ ಮಾಡಲು ಪ್ರಯತ್ನಿಸಬೇಕು' ಎಂದು ಹೇಳಿ. ಯಾವ ಮಕ್ಕಳು ಅಧ್ಯಯನ ಮಾಡುವುದಿಲ್ಲವೋ, ಅವರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಅವರಿಗೆ ಪರಿಹಾರವನ್ನು ಸೂಚಿಸಬೇಕು.
ಕಲಿಯುವ ಭೂಮಿಕೆಯಲ್ಲಿರಬೇಕು : ಯಾರು ನಿರಂತರವಾಗಿ ಕಲಿಯುವ ಭೂಮಿಕೆಯಲ್ಲಿರುತ್ತಾರೆಯೋ, ಅವರೇ ಉತ್ತಮ ಶಿಕ್ಷಕರಾಗುತ್ತಾರೆ. ನಾವು ಕಲಿಯುವ ಭೂಮಿಕೆಯಲ್ಲಿದ್ದು, ಹೊಸ ಹೊಸ ವಿಚಾರಗಳನ್ನು ಕಲಿತು, ಕಲಿಸಬೇಕು.
ವಿದ್ಯಾರ್ಥಿಗಳೊಂದಿಗೆ ಅಧಿಕಾರವಾಣಿಯಿಂದ ಮಾತನಾಡುವುದನ್ನು ತಡೆಯಿರಿ : ನಾವು ಯಾವುದೇ ವಿದ್ಯಾರ್ಥಿಗೆ ‘ನಾನು ಶಿಕ್ಷಕನಾಗಿದ್ದೇನೆ’ ಎಂದು ಅಧಿಕಾರವಾಣಿಯಿಂದ ಹೇಳುವುದಕ್ಕಿಂತಲೂ ಪ್ರೀತಿಯಿಂದ ಹೇಳಿದರೆ ನಮಗೆ ಆನಂದ ದೊರೆಯುತ್ತದೆ. ಆದ್ದರಿಂದ ಶಿಕ್ಷಕರ ಮಾತಿನಲ್ಲಿ ಅಧಿಕಾರವಾಣಿ ಬೇಡವೇ ಬೇಡ.
ವಿದ್ಯಾರ್ಥಿಗಳ ಮಿತ್ರರಾಗಿ ಅವರಿಗೆ ಕಲಿಸಿರಿ : ನಾವು ಮಕ್ಕಳೊಂದಿಗೆ ಅವರ ಮಿತ್ರರಂತೆ ಅಲ್ಲ, ಅವರ ಶಿಕ್ಷಕರಾಗಿ ಮಾತನಾಡುತ್ತೇವೆ. ಇದರಿಂದ ಕಲಿಸುವಾಗ ನಮ್ಮ ಮನಸ್ಸಿನಲ್ಲಿ ಬಹಳಷ್ಟು ಒತ್ತಡ ಉಂಟಾಗುತ್ತದೆ. ಶಿಕ್ಷಕರು ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವಾಗ ಮನಃಪೂರ್ವಕವಾಗಿ ಐದನೆಯ ತರಗತಿಯ ವಿದ್ಯಾರ್ಥಿಯಾಗಿ ಕಲಿಸಿದರೆ, ಅವರಿಗೆ ಆನಂದವಾಗುತ್ತದೆ.
ವಿದ್ಯಾರ್ಥಿಗಳ ಪಾಲಕರಾಗಿ ಅವರಿಗೆ ಕಲಿಸಿರಿ : ನಮಗೆ ನಮ್ಮ ಮನೆಯ ಮಕ್ಕಳ ವಿಷಯದಲ್ಲಿ ವಿಶೇಷ ಪ್ರೇಮವಿದೆ. ನಮಗೆ ‘ಅವರು ಚೆನ್ನಾಗಿ ಕಲಿಯಬೇಕು’ ಎಂದು ಅನಿಸುತ್ತದೆ. ವಿದ್ಯಾರ್ಥಿಗಳಿಗೂ ಅಷ್ಟೇ ಪ್ರೀತಿಯಿಂದ ಕಲಿಸಿದರೆ ಶಿಕ್ಷಕರು ಒತ್ತಡಮುಕ್ತರಾಗಿ ಅವರ ಮುಖದಲ್ಲಿ ಆನಂದವು ಎದ್ದು ಕಾಣುತ್ತದೆ. ಮನೆಯ ಮಕ್ಕಳನ್ನು ಪ್ರೀತಿಸಿ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೇವಲ ನೌಕರಿಯೆಂದು ಕಲಿಸುವ ಮಾನಸಿಕತೆಯಿದ್ದರೆ ಅಂತಹ ಶಿಕ್ಷಕನಿಗೆ ಒತ್ತಡಮುಕ್ತ ಅಧ್ಯಾಪನವು ಒಗ್ಗಿಕೊಳ್ಳುವುದಿಲ್ಲ. ಯಾವ ದೇಶದಲ್ಲಿ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳ ತಾಯಿಯಾಗುವರೋ, ಆ ದೇಶವು ಸಂಪೂರ್ಣ ವಿಕಸಿತವಾಗುತ್ತದೆ.
ವಿದ್ಯಾರ್ಥಿಗಳಿಂದ ಅಪೇಕ್ಷೆಗಳನ್ನು ಇಟ್ಟುಕೊಳ್ಳಬೇಡಿ: ಕೆಲವೊಮ್ಮೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಗಣಿತದ ೧೦ ಸಮಸ್ಯೆಗಳನ್ನು ಬಿಡಿಸಲು ಹೇಳುತ್ತಾರೆ. ವಿದ್ಯಾರ್ಥಿಗಳು ಅದನ್ನು ಬಿಡಿಸದಿದ್ದರೆ ಅವರು ಜೋರಾಗಿ ಗದರಿಸುತ್ತಾರೆ ಅಥವಾ ಹೊಡೆಯುತ್ತಾರೆ. ಹೀಗೆ ಮಾಡುವುದರಿಂದ ಮೊದಲು ಶಿಕ್ಷಕರ ಮನಸ್ಸಿನಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ಹೀಗೆ ಮಾಡುವುದಕ್ಕಿಂತಲೂ ಶಾಂತ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಗಣಿತದ ಸಮಸ್ಯೆಗಳನ್ನು ಬಿಡಿಸುವ ಪದ್ಧತಿಯನ್ನು ತಿಳಿಸಿ ಹೇಳಬೇಕು. ಅಪೇಕ್ಷೆಯನ್ನಿಟ್ಟುಕೊಳ್ಳುವ ಶಿಕ್ಷಕರು ಶಾಲೆಯಲ್ಲಿ ಹಾಗೂ ತಮ್ಮ ಕುಟುಂಬದಲ್ಲಿಯೂ ಒತ್ತಡಗ್ರಸ್ತರಾಗಿರುತ್ತಾರೆ. ನಾವು ಅಪೇಕ್ಷೆಯಿಲ್ಲದ ಅಧ್ಯಾಪನವನ್ನು ಮಾಡಬೇಕು.
ಕರ್ತೃತ್ವವನ್ನು ತಮ್ಮ ಬಳಿ ಇಟ್ಟುಕೊಳ್ಳಬೇಡಿರಿ : ಕರ್ತೃತ್ವವನ್ನು ತಮ್ಮ ಬಳಿ ಇಟ್ಟುಕೊಳ್ಳುವ ಶಿಕ್ಷಕರು ಯಾವಾಗಲೂ ಒತ್ತಡಗ್ರಸ್ತರಾಗಿರುತ್ತಾರೆ. ನಮಗೆ ಒತ್ತಡಮುಕ್ತವಾಗಿ ಕಲಿಸಬೇಕಿದ್ದರೆ, ಪ್ರತಿಯೊಂದು ಕೃತಿಯಾದ ನಂತರ ಆ ಕೃತಿಯನ್ನು ದೇವರಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಯಾವುದೇ ಕೃತಿಯನ್ನು ಮಾಡಿದ ಒತ್ತಡವು ಮನಸ್ಸಿನಲ್ಲಿ ಇರುವುದಿಲ್ಲ.
ತಮ್ಮ ಸ್ವಂತ ಮನಸ್ಸಿನ ಅಭ್ಯಾಸ ಮಾಡಿರಿ : ಕೆಲವೊಮ್ಮೆ ಯಾವುದಾದರೊಂದು ತರಗತಿಯ ವಿದ್ಯಾರ್ಥಿಗಳ ವಿಷಯದಲ್ಲಿ ’ಆ ಮಕ್ಕಳು ಅಧ್ಯಯನ ಮಾಡುವುದಿಲ್ಲ’ ಎಂದು ಕೋಪ ಬರುತ್ತದೆ. ’ಮಕ್ಕಳು ಅಧ್ಯಯನ ಮಾಡದಿರುವುದರಿಂದ ಕೋಪ ಬರುತ್ತದೆ ಎಂದೇನೂ ಇಲ್ಲ. ಕೋಪವೆಂಬುದು ನಮ್ಮಲ್ಲಿರುವ ಸ್ವಭಾವದೋಷವಾಗಿದೆ. ’ತರಗತಿಯಲ್ಲಿರುವ ವಿದ್ಯಾರ್ಥಿಗಳು ಬದಲಾದರೆ ನಾನು ಆನಂದದಲ್ಲಿರುತ್ತೇನೆ’ ಎಂಬ ವಿಚಾರ ಮಾಡಬಾರದು. ’ಯಾವಾಗ ನನ್ನಲ್ಲಿರುವ ‘ಕೋಪ’ ಎಂಬ ಸ್ವಭಾವದೋಷವು ದೂರವಾಗುವುದೋ, ಆಗ ನಾನು ಒತ್ತಡಮುಕ್ತನಾಗಿ ನನಗೆ ಆನಂದ ದೊರೆಯುತ್ತದೆ’ ಎಂಬ ವಿಚಾರ ಮಾಡಬೇಕು.
ತಮ್ಮಲ್ಲಿರುವ ಸ್ವಭಾವದೋಷಗಳ ಅಭ್ಯಾಸ ಮಾಡಿ ಮಕ್ಕಳಲ್ಲಿ ಇರುವ ಗುಣಗಳನ್ನು ನೋಡಿರಿ : ಇತರರ ದೋಷಗಳ ಬಗ್ಗೆ ಚಿಂತನೆ ಮಾಡಿದರೆ ನಾವು ಎಂದಿಗೂ ಒತ್ತಡಮುಕ್ತರಾಗಲು ಸಾಧ್ಯವಿಲ್ಲ; ಏಕೆಂದರೆ ಹಾಗೆ ಮಾಡುವುದರಿಂದ ಮನಸ್ಸಿನ ಒತ್ತಡ ಇನ್ನೂ ಹೆಚ್ಚಾಗುತ್ತದೆ. ಅದರ ಬದಲಾಗಿ ಇತರರ ಗುಣಗಳ ಅಧ್ಯಯನ ಮಾಡಿದರೆ ನಮಗೆ ಆನಂದವಾಗುತ್ತದೆ. ನಾವು ಶಾಲೆಗೆ ಹೋದಾಗ ವಿದ್ಯಾರ್ಥಿ, ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರ ಗುಣಗಳನ್ನು ನೋಡಬೇಕು. ತಮ್ಮಲ್ಲಿರುವ ಸ್ವಭಾವದೋಷಗಳನ್ನು ಗುರುತಿಸಿ ಅವುಗಳ ಅಭ್ಯಾಸ ಮಾಡಬೇಕು. ಅವುಗಳನ್ನು ದೂರಗೊಳಿಸಿದರೆ, ನಾವು ಒತ್ತಡಮುಕ್ತರಾಗುತ್ತೇವೆ.
ಸ್ವತಃ ಬದಲಾಗಿರಿ : ನಾವು ವ್ಯಕ್ತಿ ಮತ್ತು ಅವರ ಪ್ರಕೃತಿಯನ್ನು ಬದಲಾಯಿಸಲು ಪ್ರಯತ್ನಿಸಬಾರದು; ಏಕೆಂದರೆ ಅದು ನಮ್ಮ ಕೈಯಲ್ಲಿ ಇಲ್ಲ, ಉದಾ. ಶಾಲೆಯ ಮುಖ್ಯೋಪಾಧ್ಯಾಯರ ವಿಚಿತ್ರವಾಗಿ ವರ್ತಿಸುತ್ತಿದ್ದರೆ ಅಥವಾ ಕೋಪದಿಂದ ಮಾತನಾಡುತ್ತಿದ್ದರೆ, ಅವರಲ್ಲಿ ಬದಲಾವಣೆ ಮಾಡುವುದು ನಮ್ಮ ಕೈಯಲ್ಲಿಲ್ಲ. ನಾನು ಸ್ವತಃ ಬದಲಾಗಿ ಅವರ ಪ್ರಕೃತಿಯೊಂದಿಗೆ ಹೊಂದಿಕೊಳ್ಳಲು ಕಲಿಯಬೇಕು. ಹಾಗೆ ಮಾಡದಿದ್ದರೆ, ನಮ್ಮ ಕೌಟುಂಬಿಕ ಜೀವನ ಹಾಗೂ ಅಧ್ಯಾಪನದ ಮೇಲೆ ಪರಿಣಾಮವಾಗುತ್ತದೆ ಹಾಗೂ ನಾವು ಯಾವಾಗಲೂ ಒತ್ತಡದಲ್ಲಿ ಇರುತ್ತೇವೆ.
ಸತತವಾಗಿ ವರ್ತಮಾನಕಾಲದಲ್ಲಿರಿ : ಶಿಕ್ಷಕರು ಮನೆಯಲ್ಲಿ ನಡೆದಿರುವ ಪ್ರಸಂಗಗಳನ್ನು ಮನಸ್ಸಿನಲ್ಲಿಟ್ಟುಕೊಂಡು ತರಗತಿಗೆ ಹೋದರೆ ಅವರು ವ್ಯವಸ್ಥಿತವಾಗಿ ಕಲಿಸಲು ಸಾಧ್ಯವಿಲ್ಲ. ಅವರಿಗೆ ನಾವು ಕಲಿಸುತ್ತೇವೆ, ಎಂದು ನಮ್ಮ ಮನಸ್ಸಿನಲ್ಲಿದ್ದರೂ ಮಕ್ಕಳು ಕಲಿಯುತ್ತಿದ್ದಾರೆ ಎಂದಿರುವುದಿಲ್ಲ. ಶಿಕ್ಷಕರು ಯಾವಾಗಲೂ ವರ್ತಮಾನ ಕಾಲದಲ್ಲಿ ಇರಲು ಕಲಿಯಬೇಕು. ಹಾಗೆ ಮಾಡಿದರೆ ಮಾತ್ರ ನಮ್ಮ ಅಧ್ಯಾಪನ ಒತ್ತಡಮುಕ್ತವಾಗಬಹುದು.
ಮೇಲಿನ ಎಲ್ಲ ವಿಷಯಗಳನ್ನು ಕೇಳಿದಾಗ ನಿಮಗೆ ‘ಇದನ್ನೆಲ್ಲ ಮಾಡಲು ನಮ್ಮಿಂದ ಸಾಧ್ಯವೇ?’ ಎಂದು ಅನಿಸಬಹುದು. ಸ್ವಭಾವದೋಷ ಮತ್ತು ಅಹಂ-ನಿರ್ಮೂಲನೆಯ ಪ್ರಕ್ರಿಯೆಯನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ. ಹೀಗೆ ಮಾಡಿ ನಾವು ನಮ್ಮಲ್ಲಿ ಬದಲಾವಣೆ ಮಾಡಿಕೊಂಡರೆ ನಾವು ಒತ್ತಡಮುಕ್ತ ಅಧ್ಯಾಪನ ಮಾಡಲು ಸಾಧ್ಯವಾಗುತ್ತದೆ.
– ಶ್ರೀ. ರಾಜೇಂದ್ರ ಪಾವಸಕರ (ಗುರೂಜಿ), ಪನವೇಲ